ADVERTISEMENT

ಅಯ್ಯಪ್ಪ ದರ್ಶನಕ್ಕೆ ಮುಕ್ತ, ಹಿತಕರ ವಾತಾವರಣ ನಿರ್ಮಿಸಿ: ಸುರೇಶ್ ಕುಮಾರ್, ಮೋಹನ್‌

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2018, 14:06 IST
Last Updated 27 ನವೆಂಬರ್ 2018, 14:06 IST
ಕೇರಳದ ಶಬರಿಮಲೆಯಲ್ಲಿ ಅಯ್ಯಪ್ಪ ದೇಗುಲಕ್ಕೆ ಶಾಸಕ ಎಸ್‌. ಸುರೇಶ್‌ಕುಮಾರ್‌, ಸಂಸದ ಪಿ.ಸಿ. ಮೋಹನ್‌ ಮಂಗಳವಾರ ಭೇಟಿ ನೀಡಿದ್ದಾರೆ.
ಕೇರಳದ ಶಬರಿಮಲೆಯಲ್ಲಿ ಅಯ್ಯಪ್ಪ ದೇಗುಲಕ್ಕೆ ಶಾಸಕ ಎಸ್‌. ಸುರೇಶ್‌ಕುಮಾರ್‌, ಸಂಸದ ಪಿ.ಸಿ. ಮೋಹನ್‌ ಮಂಗಳವಾರ ಭೇಟಿ ನೀಡಿದ್ದಾರೆ.   

ಬೆಂಗಳೂರು:ಬಿಜೆಪಿ ಶಾಸಕಎಸ್. ಸುರೇಶ್‌ಕುಮಾರ್‌ ಮತ್ತು ಸಂಸದ ಪಿ.ಸಿ. ಮೋಹನ್‌ ಅವರು ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮಂಗಳವಾರ ಭೇಟಿ ನೀಡಿದ್ದು, ಅಲ್ಲಿಂದ ಫೇಸ್‌ಬುಕ್‌ನಲ್ಲಿ ಲೈವ್‌ ಮಾಡಿ ನಾಲ್ಕೂವರೆ ನಿಮಿಷ ಮಾತನಾಡಿದ್ದಾರೆ. ಈ ವೇಳೆ ಕೇರಳ ಸರ್ಕಾರ ಕರ್ನಾಟಕದ ಮತ್ತು ದಕ್ಷಿಣ ಭಾರತದ ಭಕ್ತರ ದೇಗುಲ ಭೇಟಿಗೆ ಮುಕ್ತ ಅವಕಾಶ ಕಲ್ಪಿಸಲು ಸೆಕ್ಷನ್‌ 144 ಅನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಲೈವ್‌ನಲ್ಲಿ ಮಾತನಾಡಿದಸುರೇಶ್‌ಕುಮಾರ್‌, ‘ಈಗ ಶಬರಿಮಲೆಗೆ ಬೆಂಗಳೂರು ಸಂಸದ ಪಿ.ಸಿ. ಮೋಹನ್‌ ಜತೆ ದೇಗುಲ ಭೇಟಿಗೆ ಬಂದಿದ್ದೇನೆ. ಶಬರಿಮಲೆ ಎರಡು ಕಾಣಕ್ಕೆ ಸುದ್ದಿಯಲ್ಲಿದೆ. 1) ಸುಪ್ರೀಂ ಕೋರ್ಟ್‌ನ ತೀರ್ಪು ಬಂದ ಬಳಿಕ ಇದಕ್ಕೆ ಬೇರೆ ಬೇರೆ ಅರ್ಥ ಕಲ್ಪಿಸಲಾಗುತ್ತಿದೆ. 2) ಕೇರಳದ ಪಿಣರಾಯಿ ವಿಜಯನ್‌ ಸರ್ಕಾರ ಯಾವೆಲ್ಲಾ ನಿರ್ಬಂಧ ವಿಧಿಸಿದೆ ಎಂಬಕಾರಣಕ್ಕೆ ಸುದ್ದಿಯಲ್ಲಿದೆ. ಇಲ್ಲಿಗೆ ಭಕ್ತರು ಎಷ್ಟು ಜನ ಬಂದರು ಎನ್ನುವುದಕ್ಕಿಂತ ಎಷ್ಟು ಜನ ಬಂಧನಕ್ಕೊಳಗಾದರು ಎನ್ನುವುದೂ ಸುದ್ದಿಯಲ್ಲಿದೆ’ ಎಂದರು.

‘ಆದ್ದರಿಂದ, ನಾನು ಸಂಸದ ಪಿ.ಸಿ. ಮೋಹನ್‌ ಅವರ ಜತೆ ಇಲ್ಲಿಗೆ ಬಂದಿದ್ದೇನೆ. ವಿಶೇಷವಾಗಿ ಯಾಕೆ ಬಂದಿದ್ದೇವೆ ಎಂದರೆ, ಕರ್ನಾಟಕದಿಂದ ಲಕ್ಷಾಂತರ ಜನ ಭಕ್ತರು ಸ್ವಾಮಿ ಅಯ್ಯಪ್ಪನ ದರ್ಶನ ಪಡೆಯಲು ಬರುವರು. ಅವರಿಗೆ ಏನು ಸೌಲಭ್ಯ ಇದೆ. ಹಿತಕರ ವಾತಾವರಣದಲ್ಲಿ ಬರಲು ಸಾಧ್ಯವೇ ಎಂದು ನೋಡಲು ನಾವು ಬಂದಿದ್ದೇವೆ’ ಎಂದು ಹೇಳಿದರು.

