ADVERTISEMENT

ತಿಮ್ಮಕ್ಕ ವಸ್ತು ಸಂಗ್ರಹಾಲಯ, ಭೈರಪ್ಪ ಸ್ಮಾರಕ: ಸಿದ್ದರಾಮಯ್ಯ ಭರವಸೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 14:52 IST
Last Updated 8 ಡಿಸೆಂಬರ್ 2025, 14:52 IST
<div class="paragraphs"><p>ಸಿದ್ದರಾಮಯ್ಯ</p></div>

ಸಿದ್ದರಾಮಯ್ಯ

   

ಬೆಳಗಾವಿ (ಸುವರ್ಣವಿಧಾನಸೌಧ): ಸಾಲು ಮರದ ತಿಮ್ಮಕ್ಕ ಅವರ ಹೆಸರಿನಲ್ಲಿ ಹಾಸನ ಜಿಲ್ಲೆ ಬೇಲೂರಿನಲ್ಲಿ ವಸ್ತು ಸಂಗ್ರಹಾಲಯ ಮತ್ತು ಖ್ಯಾತ ಕಾದಂಬರಿಕಾರ ಎಸ್‌.ಎಲ್. ಭೈರಪ್ಪ ಅವರ ನೆನಪಿನಲ್ಲಿ ಮೈಸೂರಿನಲ್ಲಿ ಸ್ಮಾರಕ ನಿರ್ಮಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ವಿಧಾನಸಭೆಯಲ್ಲಿ ಸೋಮವಾರ ಸಂತಾಪ ಸೂಚಕ ನಿರ್ಣಯದ ಮೇಲೆ ಮಾತನಾಡಿ, ‘ತಿಮ್ಮಕ್ಕ ಅವರು ಬದುಕಿದ್ದಾಗ ಒಮ್ಮೆ ನನ್ನ ಬಳಿ ಬಂದು ಒಂದು ಮನವಿ ಪತ್ರ ನೀಡಿದ್ದರು. ಬೇಲೂರಿನಲ್ಲಿ ತಮ್ಮ ಹೆಸರಿನಲ್ಲಿ ಒಂದು ವಸ್ತು ಸಂಗ್ರಹಾಲಯ ಸ್ಥಾಪಿಸಬೇಕು ಎಂಬ ಅಂಶವನ್ನು ಅದರಲ್ಲಿ ನಮೂದಿಸಿದ್ದರು’ ಎಂದು ಹೇಳಿದರು.

ADVERTISEMENT

‘ತಿಮ್ಮಕ್ಕ ಬೇಲೂರಿನಲ್ಲಿ ತಮ್ಮ ಜೀವನದ ಹಲವು ವರ್ಷಗಳನ್ನು ಕಳೆದಿದ್ದರು. ಹೀಗಾಗಿ ಅವರ ಆಶಯದ ಪ್ರಕಾರ ಈ ಬೇಡಿಕೆಯನ್ನು ಗಂಭೀರವಾಗಿ ಪರಿಶೀಲಿಸುತ್ತೇನೆ. ತಿಮ್ಮಕ್ಕ ಅವರ ಹೆಸರಿನಲ್ಲಿ ಪರಿಸರ ಪ್ರಶಸ್ತಿ ನೀಡುವುದಾಗಿ ಈಗಾಗಲೇ ಘೋಷಣೆ ಮಾಡಿದ್ದೇವೆ. ಆ ಪ್ರಕಾರ ಪ್ರಶಸ್ತಿ ಸ್ಥಾಪಿಸುತ್ತೇವೆ’ ಎಂದು ಸಿದ್ದರಾಮಯ್ಯ ತಿಳಿಸಿದರು.

‘ಎಸ್‌.ಎಲ್‌.ಭೈರಪ್ಪ ಅವರು ದೇಶ ಕಂಡ ಒಬ್ಬ ಶ್ರೇಷ್ಠ ಕಾದಂಬರಿಕಾರ. ಹಳ್ಳಿಯಲ್ಲಿ ಬಡ ಕುಟುಂಬದಲ್ಲಿ ಜನಿಸಿ ಉನ್ನತ ಸಾಧನೆಯನ್ನು ಮಾಡಿದ ವಿದ್ವಾಂಸ. ಆರು ತಿಂಗಳ ಹಿಂದೆ ಅವರನ್ನು ಭೇಟಿ ಮಾಡಿದ್ದೆ. ಪರ್ವ ಅವರ ಜನಪ್ರಿಯ ಕಾದಂಬರಿ. ಅವರ ಜತೆ ಸೈದ್ಧಾಂತಿಕವಾಗಿ ಭಿನ್ನಾಭಿಪ್ರಾಯವಿತ್ತು, ಆದರೆ ಅವರೊಬ್ಬ ಸರಳ–ಸಜ್ಜನಿಕೆಯ ವ್ಯಕ್ತಿ. ಅವರ ಕೆಲವು ಕಾದಂಬರಿಗಳನ್ನು ಓದಿದ್ದೇನೆ. ಶ್ರೇಷ್ಠ ಕಾದಂಬರಿಕಾರ ಎಂಬ ಗೌರವವಿದೆ’ ಎಂದರು.

ಸಂತಾಪ ಸೂಚನೆಯ ಬಳಿಕ ವಿಧಾನಸಭೆ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.