ADVERTISEMENT

ಸಾಹಿತ್ಯ ಸಮ್ಮೇಳನಕ್ಕೆ ದೇಣಿಗೆ ಕೇಳಿಲ್ಲ!

​ಪ್ರಜಾವಾಣಿ ವಾರ್ತೆ
Published 10 ಜನವರಿ 2020, 19:45 IST
Last Updated 10 ಜನವರಿ 2020, 19:45 IST
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಉಪಮುಖ್ಯಮಂತ್ರಿ, ಸ್ವಾಗತ ಸಮಿತಿ ಅಧ್ಯಕ್ಷ ಗೋವಿಂದ ಕಾರಜೋಳ ಮಾತನಾಡಿದರು. ಜಿ.‍ಪಂ. ಅಧ್ಯಕ್ಷೆ ಸುವರ್ಣ ಮಾಲಾಜಿ, ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ, ಜಿಲ್ಲಾಧಿಕಾರಿ ಶರತ್ ಬಿ. ಇದ್ದರು
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಉಪಮುಖ್ಯಮಂತ್ರಿ, ಸ್ವಾಗತ ಸಮಿತಿ ಅಧ್ಯಕ್ಷ ಗೋವಿಂದ ಕಾರಜೋಳ ಮಾತನಾಡಿದರು. ಜಿ.‍ಪಂ. ಅಧ್ಯಕ್ಷೆ ಸುವರ್ಣ ಮಾಲಾಜಿ, ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ, ಜಿಲ್ಲಾಧಿಕಾರಿ ಶರತ್ ಬಿ. ಇದ್ದರು   

ಕಲಬುರ್ಗಿ: ನಗರದಲ್ಲಿ ಫೆ.5ರಿಂದ 7ರ ವರೆಗೆ ನಡೆಯುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಈವರೆಗೆ ಒಂದು ರೂಪಾಯಿ ದೇಣಿಗೆಯೂ ಸಂಗ್ರಹವಾಗಿಲ್ಲ. ಸಮ್ಮೇಳನಕ್ಕೆ ನೆರವು ನೀಡುವಂತೆ ಸಂಘಟನಾ ಸಮಿತಿಯವರು ದಾನಿಗಳನ್ನು ಹಾಗೂ ವಾಣಿಜ್ಯೋದ್ಯಮಿಗಳನ್ನು ಈ ವರೆಗೂ ಸಂಪರ್ಕಿಸಿಲ್ಲ!

ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಶುಕ್ರವಾರ ಇಲ್ಲಿ ನಡೆಸಿದ ಸಮ್ಮೇಳನದ ಸಿದ್ಧತಾ ಸಭೆಯಲ್ಲಿ ಈ ವಿಷಯ ಕೇಳಿ ಅಚ್ಚರಿ ವ್ಯಕ್ತಪಡಿಸಿದರು.

ಸಿದ್ಧತೆಯ ವರದಿ ಮಂಡಿಸಿದ ವಿವಿಧ ಸಮಿತಿಯವರು, ‘ಉಪಕರಣ ಖರೀದಿಗೆ ಕೋಟೇಷನ್‌ ಕರೆದಿದ್ದೇವೆ. ಇಷ್ಟು ಹಣ ಬೇಕು’ ಎಂದು ಲಕ್ಷ/ಕೋಟಿ ಲೆಕ್ಕದಲ್ಲಿ ಬೇಡಿಕೆ ಮಂಡಿಸಿದರು. ಸ್ವಚ್ಛತೆಯ ಜವಾಬ್ದಾರಿ ನಿರ್ವಹಿಸಬೇಕಾದ ಮಹಾನಗರ ಪಾಲಿಕೆ, ಆರೋಗ್ಯ ಸೇವೆ ಕಲ್ಪಿಸಬೇಕಾದ ಆರೋಗ್ಯ ಇಲಾಖೆಯವರೂ ಹಣ ಬೇಕು ಎಂದು ಪಟ್ಟಿ ಮುಂದಿಟ್ಟರು.

