ADVERTISEMENT

ಅನುಭವಗಳ ಸಂತೆ, ಕಂತೆಯೇ ಸಾಹಿತ್ಯ: ಸುಧಾಮೂರ್ತಿ

ರಾಜ್ಯ ಮಟ್ಟದ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2019, 20:15 IST
Last Updated 2 ಮಾರ್ಚ್ 2019, 20:15 IST
ಚಿಕ್ಕಮಗಳೂರಿನಲ್ಲಿ ಶನಿವಾರ ಸಮ್ಮೇಳನಾಧ್ಯಕ್ಷೆ ಸುಧಾಮೂರ್ತಿ ಮಾತನಾಡಿದರು
ಚಿಕ್ಕಮಗಳೂರಿನಲ್ಲಿ ಶನಿವಾರ ಸಮ್ಮೇಳನಾಧ್ಯಕ್ಷೆ ಸುಧಾಮೂರ್ತಿ ಮಾತನಾಡಿದರು   

ಚಿಕ್ಕಮಗಳೂರು: ಕಲ್ಪನಾಶಕ್ತಿಯನ್ನೂ ಮೀರಿದ್ದು ನಿಜಜೀವನ. ಸುಖ, ದುಃಖ, ಮರುಕ, ಆಗುಹೋಗುಗಳ ಅನುಭವಗಳನ್ನು ಬರೆಯಬೇಕು. ಅನುಭವಗಳ ಸಂತೆ– ಕಂತೆಯೇ ಸಾಹಿತ್ಯ ಎಂದು ಇನ್ಫೊಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಹಾಗೂ ಸಾಹಿತಿ ಸುಧಾಮೂರ್ತಿ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಇಲ್ಲಿನ ಕಲಾಮಂದಿರದಲ್ಲಿ ಶನಿವಾರ ಆರಂಭವಾದ ರಾಜ್ಯಮಟ್ಟದ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನದಿಂದ ಅವರು ಮಾತನಾಡಿದರು.

‘ಕಷ್ಟ–ಸುಖಗಳನ್ನು ಅರ್ಥ ಮಾಡಿಕೊಳ್ಳಬೇಕು. ನಿಜಜೀವನದ ಪ್ರತಿಬಿಂಬ ಬರಹದಲ್ಲಿ ಇರಬೇಕು. ಇನ್ಫೊಸಿಸ್‌ ಪ್ರತಿಷ್ಠಾನದ ಅನುಭವಗಳನ್ನು ಬರೆಯಲು ಶುರು ಮಾಡಿದಾಗಿನಿಂದ ನನ್ನ ಲೇಖನಿ ಹೆಚ್ಚು ಚುರುಕುಗೊಂಡಿದೆ’ ಎಂದು ಹೇಳಿದರು.

ADVERTISEMENT

‘ಹಿಂದಿನ ಕಾಲದಲ್ಲಿ ನಾರಿಯರ ಅನುಭವಗಳು ಮನೆಗೆ ಸೀಮಿತವಾಗಿದ್ದವು. ಆ ಸೀಮಿತ ವ್ಯಾಪ್ತಿಯಲ್ಲೇ ಅವರು ಸಾಹಿತ್ಯ ರಚಿಸುತ್ತಿದ್ದರು. ಈಗ ಅನುಭವವೂ ಹೆಚ್ಚಾಗಿದೆ. ಕನ್ನಡ ಸಾಹಿತ್ಯ ಸಮೃದ್ಧವಾಗಿದೆ. ಲೇಖಕಿಯರೂ ಹೆಚ್ಚಾಗಿದ್ದಾರೆ. ಸ್ಪರ್ಧೆಯೂ ಹೆಚ್ಚಿದೆ. ಹೀಗಾಗಿ, ರಾಜ್ಯಮಟ್ಟದ ಮಹಿಳಾ ಸಾಹಿತ್ಯ ಸಮ್ಮೇಳನವನ್ನು ನಿಯಮಿತವಾಗಿ ಆಯೋಜಿಸುವ ಅಗತ್ಯ ಇದೆ. ಮಹಿಳೆಯರಿಗೆ ಅವರದ್ದೇ ಆದ ಗೊಂದಲ, ಆತಂಕ, ಶಕ್ತಿ, ತಾಕಲಾಟಗಳು ಇರುತ್ತವೆ. ವಿಚಾರ ವಿನಿಮಯ, ಮಹಿಳಾ ವಿಷಯಗಳ ಬಗ್ಗೆ ಇಂಥ ವೇದಿಕೆಗಳಲ್ಲಿ ಚರ್ಚಿಸಲು ಅನುಕೂಲವಾಗುತ್ತದೆ’ ಎಂದರು.

‘ಮಹಿಳೆ–ಪುರುಷ ಇಬ್ಬರೂ ದುಡಿಯಲು ಹೋಗುವ ಈ ಕಾಲಘಟ್ಟದಲ್ಲಿ ಮಹಿಳೆಯರ ಆತಂಕಗಳು ಯಾವುವು, ಸಮಾಜ ಪರಿವರ್ತನೆಯಲ್ಲಿ ಮಹಿಳೆಯರ ಪಾತ್ರ ಏನು, ಮೊದಲಾದ ವಿಷಯಗಳನ್ನು ಚರ್ಚಿಸಲು ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶವಾಗುತ್ತದೆ. ಸಮ್ಮೇಳನದಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸ ಆಗಬೇಕು. ಹೀಗಾಗಿ, ಒಂದು ಅಥವಾ ಎರಡು ವರ್ಷಕ್ಕೊಮ್ಮೆ ಈ ಸಮ್ಮೇಳನ ಆಯೋಜಿಸುವ ಅಗತ್ಯ ಇದೆ’ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಜಾನಕಿ ಅವರು ಉದ್ಘಾಟಿಸಿ, ‘ಮುಂದಿನ ಬಾರಿ ಮಹಿಳೆಯೊಬ್ಬರು ಪರಿಷತ್ತಿನ ಅಧ್ಯಕ್ಷರಾಗಬೇಕು’ ಎಂಬ ಆಶಯ ವ್ಯಕ್ತಪಡಿಸಿದರು.

‘ಮಹಿಳಾ ಸಮ್ಮೇಳನ ಮೊದಲನೆಯದು’

ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮನು ಬಳಿಗಾರ್‌ ಮಾತನಾಡಿ, ‘ಪರಿಷತ್ತಿನಿಂದ ರಾಜ್ಯಮಟ್ಟದ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಇದೇ ಪ್ರಥಮ. ಈ ಹಿಂದೆ ಪುಂಡಲೀಕ ಹಾಲಂಬಿ ಅವರ ಅವಧಿಯಲ್ಲಿ ಮಹಿಳಾ ಸಾಹಿತ್ಯ ಸಮಾವೇಶ ನಡೆದಿತ್ತು’ ಎಂದು ಹೇಳಿದರು.

‘ಎರಡು ವರ್ಷಗಳಿಗೊಮ್ಮೆ ಈ ಸಮ್ಮೇಳನ ಆಯೋಜಿಸುವ ಕುರಿತು ಭಾನುವಾರ ನಡೆಯುವ ಕಾರ್ಯಕಾರಿಣಿಯಲ್ಲಿ ಪ್ರಸ್ತಾಪಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.