ಬೆಂಗಳೂರು: ಶಾಲಾ– ಕಾಲೇಜು ಪಠ್ಯಕ್ರಮಗಳಲ್ಲಿ ಮಾಹಿತಿ ಹಕ್ಕು ಕಾಯ್ದೆ ಕುರಿತು ಪಠ್ಯವನ್ನು ಸೇರಿಸಬೇಕು ಎಂದು ರಾಜ್ಯ ಮಾಹಿತಿ ಹಕ್ಕು ಆಯೋಗವು, ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಮಾಹಿತಿ ಹಕ್ಕು ಕಾಯ್ದೆ ಕುರಿತು ಮುಂದಿನ ಸೋಮವಾರ (ಜುಲೈ 14) ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಈ ಶಿಫಾರಸುಗಳನ್ನು ಇರಿಸಿ, ಚರ್ಚಿಸಬೇಕು ಎಂದು ರಾಜ್ಯ ಮಾಹಿತಿ ಆಯುಕ್ತರು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪ್ರಸ್ತಾವ ಸಲ್ಲಿಸಿದ್ದಾರೆ.
ಮಾಹಿತಿ ಹಕ್ಕು ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಸಲುವಾಗಿ, ಕಾಯ್ದೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ಕಾಯ್ದೆ ಜಾರಿಯಾಗಿ 20 ವರ್ಷಗಳಾದರೂ, ಅಧಿಕಾರಿ ವರ್ಗದಲ್ಲಿ ಮಾಹಿತಿ ಹಕ್ಕಿನ ಬಗ್ಗೆ ಅಸಡ್ಡೆ ಇದೆ. ಇದನ್ನು ನಿವಾರಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಆಯೋಗವು ಹೇಳಿದೆ.
ಸರ್ಕಾರದ ಅಧಿಕಾರಿ ಮತ್ತು ನೌಕರರಿಗೆ ಇತರ ವಿಚಾರಗಳ ಬಗ್ಗೆ ತರಬೇತಿ ನೀಡುತ್ತಿರುವಂತೆ, ಮಾಹಿತಿ ಹಕ್ಕು ಕಾಯ್ದೆಯ ಬಗ್ಗೆಯೂ ತರಬೇತಿ ಒದಗಿಸಬೇಕು. ಮಾಹಿತಿ ನೀಡದ ಅಧಿಕಾರಿಗಳಿಗೆ ಮಾತ್ರವೇ ಈಗ ದಂಡ ವಿಧಿಸಲಾಗುತ್ತಿದೆ. ಪ್ರಥಮ ಮೇಲ್ಮನವಿಗಳನ್ನು ವಿಲೇವಾರಿ ಮಾಡದ, ಮೇಲ್ಮನವಿ ಪ್ರಾಧಿಕಾರಗಳಿಗೂ ದಂಡ ವಿಧಿಸುವ ಸಂಬಂಧ ಸುತ್ತೋಲೆ ಹೊರಡಿಸಬೇಕು ಎಂದು ಆಯೋಗ ಶಿಫಾರಸು ಮಾಡಿದೆ.
ಇತರ ಶಿಫಾರಸು:
*ಮಾಹಿತಿ ಆಯುಕ್ತರಿಗೆ ಮತ್ತು ನ್ಯಾಯಪೀಠಗಳಿಗೆ ಗನ್‌ಮ್ಯಾನ್ ಒದಗಿಸಬೇಕು
*ಬಾಡಿಗೆ ಕಟ್ಟಡದಲ್ಲಿರುವ ನ್ಯಾಯಪೀಠಗಳಿಗೆ ಸ್ವಂತ ಕಟ್ಟಡ ಒದಗಿಸಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.