ADVERTISEMENT

ಇದನ್ನು ಕೇಳಿ ದಂಗಾದ ಕಾರಜೋಳ, ‘ನೀವು ಬೇಡಿಕೆ ಇಟ್ಟಿರುವ ಮೊತ್ತ ಗಮನಿಸಿದರೆ ₹ 100 ಕೋಟಿ ನೀಡಿದರೂ ಸಾಲದು. ಉಳ್ಳವರು–ಇಲ್ಲದವರೆಲ್ಲರೂ ಸೇರಿ ಆಚರಿಸುವ ಕನ್ನಡದ ಹಬ್ಬವಿದು. ಉದಾರವಾಗಿ ದೇಣಿಗೆ ನೀಡುವವರು ಸಾಕಷ್ಟು ಜನ ಇದ್ದಾರೆ. ನೀವು ಈ ವರೆಗೂ ಅವರನ್ನು ಸಂಪರ್ಕಿಸಿಲ್ಲವೇ’ ಎಂದು ಅಚ್ಚರಿ ವ್ಯಕ್ತಪಡಿಸಿದರು.

ಕಾರಜೋಳ ಅವರ ಕೋರಿಕೆ ಮೇರೆಗೆ ಸ್ವಯಂ ಸೇವಕರಿಗಾಗಿ ತಮ್ಮ ಶಿಕ್ಷಣ ಸಂಸ್ಥೆಯಿಂದ 5 ಸಾವಿರ ಟಿ–ಶರ್ಟ್‌ ಕೊಡಲು ಒಪ್ಪಿಕೊಂಡ ವಿಧಾನ ಪರಿಷತ್‌ ಸದಸ್ಯ ಬಿ.ಜಿ. ಪಾಟೀಲ, ಈ ವರೆಗೆ ತಮ್ಮನ್ನು ಯಾರೂ ಸಂಪರ್ಕಿಸಿಯೇ ಇಲ್ಲ ಎಂದರು.

‘ನಮ್ಮಲ್ಲಿ ಶ್ರೀಮಂತರು ಸಾಕಷ್ಟು ಜನ ಇದ್ದಾರೆ. ಆದರೆ, ಕೊಡುಗೈ ಕಡಿಮೆ. ನಮ್ಮ ಪ್ರಯತ್ನ ನಾವು ಮಾಡುತ್ತೇವೆ. ಸರ್ಕಾರದಿಂದ ಹೆಚ್ಚಿನ ಅನುದಾನ ಕೊಡಿ’ ಎಂದು ವಿಧಾನ ಪರಿಷತ್‌ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಮನವಿ ಮಾಡಿದರು.

‘ಇಂತಿಷ್ಟು ದೇಣಿಗೆ ಸಂಗ್ರಹಿಸಿಕೊಡುವಂತೆ ಜನಪ್ರತಿನಿಧಿಗಳಿಗೆ ಗುರಿ ನಿಗದಿ ಮಾಡಿ. ನಾವೆಲ್ಲ ಸಂಗ್ರಹಿಸು
ತ್ತೇವೆ. ಆ ಹಣ ಡಿಸಿ ಖಾತೆಗೆ ಜಮೆ ಆಗಲಿ’ ಎಂದು ಶಾಸಕ ಪ್ರಿಯಾಂಕ್‌ ಖರ್ಗೆ ಸಲಹೆ ನೀಡಿದರು.

ದೇಣಿಗೆ ಸಂಗ್ರಹಿಸಲು ಯಾರನ್ನೆಲ್ಲ ಸಂಪರ್ಕಿಸಬೇಕು ಎಂದು ಜಿಲ್ಲಾಧಿಕಾರಿಗೆ ಸೂಚಿಸಿದ ಕಾರಜೋಳ, ‘ಅವಶ್ಯಬಿದ್ದರೆ ನಾನೂ ಅವರೊಂದಿಗೆ ಮಾತನಾಡಿ ಮನವಿ ಮಾಡುತ್ತೇನೆ. ಸಮ್ಮೇಳನಕ್ಕೆ ಆರ್ಥಿಕ ಮುಗ್ಗಟ್ಟು ಆಗದಂತೆ ಎಲ್ಲರೂ ಸೇರಿ ಕೆಲಸ ಮಾಡೋಣ. ಸರ್ಕಾರವೂ ಕೊಡಬೇಕಾದ ಹಣ ಕೊಟ್ಟೇ ಕೊಡುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.