ADVERTISEMENT

ಸಾಹಿತ್ಯ ಸಮ್ಮೇಳನಾಧ್ಯಕ್ಷರ ಬದಲಾವಣೆಗೆ ಸಚಿವರ ಎದುರೇ ಒತ್ತಾಯ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2019, 20:30 IST
Last Updated 12 ಡಿಸೆಂಬರ್ 2019, 20:30 IST
ಗೋವಿಂದ ಕಾರಜೋಳ
ಗೋವಿಂದ ಕಾರಜೋಳ   

ಕಲಬುರ್ಗಿ: ನಗರದಲ್ಲಿ ಫೆ.5, 6, 7ರಂದು ನಡೆಸಲು ಉದ್ದೇಶಿಸಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನು ಬದಲಾಯಿಸಬೇಕು ಎಂಬ ಕೂಗು ಕೆಲವರಿಂದ ಇಂದಿಲ್ಲಿ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಕೇಳಿಬಂತು.

ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಈ ಭಾಗದ ಹಲವು ಸಾಹಿತಿಗಳು, ಕಲಾವಿದರು, ಕನ್ನಡಪರ ಹೋರಾಟಗಾರರು ಎಚ್‌.ಎಸ್‌.ವೆಂಕಟೇಶಮೂರ್ತಿ ಅವರ ಆಯ್ಕೆಯನ್ನು ಬಲವಾಗಿ ವಿರೋಧಿಸಿದರು.

‘ದಕ್ಷಿಣ ಕರ್ನಾಟಕ ಭಾಗದಲ್ಲಿ ಸಮ್ಮೇಳನ ನಡೆದಾಗಲೂ ಅಲ್ಲಿಯವರನ್ನೇ ಪಟ್ಟಕ್ಕೇರಿಸುತ್ತೀರಿ. ಈಗ ಕಲ್ಯಾಣ ಕರ್ನಾಟಕದಲ್ಲಿ ನಡೆಯುತ್ತಿದ್ದು, ಈಗಲೂ ಆ ಭಾಗದವರನ್ನೇ ಪರಿಗಣಿಸಿದ್ದೀರಿ. ಈ ಭಾಗದಲ್ಲೂ ಸಾಧಕರು, ಸಾಹಿತಿಗಳು ಸಾಕಷ್ಟಿದ್ದಾರೆ. ನಾವೇನು ಊಟದ ಎಲೆ ತೆಗೆಯಲು ಬರಬೇಕೆ?’ ಎಂದೂ ಕೆಲವರು ಅಸಮಾಧಾನ ಹೊರಹಾಕಿದರು.

ADVERTISEMENT

‘ಈಗ ಆಯ್ಕೆ ಮಾಡಿದ ಸರ್ವಾಧ್ಯಕ್ಷರ ಬಗ್ಗೆ ಯಾರಲ್ಲೂ ಒಮ್ಮತವಿಲ್ಲ. ಆದ್ದರಿಂದ ಅವರನ್ನು ಹಿಂದಿಟ್ಟು ಈ ಭಾಗದವರನ್ನೇ ಆಯ್ಕೆ ಮಾಡಬೇಕು. ಅದಕ್ಕೆ ಸಮಯ ಹಿಡಿಯುವುದರಿಂದ ಸಮ್ಮೇಳನದ ದಿನಾಂಕವನ್ನೂ ಮುಂದೂಡಬೇಕು’ ಎಂದರು.

‘ಹಸ್ತಕ್ಷೇಪ ಮಾಡುವುದಿಲ್ಲ: ‘ಕನ್ನಡ ಸಾಹಿತ್ಯ ಪರಿಷತ್ತು ಮತ್ತುಸಮ್ಮೇಳನದ ಚಟುವಟಿಕೆಗಳಲ್ಲಿ ಸರ್ಕಾರ ಯಾವುದೇ ರೀತಿಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಎಲ್ಲ ನಿರ್ಧಾರ ಕನ್ನಡ ಸಾಹಿತ್ಯ ಪರಿಷತ್ತಿಗೇ ಬಿಟ್ಟಿದ್ದು, ಅವರಿಗೆ ‘ಮುಕ್ತ ಹಸ್ತ’ ನೀಡಿದ್ದೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.