ADVERTISEMENT

ತಾಯಿ ನೆನೆದು ಕಣ್ಣೀರಾದ ಚಿನ್ನದ ಸಾಧಕಿ

ನಾಗರಾಜ ಚಿನಗುಂಡಿ
Published 9 ಜನವರಿ 2021, 19:30 IST
Last Updated 9 ಜನವರಿ 2021, 19:30 IST
ಬಿಎಸ್‌ಸಿ ಕೃಷಿ ಪದವಿಯಲ್ಲಿ ಗರಿಷ್ಠ ಅಂಕಗಳನ್ನು ಪಡೆದು ಸಾಧನೆ ಮಾಡಿದ ಕೊಪ್ಪಳದ ಸಹನಾ ಪೊಲೀಸ್‌ ಪಾಟೀಲ ಅವರಿಗೆ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ ಘಟಿಕೋತ್ಸವದಲ್ಲಿ ಕುಲಪತಿ ಡಾ.ಕೆ.ಎನ್‌.ಕಟ್ಟಿಮನಿ ಹಾಗೂ ಐಸಿಎಆರ್‌ ಉಪಮಹಾನಿರ್ದೇಶಕ ಡಾ.ಆರ್‌.ಸಿ.ಅಗರವಾಲ್‌ ಅವರು ಚಿನ್ನದ ಪದಕಗಳನ್ನು ನೀಡಿ ಗೌರವಿಸಿದರು
ಬಿಎಸ್‌ಸಿ ಕೃಷಿ ಪದವಿಯಲ್ಲಿ ಗರಿಷ್ಠ ಅಂಕಗಳನ್ನು ಪಡೆದು ಸಾಧನೆ ಮಾಡಿದ ಕೊಪ್ಪಳದ ಸಹನಾ ಪೊಲೀಸ್‌ ಪಾಟೀಲ ಅವರಿಗೆ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ ಘಟಿಕೋತ್ಸವದಲ್ಲಿ ಕುಲಪತಿ ಡಾ.ಕೆ.ಎನ್‌.ಕಟ್ಟಿಮನಿ ಹಾಗೂ ಐಸಿಎಆರ್‌ ಉಪಮಹಾನಿರ್ದೇಶಕ ಡಾ.ಆರ್‌.ಸಿ.ಅಗರವಾಲ್‌ ಅವರು ಚಿನ್ನದ ಪದಕಗಳನ್ನು ನೀಡಿ ಗೌರವಿಸಿದರು   

ರಾಯಚೂರು: ಬಿಎಸ್‌ಸಿ ಕೃಷಿ ಪದವಿಯಲ್ಲಿ ಗರಿಷ್ಠ ಅಂಕಗಳನ್ನು ಗಳಿಸಿ ಆರು ಚಿನ್ನದ ಪದಕಗಳ ಗೌರವಕ್ಕೆ ಪಾತ್ರವಾದ ಕೊಪ್ಪಳದ ಸಹನಾ ಪೊಲೀಸ್‌ ಪಾಟೀಲ ಅವರು, ಅಗಲಿದ ತನ್ನ ತಾಯಿಯನ್ನು ನೆನೆದು ಕಣ್ಣೀರಾದ ಭಾವುಕ ಪ್ರಸಂಗ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದ ಬಳಿಕ ಶನಿವಾರ ನಡೆಯಿತು.

ಘಟಿಕೋತ್ಸವ ಸಮಾರಂಭ ಮುಕ್ತಾಯದ ನಂತರ ಪತ್ರಕರ್ತರೆಲ್ಲ ಸಹನಾ ಅವರಿಗೆ ಪಾಲಕರ ವಿವರ ಪ್ರಶ್ನಿಸಿದಾಗ, ಸಹನಾ ಅವರ ಕಣ್ಣಾಲೆಗಳು ತುಂಬಿದವು. ತಾಯಿ ಇಲ್ಲ ಎಂದು ಉತ್ತರಿಸಿ ಕಣ್ಣಲ್ಲಿ ತುಂಬಿಬಂದ ಕಣ್ಣೀರನ್ನು ತಡೆದುಹಿಡಿದು ಚುಟುಕಾಗಿ ಮಾತನಾಡಿದರು.

