ADVERTISEMENT

ಆಪರೇಷನ್‌ ಗಂಗಾ: ತಾಯ್ನಾಡಿಗೆ ಮರಳಿದ 31 ವಿದ್ಯಾರ್ಥಿಗಳು

ಕೀವ್‌, ಹಾರ್ಕಿವ್‌ನಿಂದ ಹೊರಬರುವುದೇ ಸವಾಲು: ವಿದ್ಯಾರ್ಥಿನಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2022, 2:39 IST
Last Updated 3 ಮಾರ್ಚ್ 2022, 2:39 IST
ಅಮ್ಮನ್ನು ಸಮಾಧಾನಪಡಿಸುತ್ತಿರುವ ಬೆಂಗಳೂರಿನ ಧನಂಜಯ್‌ ಸಾಳಂಕೆ
ಅಮ್ಮನ್ನು ಸಮಾಧಾನಪಡಿಸುತ್ತಿರುವ ಬೆಂಗಳೂರಿನ ಧನಂಜಯ್‌ ಸಾಳಂಕೆ   

ದೇವನಹಳ್ಳಿ: ಉಕ್ರೇನ್‌ನಿಂದ ‘ಆಪರೇಷನ್‌ ಗಂಗಾ’ ಕಾರ್ಯಾಚರಣೆ ಮೂಲಕ ಬುಧವಾರ ಕರ್ನಾಟಕದ 31 ವೈದ್ಯಕೀಯ ವಿದ್ಯಾರ್ಥಿಗಳು ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಪೋಷಕರ ಕಣ್ಣಾಲಿಗಳು ಒದ್ದೆಯಾದವು.

ಮಂಗಳವಾರ ರಾತ್ರಿ ದೆಹಲಿಯ ಕರ್ನಾಟಕ ಭವನದಲ್ಲಿ ತಂಗಿದ್ದ ಈ ವಿದ್ಯಾರ್ಥಿಗಳು ಬೆಂಗಳೂರಿಗೆ ಆಗ ಮಿಸಿದರು. ತಂದೆ, ತಾಯಿ ಕಂಡಾಕ್ಷಣ ಓಡೋಡಿ ಬಂದು ಬಿಗಿದಪ್ಪಿ ಭಾವುಕ ರಾದರು. ಫೆ. 27ರಿಂದ ಬುಧವಾರದವರೆಗೆ 86 ವಿದ್ಯಾರ್ಥಿಗಳು ಮರಳಿದ್ದಾರೆ.

‘ಭಾರತಕ್ಕೆ ವಾಪಸ್‌ ಬರಲು ಫೆ. 24ರಂದೇ ಟಿಕೆಟ್‌ ಬುಕ್‌ ಮಾಡಿದ್ದೆವು. ಆದರೆ, ಅಂದೇ ರಷ್ಯಾದ ಸೈನ್ಯ ಕೀವ್‌ನ ವಿಮಾನ ನಿಲ್ದಾಣವನ್ನು ಸ್ಫೋಟಿಸಿತು. ಜೀವಂತವಾಗಿ ತಾಯ್ನಾಡಿಗೆ ಬರುತ್ತೇವೆ ಎಂಬ ನಂಬಿಕೆಯೇ ಇರಲಿಲ್ಲ’ ಎಂದು ನೆಲಮಂಗಲ ತಾಲ್ಲೂಕಿನ ಸೊಂಡೆಕೊಪ್ಪ ಗ್ರಾಮದ ವೈದ್ಯಕೀಯ ವಿದ್ಯಾರ್ಥಿನಿ ಭಾವನಾ ರಾಜಣ್ಣ ‘ಪ್ರಜಾವಾಣಿ’ಗೆ ಹೇಳಿದರು.

ADVERTISEMENT

‘ಭಾರತೀಯ ರಾಯಭಾರಿ ಕಚೇರಿ ಯಲ್ಲಿ ಆಶ್ರಯ ಪಡೆದಿದ್ದೆವು. ರೈಲಿನ ಮೂಲಕ ಕೀವ್‌ನಿಂದ ಹೊರಬರ ಬೇಕಿತ್ತು. ಆದರೆ, ಕೀವ್‌ ಮತ್ತು ಹಾರ್ಕಿವ್‌ನಿಂದ ಹೊರಬರಲು ಕಷ್ಟ ಕರವಾದ ಸ್ಥಿತಿಯಿದೆ. ಕಾಲೇಜಿನ ಆಡಳಿತ ಮಂಡಳಿಯವರು ಬಸ್‌ ಮೂಲಕ ಗಡಿಯ ಭಾಗಕ್ಕೆ ಬಿಟ್ಟಿದ್ದರು. ರೊಮೇನಿಯಾ ಪ್ರವೇಶಿಸಲು ಲಗೇಜ್‌ನೊಂದಿಗೆ 10 ಕಿ.ಮೀ ದೂರ ಮೈಕೊರೆಯುವ ಚಳಿಯಲ್ಲಿ ಜೀವ ಉಳಿಸಿಕೊಳ್ಳಲು ಕಾಲ್ನಡಿಗೆಯಲ್ಲಿಯೇ ಬರುವ ಪರಿಸ್ಥಿತಿ ನಿರ್ಮಾಣವಾಗಿತ್ತು’ ಎಂದು ಅನುಭವ ಹಂಚಿಕೊಂಡರು.

‘ಉಕ್ರೇನ್‌ನಿಂದ ರೊಮೇನಿಯಾ ಗಡಿ ದಾಟಲು 25ರಿಂದ 30 ಕಿ.ಮೀ.ಗಟ್ಟಲೇ ಸಂಚಾರ ದಟ್ಟಣೆ ಉಂಟಾಗಿತ್ತು. ನಾನು 24 ಗಂಟೆ ಕಾಯ್ದ ನಂತರ ಗಡಿ ದಾಟಲು ಅವಕಾಶ ದೊರೆಯಿತು’ ಎಂದು ಮಾಹಿತಿ ನೀಡಿದರು.

ಬೆಂಗಳೂರಿನ ಕುರುಬರಹಳ್ಳಿಯ ಧನಂಜಯ್‌ ಸಾಳಂಕೆ, ‘ಜನವರಿ ಕೊನೆಯ ವಾರದಲ್ಲಿ ವೈದ್ಯ ಕೀಯ ಶಿಕ್ಷಣ ಕ್ಕಾಗಿ ಉಕ್ರೇನ್‌ಗೆ ಹೋಗಿದ್ದೆ. ಗಡಿಯ 1.5 ಕಿ.ಮೀ ದೂರದಲ್ಲಿ ಕಾಲೇಜು ಇದ್ದಿದ್ದರಿಂದ ಯಾವುದೇ ರೀತಿಯ ತೊಂದರೆಯಾಗಲಿಲ್ಲ. ಗಡಿ ದಾಟಲು ಸಾಕಷ್ಟು ದೈಹಿಕ ಶ್ರಮಬೇಕಿದ್ದು, ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಸಮಸ್ಯೆಯಾಯಿತು ಎಂದು ತಿಳಿಸಿದರು.
ಕೊಡಗಿನ ಗೋಣಿಕೊಪ್ಪದ ಅಲಿಶಾ ಸಯ್ಯದ್‌ ಅಲಿ, ಭಾರತೀಯ ರಾಜತಾಂತ್ರಿಕ ಅಧಿಕಾರಿಗಳು ನಮ್ಮ ಸುರಕ್ಷತೆಗಾಗಿ ದುಡಿಯುತ್ತಿದ್ದಾರೆ ’ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.