ADVERTISEMENT

ರೈತರು, ಬಾಣಂತಿಯರು, ಅಧಿಕಾರಿಗಳ ಸಮಾಧಿ ಮೇಲೆ ಸಾಧನಾ ಸಮಾವೇಶ: ಆರ್. ಅಶೋಕ

​ಪ್ರಜಾವಾಣಿ ವಾರ್ತೆ
Published 18 ಮೇ 2025, 9:58 IST
Last Updated 18 ಮೇ 2025, 9:58 IST
ಆರ್. ಅಶೋಕ 
ಆರ್. ಅಶೋಕ    

ಚಿಕ್ಕಮಗಳೂರು: ರೈತರು, ಬಾಣಂತಿಯರು ಮತ್ತು ಪ್ರಾಮಾಣಿಕ ಅಧಿಕಾರಿಗಳ ಸಮಾಧಿಗಳ ಮೇಲೆ ರಾಜ್ಯ ಸರ್ಕಾರ ಸಾಧನಾ ಸಮಾವೇಶ ನಡೆಸಲು ಹೊರಟಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಆಕ್ರೋಶ ವ್ಯಕ್ತಪಡಿಸಿದರು.

ಇದೊಂದು ಹಾಸ್ಯಾಸ್ಪದ ಕಾರ್ಯಕ್ರಮ. ಮೂರನೇ ಬಾರಿಗೆ ಬಿಯರ್ ದರ ಹೆಚ್ಚಾಗಿದೆ. ಖಜಾನೆ ಖಾಲಿಯಾಗಿದ್ದು, ನೌಕರರಿಗೆ ಸಂಬಳ ಕೊಡಲಾಗುತ್ತಿಲ್ಲ. ಮದ್ಯದ ದರ ಹೆಚ್ಚಳ ಆಗಿರುವುದರಿಂದ ಕಳ್ಳತನ ಹೆಚ್ಚಾಗಲಿದೆ‌.

ಜನೌಷಧಿ ಯೋಜನೆಗೆ ಎಳ್ಳು ನೀರು ಹಾಕಿದೆ. ಎರಡು ವರ್ಷ ತುಂಬುತ್ತಿರುವ ಬೇಜವಬ್ದಾರಿ ಸರ್ಕಾರ ಇದು ಎಂದು ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.

ADVERTISEMENT

'ಎರಡು ವರ್ಷಗಳ ಸರ್ಕಾರದ ಸಾಧನೆ ಏನು, ಯಾವುದಾದರೂ ಅಣೆಕಟ್ಟೆ ಕಟ್ಟಿದ್ದಾರಾ, ಕಟ್ಟಿರುವ ಅಣೆಕಟ್ಟೆಯ ಎತ್ತರ ಜಾಸ್ತಿ ಮಾಡಿದ್ದಾರಾ, ಗೇಟ್ ರಿಪೇರಿ ಸಾಧ್ಯವಾಗಿಲ್ಲ. ಯಾವ ಪುರುಷಾರ್ಥಕ್ಕೆ ಸಾಧನಾ ಸಮಾವೇಶ' ಎಂದು ಪ್ರಶ್ನಿಸಿದರು.

ಗುತ್ತಿಗೆದಾರರಿಗೆ ಬಿಲ್ ಪಾವತಿಯಗಿಲ್ಲ. ಕಮಿಷನ್ ಮೊತ್ತ ಶೇ 60ಕ್ಕೆ ಏರಿಕೆಯಾಗಿದೆ‌ ಎಂದು ಗುತ್ತಿಗೆದಾರರು ಹೇಳುತ್ತಿದ್ದಾರೆ. ಮುಡಾ ಹಗರಣ, ವಾಲ್ಮೀಕಿ ನಿಗಮದ ₹187 ಕೋಟಿ ಲೂಟಿ ಮಾಡಿದರು. ಪ್ರಾಮಾಣಿಕ ಅಧಿಕಾರಿಗಳು ಬಲಿಯಾದರು, 2 ಸಾವಿರ ರೈತರ ಆತ್ಮಹತ್ಯೆಯಾಗಿದೆ. ಎಲ್ಲರ ಸಮಾಧಿ ಮೇಲೆ ಸಾಧನಾ ಸಮಾವೇಶ ನಡೆಸಲು ಹೊರಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇಶ ಯುದ್ಧದ ಸಂದರ್ಭ ಎದುರಿಸುತ್ತಿದೆ. ಈ ವೇಳೆ ಸಮಾವೇಶ ಬೇಕೆ? ಕಾಂಗ್ರೆಸ್ ಗೆ ಭವಿಷ್ಯ ಇಲ್ಲ. ಜನರಿಂದ ಛೀಮಾರಿ ಹಾಕಿಸಿಕೊಳ್ಳುತ್ತಿದೆ. ಸಾಧನಾ ಸಮಾವೇಶ ಮುಗಿದ ಬಳಿಕ ಸರ್ಕಾರ ಉಳಿಯುವುದು ಅನುಮಾನ ಎಂದರು.

ಗ್ರೇಟರ್ ಬೆಂಗಳೂರು ಅಲ್ಲ, ಕ್ವಾರ್ಟರ್ ಬೆಂಗಳೂರು ಆಗಿದೆ. ಮಳೆಯಿಂದ ಇಡೀ ನಗರ ಮುಳುಗಿದೆ. ರಸ್ತೆ ಗುಂಡಿಗಳ ನಗರವಾಗಿದೆ. ಕಸಗಳ ರಾಶಿಯ ನಗರವಾಗಿದೆ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.