ADVERTISEMENT

ಒಳ ಮೀಸಲಾತಿ: ಸದಾಶಿವ ಆಯೋಗ ವರದಿ ವಿರುದ್ಧ ಶಕ್ತಿ ಪ್ರದರ್ಶನಕ್ಕೆ ಸಜ್ಜು

​ಪ್ರಜಾವಾಣಿ ವಾರ್ತೆ
Published 9 ಜನವರಿ 2023, 19:45 IST
Last Updated 9 ಜನವರಿ 2023, 19:45 IST

ಬೆಂಗಳೂರು: ಒಳ ಮೀಸಲಾತಿ ಜಾರಿಗಾಗಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಒಂದು ತಿಂಗಳು ಪೂರೈಸುತ್ತಿದ್ದು, ಇದೇ ಹೊತ್ತಿನಲ್ಲಿ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಚರ್ಚೆಗೊಳಪಡಿಸದೆ ಶಿಫಾರಸು ಮಾಡದಂತೆ ಆಗ್ರಹಿಸಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟವು ಮಂಗಳವಾರ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ.

ಭೋವಿ, ಲಂಬಾಣಿ, ಕೊರಮ, ಕೊರಚ, ಬುಡ್ಗಜಂಗಮ, ಶಿಳ್ಳೆಕ್ಯಾತ, ದೊಂಬರು ಸೇರಿ ಪರಿಶಿಷ್ಟ ಜಾತಿಯಲ್ಲಿನ ವಿವಿಧ ಸಮುದಾಯಗಳು ಪ್ರತಿಭಟನೆಗೆ ನಿರ್ಧರಿಸಿವೆ. ‘ರೈಲ್ವೆ ನಿಲ್ದಾಣದಿಂದ ಮೆರವಣಿಗೆ ಹೊರಡಲಿದ್ದು, ಎಲ್ಲಾ ಸಮುದಾಯಗಳು ತಮ್ಮ ಸಾಂಸ್ಕೃತಿ ಕಲೆಗಳನ್ನು ಪ್ರದರ್ಶಿಸಲಿವೆ. ಸ್ವಾತಂತ್ರ್ಯ ಉದ್ಯಾನದಲ್ಲಿ ಪರಿಶಿಷ್ಟ ಜಾತಿಗಳ ಐಕ್ಯತಾ ಸಮಾವೇಶ ನಡೆಯಲಿದೆ. ಒಂದು ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇದೆ’ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎನ್. ಅನಂತನಾಯಕ್ ತಿಳಿಸಿದರು.

ಇನ್ನೊಂದೆಡೆ ಒಳ ಮೀಸಲಾತಿಗಾಗಿ ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಒಂದು ತಿಂಗಳು ಪೂರೈಸಿರುವ ಸಂದರ್ಭದಲ್ಲಿ ಮುಂದಿನ ಹೋರಾಟ ಕಟ್ಟುವ ಸಭೆಯೂ ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ನಡೆಯಲಿದೆ.

ADVERTISEMENT

ಜ್ಞಾನಪ್ರಕಾಶ ಸ್ವಾಮೀಜಿ, ಬಸವನಾಗೀದೇವ ಸ್ವಾಮೀಜಿ, ಷಡಕ್ಷರಿ ಸ್ವಾಮೀಜಿ, ಶಿವಶರಣ ಹರಳಯ್ಯ ಸ್ವಾಮೀಜಿ, ಮತಂಗಮುನಿ ಸ್ವಾಮೀಜಿ ಸೇರಿ ಹಲವು ಸ್ವಾಮೀಜಿಗಳು ಭಾಗವಹಿಸುವರು. ದಲಿತ ಹೋರಾಟಗಾರರಾದ ಮಾವಳ್ಳಿ ಶಂಕರ್, ಮೋಹನ್‌ರಾಜ್, ವಿ.ನಾಗರಾಜ್, ಗುರುಮೂರ್ತಿ, ಹೆಣ್ಣೂರು ಶ್ರೀನಿವಾಸ್, ಗುರುಪ್ರಸಾದ್ ಕೆರಗೋಡು, ಬಿ.ಗೋಪಾಲ್, ಎನ್.ವೆಂಕಟೇಶ್, ಎನ್.ಮುನಿಸ್ವಾಮಿ, ಬಸವರಾಜ ಕೌತಾಳ್, ಅಂಬಣ್ಣ ಅರೋಲಿಕರ್, ಹೆಣ್ಣೂರು ಲಕ್ಷ್ಮೀನಾರಾಯಣ ಭಾಗವಹಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.