ADVERTISEMENT

ಗೋಕರ್ಣದ ಗುಹೆಯಲ್ಲಿ ಎರಡು ಮಕ್ಕಳೊಂದಿಗೆ ರಷ್ಯಾದ ಮಹಿಳೆ ರಹಸ್ಯವಾಗಿ ವಾಸ!

ವೀಸಾ ಅವಧಿ ಮುಗಿದರೂ ವಾಸ

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 14:59 IST
Last Updated 12 ಜುಲೈ 2025, 14:59 IST
<div class="paragraphs"><p>ಗೋಕರ್ಣದ ರಾಮತೀರ್ಥ ಗುಡ್ಡದ ಗುವೆಯಲ್ಲಿ ಪತ್ತೆಯಾದ ವೀಸಾ ಅವಧಿ ಮುಗಿದು ವಾಸಿಸುತ್ತಿದ್ದ ರಷ್ಯನ್ ಮಹಿಳೆ ಮತ್ತು ಅವರ ಇಬ್ಬರು ಪುತ್ರಿಯರು</p></div>

ಗೋಕರ್ಣದ ರಾಮತೀರ್ಥ ಗುಡ್ಡದ ಗುವೆಯಲ್ಲಿ ಪತ್ತೆಯಾದ ವೀಸಾ ಅವಧಿ ಮುಗಿದು ವಾಸಿಸುತ್ತಿದ್ದ ರಷ್ಯನ್ ಮಹಿಳೆ ಮತ್ತು ಅವರ ಇಬ್ಬರು ಪುತ್ರಿಯರು

   

ಗೋಕರ್ಣ (ಉತ್ತರ ಕನ್ನಡ ಜಿಲ್ಲೆ): ಗೋಕರ್ಣ ಸಮುದ್ರ ತೀರದ ರಾಮತೀರ್ಥದ ಹತ್ತಿರದಲ್ಲಿರುವ ಗುಡ್ಡದ ಗುಹೆಯಲ್ಲಿ ವಾಸವಿದ್ದ ರಷ್ಯನ್ ಮಹಿಳೆ ನಿನಾ ಕುಟಿನಾ (40) ಮತ್ತು ಆಕೆಯ ಇಬ್ಬರು ಪುತ್ರಿಯರನ್ನು ಗೋಕರ್ಣ ಠಾಣೆ ಪೊಲೀಸರು ಶುಕ್ರವಾರ ಸಂಜೆ ಪತ್ತೆ ಹಚ್ಚಿ ಸುರಕ್ಷಿತವಾಗಿ ಕರೆತಂದಿದ್ದಾರೆ.

‘ಗುಡ್ಡದ ಕಾಡಿನಲ್ಲಿರುವ ಗುಹೆಯಲ್ಲಿ ವಿದೇಶಿ ಮಹಿಳೆಯೊಬ್ಬರು ವಾರಗಳಿಂದ ತನ್ನ ಇಬ್ಬರು ಮಕ್ಕಳೊಂದಿಗೆ ವಾಸವಿರುವ ಬಗ್ಗೆ ಸ್ಥಳೀಯರೊಬ್ಬರ ದೂರು ಆಧರಿಸಿ ಪರಿಶೀಲನೆ ನಡೆಸಲಾಗಿತ್ತು. ರಷ್ಯನ್ ಮಹಿಳೆಯು 6 ಮತ್ತು 4 ವರ್ಷದ ಇಬ್ಬರು ಮಕ್ಕಳೊಂದಿಗೆ ಇದ್ದಿದ್ದು ಗಮನಕ್ಕೆ ಬಂದಿತು. ಇದು ಅಪಾಯಕಾರಿ ತಾಣವಾಗಿರುವ ಹಿನ್ನೆಲೆಯಲ್ಲಿ ಅಲ್ಲಿಂದ ಮಹಿಳೆ ಮತ್ತು ಮಕ್ಕಳನ್ನು ಕರೆತಂದು, ಕಾರವಾರದ ಸ್ವೀಕಾರ ಕೇಂದ್ರಕ್ಕೆ ಸೇರಿಸಲಾಗಿದೆ’ ಎಂದು ಗೋಕರ್ಣ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಶ್ರೀಧರ ಎಸ್.ಆರ್ ತಿಳಿಸಿದ್ದಾರೆ.

