ADVERTISEMENT

ಒ.ಸಿಗೆ ವಿನಾಯಿತಿ ನೀಡಿದ್ದರೂ ಗ್ರಾಮೀಣರಿಗಿಲ್ಲ ವಿದ್ಯುತ್ ಭಾಗ್ಯ

ಎ.ಎಂ.ಸುರೇಶ
Published 1 ಮಾರ್ಚ್ 2026, 22:17 IST
Last Updated 1 ಮಾರ್ಚ್ 2026, 22:17 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಪ್ರಜಾವಾಣಿ ಚಿತ್ರ

ಬೆಂಗಳೂರು: ನಕ್ಷೆ ಮಂಜೂರಾತಿ ಇಲ್ಲದೆ 1,200 ಚದರ ಅಡಿ ವಿಸ್ತೀರ್ಣದ ಒಳಗಿನ ನಿವೇಶನಗಳಲ್ಲಿ ನಿರ್ಮಿಸಿರುವ ವಸತಿ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣಪತ್ರ (ಒ.ಸಿ) ಪಡೆಯುವುದರಿಂದ ವಿನಾಯಿತಿ ನೀಡಿದ್ದರೂ, ಗ್ರಾಮೀಣ ಭಾಗದಲ್ಲಿ ವಿದ್ಯುತ್‌ ಹಾಗೂ ನೀರಿನ ಸಂಪರ್ಕ ಪಡೆಯಲು ಸಾಧ್ಯವಾಗುತ್ತಿಲ್ಲ. 

ADVERTISEMENT

ಸರ್ಕಾರದ ಆದೇಶದಲ್ಲಿ 1,200 ಚದರ ಅಡಿ ವಿಸ್ತೀರ್ಣದ ಒಳಗಿನ ನಿವೇಶನಗಳಲ್ಲಿ ನಿರ್ಮಿಸಿರುವ ವಸತಿ ಕಟ್ಟಡಗಳಿಗೆ ಮಾತ್ರ ಅನ್ವಯವಾಗಲಿದೆ ಎಂದು ತಿಳಿಸಲಾಗಿದೆ. ಆದರೆ, ಗ್ರಾಮೀಣ ಭಾಗದ ಬಹುತೇಕ ಕಡೆ ಸರ್ಕಾರ ನಿಗದಿಪಡಿಸಿರುವ ಮಿತಿಯ ಒಳಗೆ ಮನೆಗಳನ್ನು ನಿರ್ಮಿಸಿಲ್ಲ. ಹೀಗಾಗಿ ವಿದ್ಯುತ್‌ ಸಂಪರ್ಕ ಪಡೆಯಲು ಸಾಧ್ಯ ವಾಗುತ್ತಿಲ್ಲ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ಮಲೆನಾಡು ಹಾಗೂ ಕರಾವಳಿ ಭಾಗದ ತೋಟಗಳಲ್ಲಿ ಅಥವಾ 5ರಿಂದ 10 ಗುಂಟೆ ಜಾಗದಲ್ಲಿ ಮನೆಗಳನ್ನು ನಿರ್ಮಿಸಿಕೊಳ್ಳ ಲಾಗುತ್ತಿದೆ. 30X40 ಅಡಿ ಎಂದು ಲೆಕ್ಕಾಚಾರ ಮಾಡಿ ಮನೆಗಳನ್ನು ನಿರ್ಮಿಸುವ ಪದ್ಧತಿ ಆ ಭಾಗದಲ್ಲಿ ಇಲ್ಲ. ಇದನ್ನು ಅರ್ಥ ಮಾಡಿಕೊಳ್ಳದೆ, ನಗರ ಪ್ರದೇಶದಲ್ಲಿ ವಿಧಿಸಿರುವ ಷರತ್ತುಗಳನ್ನೇ ಗ್ರಾಮೀಣ ಭಾಗಕ್ಕೂ ವಿಸ್ತರಿಸಿರುವುದು ಸರಿಯಲ್ಲ’ ಎಂದು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ನಾಗರಿಕರೊ ಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ನಗರ ಪ್ರದೇಶದ ಬಡಾವಣೆಗಳಲ್ಲಿ ಯೋಜಿತ ರೀತಿಯಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿರುತ್ತಾರೆ. ಆದರೆ, ಗ್ರಾಮೀಣ ಭಾಗದ ಬಹುತೇಕ ಕಡೆ ಇದಕ್ಕೆ ತದ್ವಿರುದ್ಧವಾಗಿ ಮನೆಗಳನ್ನು ನಿರ್ಮಿಸಿದ್ದಾರೆ. ತೋಟ ಅಥವಾ ವಿಶಾಲವಾದ ಜಾಗದಲ್ಲಿ ಮನೆಗಳನ್ನು ನಿರ್ಮಿಸಲಾಗಿದೆ. ದೊಡ್ಡದಾದ ಮನೆಯ ಒಂದು ಕಡೆ ಕುಟುಂಬ ವಾಸವಿದ್ದರೆ, ಉಳಿದ ಕಡೆ ಧಾನ್ಯ ಸಂಗ್ರಹ ಕೊಠಡಿ, ದನದ ಕೊಟ್ಟಿಗೆ, ಕೃಷಿಗೆ ಬಳಸುವ ಉಪಕರಣಗಳ ದಾಸ್ತಾನು ಕೊಠಡಿ... ಹೀಗೆ ಬೇರೆ ಬೇರೆ ಕೊಠಡಿಗಳು ಇರುತ್ತವೆ.