ಸರ್ಕಾರಿ ಬಸ್‌ ನಿರ್ವಾಹಕ ಹುದ್ದೆಯಲ್ಲಿದ್ದ ತಂದೆ ರಾಮನಗೌಡ ಅವರು ಬಡ್ತಿ ಪಡೆದು ಹೊಸಪೇಟೆ ಡಿಪೋದಲ್ಲಿ ನಿಯಂತ್ರಕರಾಗಿದ್ದಾರೆ. ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ತಾಯಿ ಕಸ್ತೂರಿ ಅವರಿಂದಲೇ ಸ್ಫೂರ್ತಿ ಪಡೆದು ಕೃಷಿ ಪದವಿ ಓದುತ್ತಿರುವುದು ವಿಶೇಷ. ಸಹನಾ ಅವರು ಪಿಯುಸಿ ಹಂತದಲ್ಲಿ ಇರುವಾಗಲೇ ತಾಯಿಯು ಡೆಂಗಿಜ್ವರದಿಂದ ತೀರಿಕೊಂಡರು.

ADVERTISEMENT

‘ತಾಯಿಯ ಕನಸನ್ನು ನನಸು ಮಾಡುವುದಕ್ಕಾಗಿ ಕೃಷಿಯಲ್ಲಿ ಏನಾದರೂ ಸಾಧನೆ ಮಾಡುವ ಮಹದಾಸೆ ಇಟ್ಟುಕೊಂಡು ಕಠಿಣ ಪರಿಶ್ರಮಪಟ್ಟು ಓದಿದ್ದೇನೆ. ಈ ಕಾರಣದಿಂದ ನನಗೆ ಚಿನ್ನದ ಗೌರವ ಸಿಕ್ಕಿದೆ. ಸದ್ಯ ದೆಹಲಿಯ ಐಸಿಎಆರ್‌ನಲ್ಲಿ ಕೃಷಿ ಸ್ನಾತಕೋತ್ತರ ಓದುತ್ತಿದ್ದೇನೆ. ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಕೃಷಿ ಸಂಶೋಧನೆ ಕೈಗೊಳ್ಳುವುದು ನನ್ನ ಉದ್ದೇಶ. ಕೃಷಿ ವಿಜ್ಞಾನಿಯಾಗಿ, ನನ್ನದೇ ಆದ ಕೊಡುಗೆ ನೀಡುತ್ತೇನೆ’ ಎಂದು ಆತ್ಮವಿಶ್ವಾಸದಿಂದ ನುಡಿದರು.

'ನಮ್ಮ ಕುಟುಂಬವು ಕೃಷಿಯಿಂದ ಬೆಳೆದು ಬಂದಿದೆ. ಕೃಷಿಯಲ್ಲಿ ಮಗಳು ಸಾಧನೆ ಮಾಡುತ್ತಿರುವುದನ್ನು ನೋಡಿ ಖುಷಿಯಾಗಿದೆ. ಕೃಷಿ ಪ್ರಗತಿಗೆ ಏನಾದರೂ ಕೊಡುಗೆ ನೀಡುವ ನಿಟ್ಟಿನಲ್ಲಿ ಸಂಶೋಧನೆಗಳನ್ನು ಮಾಡಲಿ ಎಂಬುದು ನನ್ನ ಆಸೆ’ ಎಂದು ತಂದೆ ರಾಮನಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಬಿಎಸ್‌ಸಿ ಕೃಷಿ ಪದವಿಯಲ್ಲಿ ಗರಿಷ್ಠ ಅಂಕಗಳನ್ನು ಪಡೆದ ಪರಿಶಿಷ್ಟ ವಿದ್ಯಾರ್ಥಿಗಳಿಗೆ ನೀಡಿರು ‘ಡಾ.ಬಿ.ಆರ್‌. ಅಂಬೇಡ್ಕರ್‌ ಚಿನ್ನದ ಪದಕ’ ಸೇರಿದಂತೆ ಆರು ಚಿನ್ನದ ಪದಕಗಳನ್ನು ಹಿಡಿದು ಗೆಲುವಿನೊಂದಿಗೆ ಉನ್ನತ ಅಧ್ಯಯನದತ್ತ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.