ADVERTISEMENT

ಸಹಕಾರ ಸಾರಿಗೆ: ಪುನಶ್ಚೇತನಕ್ಕೆ ಕ್ರಮ

ಸಾರಿಗೆ ಸಚಿವರಿಂದ ಸಭೆ * ಬ್ಯಾಂಕ್‌ ಮೂಲಕ ಆರ್ಥಿಕ ನೆರವಿನ ಆಶಯ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2020, 22:11 IST
Last Updated 19 ಫೆಬ್ರುವರಿ 2020, 22:11 IST
ಸಹಕಾರ ಸಾರಿಗೆಯ ಪುನಶ್ಚೇತನ ಕುರಿತು ಬೆಂಗಳೂರಿನಲ್ಲಿ ಬುಧವಾರ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಚಿವ ಸಿ.ಟಿ.ರವಿ ಇದ್ದರು
ಸಹಕಾರ ಸಾರಿಗೆಯ ಪುನಶ್ಚೇತನ ಕುರಿತು ಬೆಂಗಳೂರಿನಲ್ಲಿ ಬುಧವಾರ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಚಿವ ಸಿ.ಟಿ.ರವಿ ಇದ್ದರು   

ಬೆಂಗಳೂರು: ಸಹಕಾರ ಸಾರಿಗೆಯ ಪುನಶ್ಚೇತನಕ್ಕೆ ಸರ್ಕಾರದಿಂದ ನೆರವಿನ ಭರವಸೆ ದೊರಕದಿದ್ದರೂ, ಬ್ಯಾಂಕ್‌ಗಳ ಮೂಲಕ ಆರ್ಥಿಕ ಚೈತನ್ಯ ನೀಡುವ ಆಶಯ ವ್ಯಕ್ತವಾಗಿದೆ.

ಬುಧವಾರ ಇಲ್ಲಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ವಿಧಾನ ಪರಿಷತ್‌ ಉಪಸಭಾಪತಿ ಎಸ್‌.ಎಲ್‌.ಧರ್ಮೇಗೌಡ, ಶಾಸಕರಾದ ಟಿ.ಡಿ.ರಾಜೇಗೌಡ,ಎಸ್‌.ಎಲ್‌.ಭೋಜೇಗೌಡ, ಕೆಎಸ್ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ, ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿ ಏಕ್‌ರೂಪ್‌ ಕೌರ್‌ ಇದ್ದರು.

‘ಸಮಸ್ಯೆಗೆ ಏನು ಕಾರಣ, ಅದನ್ನು ಬಗೆಹರಿಸುವ ದಾರಿಗಳ ಬಗ್ಗೆ ಮೊದಲು ಅಧ್ಯಯನ ನಡೆಸಬೇಕಾಗಿದೆ. ಜನಪ್ರಿಯವಾಗಿರುವ ಈ ಸಾರಿಗೆ ವ್ಯವಸ್ಥೆಯನ್ನು ಖಂಡಿತ ಮುಚ್ಚುವುದಕ್ಕೆ ಅವಕಾಶ ಕೊಡಬಾರದು, ಬ್ಯಾಂಕ್‌ಗಳಿಂದ ಸಾಲ ದೊರಕಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುವುದು’ ಎಂದು ಸಚಿವ ಲಕ್ಷ್ಮಣ ಸವದಿ ಹೇಳಿದರು.

ADVERTISEMENT

‘ಪರಿಹಾರ ಕ್ರಮಕ್ಕೆ ಮೊದಲಾಗಿ ಹಲವು ಸಾಧ್ಯತೆಗಳ ಬಗ್ಗೆ ಅಧ್ಯಯನ ನಡೆಸಿ ಬರುವುದು ಸೂಕ್ತ. ಉಳಿಸಿಕೊಳ್ಳುವ ಪ್ರಯತ್ನ ಖಂಡಿತವಾಗಿಯೂ ನಡೆಯುತ್ತದೆ. ಸರ್ಕಾರದಿಂದಲೇ ನೇರವಾಗಿ ನೆರವು ದೊರಕಿಸಿಕೊಡುವ ಬಗ್ಗೆ ಈಗಲೇ ಹೇಳಲಾಗದು’ ಎಂದರು.

ಈ ಮಧ್ಯೆ, ಮಲೆನಾಡು ಜನಪರ ಒಕ್ಕೂಟದ ಪರವಾಗಿ ಅನಿಲ್‌ ಹೊಸಕೊಪ್ಪ ಅವರು ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದು, ಆರ್ಥಿಕಸಂಕಷ್ಟ ಎದುರಿಸುತ್ತಿರುವ ಸಹಕಾರ ಸಾರಿಗೆಗೆ ಸರ್ಕಾರ ಅನುದಾನ ನೀಡಿ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

ಕಾರ್ಮಿಕರೇ ಒಗ್ಗೂಡಿ 1991ರಲ್ಲಿ ಸ್ಥಾಪಿಸಿದ್ದ ಸಹಕಾರ ಸಾರಿಗೆಯು ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವ ನೌಕರರು, ರೈತರು, ಸಾಮಾನ್ಯ ನಾಗರಿಕರಿಗೆ ಅನುಕೂಲವಾದ ಸಂಚಾರ ವ್ಯವಸ್ಥೆ ಕಲ್ಪಿಸಿತ್ತು. 75ಕ್ಕೂ ಹೆಚ್ಚು ಬಸ್‍ಗಳ ಸಂಚಾರದಿಂದ ಸಾವಿರಾರು ಜನರಿಗೆ ಹಾಲು, ತರಕಾರಿ, ದವಸ-ಧಾನ್ಯಗಳ ಸಾಗಣೆಗೆ, ಶಾಲಾ-ಕಾಲೇಜುಗಳಿಗೆ ತೆರಳಲು ಸಹಕಾರಿಯಾಗಿತ್ತು. ಇಡೀ ದೇಶದಲ್ಲೇ ಈ ರೀತಿ ಕಾರ್ಮಿಕರು ಸ್ಥಾಪಿಸಿದ್ದ ಮೊದಲ ಸಂಘಟನೆ ಇದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು’ ಎಂಬುದನ್ನು ಅವರು ನೆನಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.