ADVERTISEMENT

‘ಮಹಿಳೆಯ ವೀಸಾ ಅವಧಿ 2017ರಲ್ಲಿಯೇ ಮುಗಿದಿದೆ. ಈಕೆಯನ್ನು ಕೂಲಂಕಷವಾಗಿ ವಿಚಾರಣೆ ನಡೆಸಲಾಗಿದೆ. ಕಳೆದ ಮೂರು ವಾರಗಳಿಂದ ಮಹಿಳೆ ಗೋಕರ್ಣದಲ್ಲಿ ಗುಹೆಯಲ್ಲಿ ವಾಸ ಇದ್ದುದಾಗಿ ತಿಳಿಸಿದ್ದಾರೆ. ಜುಲೈ 14 ರಂದು ಮಹಿಳೆ ಮತ್ತು ಮಕ್ಕಳನ್ನು ಬೆಂಗಳೂರಿನಲ್ಲಿರುವ ವಿದೇಶೀಯರ ವಿಭಾಗೀಯ ನೋಂದಣಾಧಿಕಾರಿ ಕಚೇರಿಗೆ (ಎಫ್‌ಆರ್‌ಆರ್‌ಒ) ಕರೆದೊಯ್ದು, ಮುಂದಿನ ಪ್ರಕ್ರಿಯೆ ನಡೆಸಲಾಗುತ್ತದೆ’ ಎಂದು ಮಾಹಿತಿ ನೀಡಿದ್ದಾರೆ.

‘ಆಧ್ಯಾತ್ಮದ ಕಡೆಗೆ ಒಲವು ಇದ್ದ ಕಾರಣ ವೀಸಾ ಅವಧಿ ಮುಗಿದರೂ ಭಾರತ ಬಿಟ್ಟು ತೆರಳಿಲ್ಲ ಎಂದು ಮಹಿಳೆ ವಿಚಾರಣೆ ವೇಳೆ ತಿಳಿಸಿದ್ದಾರೆ. 2018ರಲ್ಲಿ ನೇಪಾಳಕ್ಕೆ ಸಾಗಿದ್ದ ಅವರು 2022ರಲ್ಲಿ ಅಲ್ಲಿಂದ ಮರಳಿ ದೇಶದ ವಿವಿಧೆಡೆ ವಾಸವಿದ್ದು, ಈಚೆಗೆ ಗೋಕರ್ಣಕ್ಕೆ ಬಂದಿದ್ದಾಗಿ ಹೇಳಿಕೊಂಡಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

ಕಳೆದುಹೋಗಿದ್ದ ಪಾಸ್‌ಪೋರ್ಟ್

‘ವಿದೇಶಿ ಮಹಿಳೆ ತಾನು ಹಿಂದೂ ಧರ್ಮದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದು ತನಗೆ ಅರಣ್ಯದೊಳಗೆ ಉಳಿದು ದೇವರ ಪೂಜೆ ಧ್ಯಾನ ಮಾಡಲು ಆಸಕ್ತಿಯಿರುವುದರಿಂದ ಗೋವಾದಿಂದ ಮಕ್ಕಳೊಂದಿಗೆ ಇಲ್ಲಿಗೆ ಬಂದು ಗುಡ್ಡದ ಮೇಲಿರುವ ಗುಹೆಯಲ್ಲಿ ಉಳಿದುಕೊಂಡಿರುವುದಾಗಿ ತಿಳಿಸಿದ್ದಾರೆ. ಅವರ ಇಚ್ಚೆಯಂತೆ ಗೋಕರ್ಣದ ಬಂಕಿಕೊಡ್ಲದಲ್ಲಿರುವ ಶಂಕರ ಫೌಂಡೇಶನ್ ಆಶ್ರಮಕ್ಕೆ ಬಿಡುವಂತೆ ಮನವಿ ಮಾಡಿದ್ದರು. ಗುಹೆಯಲ್ಲೇ ಪಾಸ್‌ಪೋರ್ಟ್ ಕಳೆದುಕೊಂಡಿದ್ದಾಗಿ ಮಹಿಳೆ ಹೇಳಿಕೊಂಡಿದ್ದರು. ಗುಹೆಯಲ್ಲಿ ಹುಡುಕಾಡಿದ ಬಳಿಕ ಪಾಸ್‌ಪೋರ್ಟ್ ಸಿಕ್ಕಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.