ADVERTISEMENT

‘ಸದಾಶಿವ ಆಯೋಗದ ವರದಿ: ಶೀಘ್ರ ಸಂಪುಟ ಉಪ ಸಮಿತಿ ರಚನೆ’– ಬಿ. ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2021, 20:38 IST
Last Updated 17 ಮಾರ್ಚ್ 2021, 20:38 IST
 ಬಿ. ಶ್ರೀರಾಮುಲು
ಬಿ. ಶ್ರೀರಾಮುಲು   

ಬೆಂಗಳೂರು: 'ಸದಾಶಿವ ಆಯೋಗದ ವರದಿ ಜಾರಿ ಸಂಬಂಧಿಸಿದಂತೆ ಆದಷ್ಟು ಬೇಗ ಸಂಪುಟ ಉಪ ಸಮಿತಿ ರಚಿಸಲಾಗುವುದು’ ಎಂದು ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಭರವಸೆ ನೀಡಿದರು.

ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್ಸಿನ ಆರ್. ಧರ್ಮಸೇನ ಅವರ ಪ್ರಶ್ನೆಗೆ ಉತ್ತರಿಸಿದ ರಾಮುಲು, ‘ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು, ಸಮಗ್ರವಾಗಿ ಪರಿಶೀಲಿಸಿ ಸೂಕ್ತ ಶಿಫಾರಸುಗಳನ್ನು ಮಾಡಲು 2018ರ ಮಾರ್ಚ್ 8ರಂದು ಸಂಪುಟ ಉಪ ಸಮಿತಿ ರಚಿಸಲು ತೀರ್ಮಾನಿಸಲಾಗಿತ್ತು. ಬಳಿಕ ಸರ್ಕಾರ ಬದಲಾಗಿದೆ. ಹೀಗಾಗಿ, ಸಂಪುಟ ಉಪ ಸಮಿತಿ ರಚಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದರು.

ಈ ವೇಳೆ ಮಧ್ಯಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ, ‘ಉಪ ಚುನಾವಣೆ ವೇಳೆ ಸದಾಶಿವ ಆಯೋಗದ ವರದಿ ಜಾರಿ ಮಾಡುವುದಾಗಿ ಭರವಸೆ ನೀಡಿದ್ದೀರಿ, ಆಗಿಲ್ಲ. ಈಗ‌ ಮತ್ತೆ ಉಪ ಚುನಾವಣೆ ಬಂದಿದೆ. ಕಾಲಹರಣ ಮಾಡದೆ ವರದಿ ಜಾರಿಗೊಳಿಸಿ. ಉಪ‌ಚುನಾವಣೆ ಎಂದು ಕಾಯಬೇಡಿ’ ಎಂದು ಒತ್ತಾಯಿಸಿದರು.

ADVERTISEMENT

ಅದಕ್ಕೆ ಶ್ರೀರಾಮುಲು, ‘ಸಂಪುಟ ಉಪ ಸಮಿತಿ ರಚಿಸಬೇಕು. ಸದನದಲ್ಲಿಯೂ ಈ ಬಗ್ಗೆ ಚರ್ಚೆ ಆಗಬೇಕು. ಹಿರಿಯರ ಜೊತೆ ಮಾತನಾಡಿ ಈ ಬಗ್ಗೆ ನಿರ್ಧರಿಸಲಾಗುವುದು. ಮೊದಲು ಸಂಪುಟ ಉಪ ಸಮಿತಿ ರಚನೆ ಮಾಡುತ್ತೇವೆ. ನಂತರ ಸಮಿತಿ ನೀಡಿದ ವರದಿಯನ್ನು ಸದನದಲ್ಲಿ ಮಂಡಿಸಿ ಚರ್ಚಿಸಲಾಗುವುದು’ ಎಂದರು.

ಗುತ್ತಿಗೆದಾರರು ಆತ್ಮಹತ್ಯೆ ಹಾದಿ ಹಿಡಿಯಬೇಡಿ: ‘ಬಿಲ್‌ ಕಾರಣಕ್ಕೆ ಗುತ್ತಿಗೆದಾರರು ಆತ್ಮಹತ್ಯೆಗೆ ಮುಂದಾಗಬಾರದು. ಆದಷ್ಟು ಶೀಘ್ರ ಬಿಲ್ ಹಣ ಪಾವತಿ ಮಾಡಲಾಗುವುದು’ ಎಂದು ಲೋಕೋಪಯೋಗಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ಜೆಡಿಎಸ್‌ನ ಗೋವಿಂದರಾಜು ಪ್ರಶ್ನೆಗೆ ಉತ್ತರಿಸಿದ ಕಾರಜೋಳ, ‘ಬಿಲ್‌ ಬಾಕಿ ಇವತ್ತಿನ ಸಮಸ್ಯೆ ಅಲ್ಲ. ಎಲ್ಲ ಸರ್ಕಾರಗಳ ಅವಧಿಯಲ್ಲೂ ಬಜೆಟ್ ಹಂಚಿಕೆಗೂ ಹೆಚ್ಚಿನ ಮೊತ್ತದ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ. ಹೀಗಾಗಿ, ಬಾಕಿ ಉಳಿದಿದೆ. ಬಾಕಿ ಇರುವ ಬಿಲ್‌ ಮೊತ್ತದಲ್ಲಿ ಶೇ 50 ರಷ್ಟನ್ನು ಮಾರ್ಚ್ ಅಂತ್ಯದೊಳಗೆ ಬಿಡುಗಡೆ ಮಾಡಲು ಪ್ರಯತ್ನ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ಚಾರ್ಮಾಡಿ ಘಾಟಿಯಲ್ಲಿ ವಾಹನ ಸಂಚಾರ: ‘ಚಾರ್ಮಾಡಿ ಘಾಟ್‌ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲು ಚಿಕ್ಕಮಗಳೂರು ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ’ ಎಂದು ಕಾರಜೋಳ ಹೇಳಿದರು.

ಕಾಂಗ್ರೆಸ್‌ನ ಹರೀಶ್ ಕುಮಾರ್ ಪ್ರಶ್ನೆಗೆ ಉತ್ತರಿಸಿದ ಅವರು, ‘ಚಾರ್ಮಾಡಿ ಘಾಟ್‌ನಲ್ಲಿ 24 ಕಿಲೋ ಮೀಟರ್ ರಸ್ತೆ ಸುಸ್ಥಿತಿಯಲ್ಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.