ADVERTISEMENT

‘26 ಕ್ಷೇತ್ರಗಳಲ್ಲಿ ನಾನು ಹೇಳಿದವರಿಗೆ ವರಿಷ್ಠರು ಟಿಕೆಟ್‌ ಕೊಟ್ಟಿದ್ದಾರೆ’

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2019, 19:35 IST
Last Updated 5 ಏಪ್ರಿಲ್ 2019, 19:35 IST
ಸಂವಾದದಲ್ಲಿ ಬಿ.ಎಸ್.ಯಡಿಯೂರಪ್ಪ ಮಾತನಾಡಿದರು– ಪ್ರಜಾವಾಣಿ ಚಿತ್ರ
ಸಂವಾದದಲ್ಲಿ ಬಿ.ಎಸ್.ಯಡಿಯೂರಪ್ಪ ಮಾತನಾಡಿದರು– ಪ್ರಜಾವಾಣಿ ಚಿತ್ರ   

ಬೆಂಗಳೂರು: ‘26 ಲೋಕಸಭಾ ಕ್ಷೇತ್ರಗಳಲ್ಲಿ ನಾನು ಹೇಳಿದ ಅಭ್ಯರ್ಥಿಗಳಿಗೆ ಪಕ್ಷ ಟಿಕೆಟ್‌ ನೀಡಿದೆ’ ಎಂದುಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ನಗರದ ಪ್ರೆಸ್‌ ಕ್ಲಬ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು,‘ ಬೆಂಗಳೂರು ದಕ್ಷಿಣ ಹಾಗೂ ಚಿಕ್ಕೋಡಿ ಕ್ಷೇತ್ರಗಳ ಅಭ್ಯರ್ಥಿಗಳ ಕುರಿತು ಕೇಂದ್ರ ನಾಯಕರು ತೀರ್ಮಾನ ಕೈಗೊಂಡಿದ್ದಾರೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ 2 ಲಕ್ಷ ಮತಗಳ ಅಂತರದಿಂದ ಗೆಲ್ಲಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಗುಲಬರ್ಗಾ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಶೇ 100ರಷ್ಟು ಹಿನ್ನಡೆ ಸಾಧಿಸಲಿದ್ದಾರೆ. ಕೋಲಾರ ಹಾಗೂ ತುಮಕೂರಿನಲ್ಲಿ ನಾವೇ ಗೆಲ್ಲಲಿದ್ದೇವೆ. ಚಿಕ್ಕಬಳ್ಳಾಪುರದಲ್ಲಿ ನಾವು ಈಗಾಗಲೇ ಗೆದ್ದಾಗಿದೆ. ಗೆಲುವಿನ ಅಂತರ ