ADVERTISEMENT

ಸಾರಿಗೆ ನೌಕರರಿಗೆ ವೇತನ | ಅರ್ಧ ಹಣ ಬಿಡುಗಡೆ: ಪೂರ್ಣ ಸಂಬಳದ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 5 ಮೇ 2020, 19:34 IST
Last Updated 5 ಮೇ 2020, 19:34 IST
   

ಬೆಂಗಳೂರು: ಸಾರಿಗೆ ಇಲಾಖೆಯ ನಾಲ್ಕೂ ನಿಗಮಗಳ (ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯವ್ಯ ಕರ್ನಾಟಕ, ಈಶಾನ್ಯ ಕರ್ನಾಟಕ) 1.35 ಲಕ್ಷ ಸಿಬ್ಬಂದಿಗೆ ಏಪ್ರಿಲ್‌ ತಿಂಗಳ ವೇತನ ಪಾವತಿಗೆ ಅಗತ್ಯವಾದ ಮೊತ್ತದ ಅರ್ಧದಷ್ಟನ್ನು ಮಾತ್ರ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.

ಪೂರ್ಣ ವೇತನ ಪಾವತಿಗೆ ₹332.04 ಕೋಟಿ ಅಗತ್ಯವಿದ್ದು, ಇಲಾಖೆಗೆ ಸರ್ಕಾರ ₹163 ಕೋಟಿ ಬಿಡುಗಡೆ ಮಾಡಿದೆ. ಹೀಗಾಗಿ, ಈ ತಿಂಗಳ ಪೂರ್ಣ ವೇತನ ಒಂದೇ ಬಾರಿಗೆ ಬಟವಾಡೆ ಆಗಬಹುದೇ ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಸಿಬ್ಬಂದಿ ಮಾತ್ರ ಪೂರ್ಣ ವೇತನ ಸಿಗುವ ನಿರೀಕ್ಷೆಯಲ್ಲಿದ್ದಾರೆ.

ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್‌ ಗುಪ್ತಾ, ಆಯುಕ್ತ ಶಿವಕುಮಾರ್‌, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶನ ಶಿವಯೋಗಿ ಸಿ.ಕಳಸದ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ಸೇರಿದಂತೆ ಹಿರಿಯ ಅಧಿಕಾರಿಗಳ ಜೊತೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಮಂಗಳವಾರ ಚರ್ಚೆ ನಡೆಸಿದ್ದಾರೆ.

ADVERTISEMENT

ಏಪ್ರಿಲ್‌ ತಿಂಗಳಲ್ಲಿ ಸಾರಿಗೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಇಲಾಖೆಗೆ ಯಾವುದೇ ನಗದು ಆದಾಯ ಇಲ್ಲ. ಅಲ್ಲದೆ, ಮುಂದಿನ 3 ತಿಂಗಳು ಸಾರಿಗೆ ಸಂಚಾರ ಯಥಾಸ್ಥಿತಿಗೆ ಮರಳುವ ಸಾಧ್ಯತೆಯೂ ಇಲ್ಲ. ಹೀಗಾಗಿ, ಈ ಅವಧಿಯಲ್ಲಿ ನಿಗಮಗಳಿಗೆ ತಗಲುವ ವೆಚ್ಚದ ಬಗ್ಗೆ ಪ್ರಸ್ತಾವ ಸಲ್ಲಿಸುವಂತೆ ಆರ್ಥಿಕ ಇಲಾಖೆ ತಿಳಿಸಿದೆ. ನಾಲ್ಕೂ ನಿಗಮಗಳಲ್ಲಿ ಮುಂದಿನ ದಿನಗಳಲ್ಲಿ ನಿಗದಿತ ಸಂಚಾರದಿಂದ ಬರಬಹುದಾದ ವರಮಾನ ಅಂದಾಜಿಸಿ 2–3 ದಿನಗಳಲ್ಲಿ ಪ್ರಸ್ತಾವ ಸಲ್ಲಿಸಲು ನಿರ್ಧರಿಸಲಾಗಿದೆ’ ಎಂದೂ ಇಲಾಖೆ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.