ADVERTISEMENT

‘ನಮಗೆ ತಿಳಿದಿರುವಂತೆ ಇದು ಶಬರಿಮಲೆ ಭೇಟಿಯ ಸೀಜನ್‌. ಪ್ರತಿ ದಿನ ಒಂದು ಲಕ್ಷಕ್ಕೂ ಹೆಚ್ಚು ಜನ ಬರಬೇಕು. ಆದರೆ, ಶೇ 25ರಷ್ಟು ಜನ ಮಾತ್ರ ಬರುತ್ತಿದ್ದಾರೆ. ಯಾವುದೇ ಅಂಗಡಿಯವರನ್ನು ಕೇಳಿದರೂ ಭಕ್ತರು ಬರುತ್ತಿಲ್ಲ. ವ್ಯಾಪಾರ ಇಲ್ಲ ಎನ್ನುತ್ತಾರೆ’ ಎಂದು ಅಲ್ಲಿನ ವಸ್ತುಸ್ಥಿತಿಯನ್ನು ವಿವರಿಸಿದರು.

‘ಗುರು ಸ್ವಾಮಿಗಳ ನೇತೃತ್ವದಲ್ಲಿ ದರ್ಶನಕ್ಕೆ 10, 20, 30 ಜನ ತಂಡಗಳಾಗಿ ಬರುತ್ತಾರೆ. ಹೀಗೆ ಬರುವ ಜಾಗದಲ್ಲಿ 144 ಸೆಕ್ಷನ್‌ ಹಾಕಿದರೆ ದರ್ಶನ ಮಾಡಲು ಹೇಗೆ ಸಾಧ್ಯ? ಇದರಿಂದ ಭಕ್ತರಿಗೆ ತೊಂದರೆಯಾಗುತ್ತದೆ. ಈ ಸಂಬಂಧ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೂ ಪತ್ರ ಬರೆಯಲಿದ್ದೇವೆ. ಕರ್ನಾಟಕದಿಂದ ಬರುವ ಭಕ್ತರಿಗೆ ಇಲ್ಲಿ ಹಿತಕರ ವಾತಾವರಣ ನಿರ್ಮಿಸಿಕೊಡಬೇಕು ಎಂದು ಕೋರುತ್ತೇವೆ. ಇದೇ ಪತ್ರವನ್ನು ಕೇರಳದ ಸಿಎಂಗೂ ಬರೆಯಲಿದ್ದೇವೆ’ ಎಂದು ತಿಳಿಸಿದರು.

144 ಸೆಕ್ಷನ್‌ ತೆರವು ಮಾಡಿ: ಕೇರಳ ಸಿಎಂಗೆ ಮನವಿ
ಸಂಸದ ಪಿ.ಸಿ. ಮೋಹನ್‌ ಮಾತನಾಡಿ, ‘ನಾವು ದೇಗುಲ ಸನ್ನಿಧಿಯಲ್ಲಿದ್ದೇವೆ. ಅಯ್ಯಪ್ಪನಿಗೆ ಕೇವಲ ಕೇರಳದಲ್ಲಿ ಮಾತ್ರ ಭಕ್ತರಿಲ್ಲ. ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದ ವಿವಿಧ ರಾಜ್ಯಗಳಿಂದ ಲಕ್ಷಾಂತರ ಜನ ಬರುತ್ತಾರೆ. ಆದರೆ, ಇಲ್ಲಿ ಭಯದ ವಾತಾವರಣ ಇದೆ. ಕಾಲಿಡಲು ಸಾಧ್ಯವಿಲ್ಲದ ಸ್ಥಿತಿ ಇದೆ. ಸೆಕ್ಷನ್‌ 144 ಅನ್ನು ಯಾವಾಗ ಹಾಕಬೇಕು ಎಂಬ ಅರಿವು ಕೇರಳ ಸಿಎಂಗೆ ಇದ್ದಂತಿಲ್ಲ. ಆದ್ದರಿಂದ, ಭಕ್ತರು ಬರುತ್ತಿಲ್ಲ. ಮೂರು ತಿಂಗಳಲ್ಲಿ ಸುಮಾರು ಐದು ಕೋಟಿ ಭಕ್ತರು ಭೇಟಿ ನೀಡಬೇಕು. ಆದರೆ, ತಮ್ಮ ಹರಕೆ ತೀರಿಸಿಕೊಳ್ಳಲು ವಿಘ್ನ ಉಂಟು ಮಾಡುತ್ತಿರುವ ಕೇರಳ ಸಿಎಂ ಪಿಣರಾಯಿ ವಿಜಯನ್‌ಗೆ ಅಯ್ಯಪ್ಪಸ್ವಾಮಿ ಬುದ್ದಿಯನ್ನು ಕೊಟ್ಟು, 144 ಸೆಕ್ಷನ್‌ ತೆರೆವು ಮಾಡಲಿ’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.