‘ಯಾರ ಬಳಿಯೂ ಉತ್ತರ ಇಲ್ಲ’

‘ನಗರ ಪ್ರದೇಶದಲ್ಲಿ 30X40 ಅಡಿಗಿಂತ ಹೆಚ್ಚಿನ ವಿಸ್ತೀರ್ಣದಲ್ಲಿ ನಿರ್ಮಿಸಿರುವ ಮನೆಗಳ ಸಂಖ್ಯೆ ಹೆಚ್ಚಾಗಿದೆ. ಅಲ್ಲದೆ ವಾಣಿಜ್ಯ ಹಾಗೂ ಕೈಗಾರಿಕಾ ಉದ್ದೇಶಕ್ಕೆ ನಿರ್ಮಿಸಿರುವ ಕಟ್ಟಡಗಳು, ಪಿ.ಜಿಗಳು ಹೆಚ್ಚಾಗಿವೆ. ಇವುಗಳಿಗೆ ಯಾವಾಗ ವಿದ್ಯುತ್‌ ಸಂಪರ್ಕ ನೀಡಲಾಗುತ್ತದೆ ಎಂಬ ಪ್ರಶ್ನೆಗೆ ಯಾರೂ ಸ್ಪಷ್ಟ ಉತ್ತರ ನೀಡುತ್ತಿಲ್ಲ’ ಎಂದು ವಿದ್ಯುತ್‌ ಗುತ್ತಿಗೆದಾರರ ಸಂಘದ ಪದಾಧಿಕಾರಿ ಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು

‘2025ರ ಡಿಸೆಂಬರ್‌ನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡಿದಾಗ, ವಿಧಾನ ಮಂಡಲದ ಅಧಿವೇಶನ ಮುಗಿಯಲಿ ನೋಡೋಣ ಎಂದಿದ್ದರು. ಆ ಬಳಿಕ ಈ ಬಗ್ಗೆ ಚಕಾರ ಎತ್ತಿಲ್ಲ. ಅಧಿಕಾರಿಗಳನ್ನು ಕೇಳಿದರೆ ನಮಗೆ ಏನೂ ಗೊತ್ತಿಲ್ಲ. ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕು ಎನ್ನುತ್ತಾರೆ. ಯಾರೂ ಸ್ಪಷ್ಟ ಉತ್ತರ ನೀಡುತ್ತಿಲ್ಲ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.