ADVERTISEMENT

ಸಾಬರಮತಿ ಆಶ್ರಮದ ಆಧುನೀಕರಣ ಕಳವಳಕಾರಿ: ಪ್ರೊ.ಬಿ.ಕೆ. ಚಂದ್ರಶೇಖರ್‌

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2021, 23:11 IST
Last Updated 3 ಆಗಸ್ಟ್ 2021, 23:11 IST
ಪ್ರೊ.ಬಿ.ಕೆ. ಚಂದ್ರಶೇಖರ್‌
ಪ್ರೊ.ಬಿ.ಕೆ. ಚಂದ್ರಶೇಖರ್‌   

ಬೆಂಗಳೂರು: 1917ರಿಂದ 1930ರವರೆಗೂ ಮಹಾತ್ಮ ಗಾಂಧಿಯವರು ನೆಲೆಸಿ, ದೇಶದ ಸ್ವಾತಂತ್ರ್ಯ ಚಳವಳಿಗೆ ಶಕ್ತಿ ತುಂಬಿದ್ದ ಸಾಬರಮತಿ ಆಶ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಅವರು ‘ಆಧುನೀಕರಣ’ದ ಹೆಸರಿನಲ್ಲಿ ಬದಲಿಸಲು ಹೊರಟಿರುವುದು ಕಳವಳಕಾರಿ ಎಂದು ಕಾಂಗ್ರೆಸ್‌ ಮುಖಂಡ ಪ್ರೊ.ಬಿ.ಕೆ. ಚಂದ್ರಶೇಖರ್‌ ಹೇಳಿದ್ದಾರೆ.

‘1930ರಲ್ಲಿ ದಂಡಿ ಯಾತ್ರೆಯನ್ನು ಆರಂಭಿಸುವ ಮುನ್ನ ಸಾಬರಮತಿ ಆಶ್ರಮದಲ್ಲಿ ಹೇಳಿಕೆ ನೀಡಿದ್ದ ಗಾಂಧೀಜಿಯವರು, ದೇಶಕ್ಕೆ ಸ್ವಾತಂತ್ರ್ಯ ದೊರಕಿದ ಬಳಿಕ ಆಶ್ರಮಕ್ಕೆ ಹಿಂದಿರುವುದಾಗಿ ತಿಳಿಸಿದ್ದರು. ಆದರೆ, ಅವರು ಆಶ್ರಮಕ್ಕೆ ಹಿಂದಿರುಗುವ ಮೊದಲೇ ಮೂಲಭೂತವಾದಿ ಗೋಡ್ಸೆಯಿಂದ 1948ರಲ್ಲಿ ಹತ್ಯೆಯಾದರು. ಸಾಬರಮತಿ ಆಶ್ರಮದಲ್ಲಿರುವ ಸಣ್ಣ ಗುಡಿಸಲುಗಳು ಮತ್ತು ಕೆಲವು ಕಟ್ಟಡಗಳೇ ಐತಿಹಾಸಿಕವಾಗಿ ಮಹತ್ವ ಹೊಂದಿದವು’ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೆಂಪು ಕೋಟೆ, ಅಶೋಕ ಸ್ಥಂಭ, ಸಂಸತ್‌ ಭವನ ಸೇರಿದಂತೆ ಭಾರತದ ಇತಿಹಾಸ ಸಾರುವ ಹಲವು ಪಾರಂಪರಿಕ ಕಟ್ಟಡಗಳಿವೆ. ಸರಳತೆಗೆ ಸಾಕ್ಷಿಯಾಗಿರುವ ಸಾಬರಮತಿ ಆಶ್ರಮವು ಮಹಾತ್ಮ ಗಾಂಧಿಯವರ ‘ಸೆಂಟ್ರಲ್‌ ವಿಸ್ತಾ’ ಆಗಿತ್ತು. ಅದು ಅಸ್ಪೃಶ್ಯತೆ ನಿರ್ಮೂಲನೆ, ಅಂತರ್‌ ಧರ್ಮೀಯ ಸೌಹಾರ್ದ, ಸತ್ಯ ಮತ್ತು ಅಹಿಂಸೆಯ ಸಂಕೇತದಂತೆ ಇದೆ ಎಂದು ಚಂದ್ರಶೇಖರ್‌ ಹೇಳಿದ್ದಾರೆ.

ADVERTISEMENT

‘ಗಾಂಧೀಜಿಯವರ ತತ್ವಕ್ಕೆ ವಿರುದ್ಧವಾದ ಹಿಂದುತ್ವ ಸಿದ್ಧಾಂತವನ್ನು ಪಾಲಿಸುವ ಮತ್ತು ಗಾಂಧಿವಾದದ ಜತೆಗೆ ಸಂಘರ್ಷ ನಡೆಸುತ್ತಿರುವ ವ್ಯಕ್ತಿಯ ನೇತೃತ್ವದ ಸರ್ಕಾರವು ಸಾಬರಮತಿ ಆಶ್ರಮವನ್ನು ವಿದೇಶಿ ಪ್ರವಾಸಿಗರಿಗಾಗಿ ಒಂದು ಪ್ರದರ್ಶನ ಸ್ಥಳವನ್ನಾಗಿ ಬದಲಿಸುವುದು ಸರಿಯೆ? ಆಶ್ರಮವನ್ನು ₹ 1,200 ಕೋಟಿ ವೆಚ್ಚದಲ್ಲಿ ಆಧುನೀಕರಿಸುವ ಯೋಜನೆಗೆ ಗಾಂಧೀಜಿ ಒಪ್ಪುತ್ತಿದ್ದರೆ? ಈ ಯೋಜನೆಯ ಕುರಿತು ಪ್ರಧಾನಿ ಮರು ಪರಿಶೀಲನೆ ನಡೆಸಿದರೆ ಮಹಾತ್ಮ ಗಾಂಧೀಜಿಯವರಿಗೆ ಗೌರವ ಸಲ್ಲಿಸಿದಂತಾಗುತ್ತದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.