ADVERTISEMENT

ಸ್ಪೀಕರ್ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಎಸ್‌.ಮೂರ್ತಿ

ಹೈಕೋರ್ಟ್‌ ಮೆಟ್ಟಿಲೇರಿದ ಎಸ್‌. ಮೂರ್ತಿ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2018, 17:07 IST
Last Updated 11 ಡಿಸೆಂಬರ್ 2018, 17:07 IST
   

ಬೆಂಗಳೂರು: ‘ನನ್ನ ಆಡಳಿತಾತ್ಮಕ ಅಧಿಕಾರಗಳನ್ನು ಹಿಂದಕ್ಕೆ ಪಡೆದು ರಾಜ್ಯ ವಿಧಾನಸಭೆಯ ಅಧ್ಯಕ್ಷ ಕೆ.ಆರ್‌. ರಮೇಶ್‌ ಕುಮಾರ್‌ ಹೊರಡಿಸಿರುವ ಆದೇಶವನ್ನು ರದ್ದಗೊಳಿಸಬೇಕು’ ಎಂದು ಕೋರಿ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಎಸ್‌.ಮೂರ್ತಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಈ ಕುರಿತಂತೆ ಅವರು ಮಂಗಳವಾರ ಸಲ್ಲಿಸಿರುವ ರಿಟ್‌ ಅರ್ಜಿ ಇನ್ನೂ ವಿಚಾರಣೆಗೆ ಬರಬೇಕಿದೆ.

‘ವಿಧಾನಸಭಾಧ್ಯಕ್ಷರು ಹೊರಡಿಸಿರುವ ಆದೇಶ ಮತ್ತು ಅದಕ್ಕೆ ಸಂಬಂಧಿಸಿದ ಕಡತಗಳನ್ನು ಕೋರ್ಟ್‌ಗೆ ತರಿಸಿಕೊಳ್ಳಬೇಕು. ಅರ್ಜಿ ಇತ್ಯರ್ಥಗೊಳ್ಳುವ ತನಕ ವಿಧಾನಸಭಾಧ್ಯಕ್ಷರ ಆದೇಶಕ್ಕೆ ತಡೆ ನೀಡಬೇಕು’ ಎಂದು ಅವರು ಅರ್ಜಿಯಲ್ಲಿ ಮಧ್ಯಂತರ ಮನವಿ ಮಾಡಿದ್ದಾರೆ.

ADVERTISEMENT

‘ನಾನು ದೀರ್ಘ ಕಾಲದಿಂದ ವಿಧಾನಸಭೆಯ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದೇನೆ. ನನ್ನನ್ನು ಶೋಷಿಸುವ, ಮುಜುಗರಕ್ಕೆ ಈಡುಮಾಡುವ ಏಕೋದ್ದೇಶದಿಂದ ವಿಧಾನಸಭಾಧ್ಯಕ್ಷರು ನನ್ನ ಅಧಿಕಾರ ಮೊಟಕುಗೊಳಿಸಿದ್ದಾರೆ. ಅವರು ಆರೋಪಿಸಿರುವ ಅಂಶಗಳಲ್ಲಿ ಯಾವುದೇ ಹುರುಳಿಲ್ಲ. ಈ ಕುರಿತ ಅವರ ಆದೇಶವು ಕಾನೂನು ಬಾಹಿರ, ಏಕಪಕ್ಷೀಯ ಹಾಗೂ ಅನ್ಯಾಯದಿಂದ ಕೂಡಿದೆ. ಅಲ್ಲದೆ, ಅವರಿಗೆ ಇಂತಹ ಆದೇಶ ಹೊರಡಿಸುವ ಅಧಿಕಾರವಿಲ್ಲ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.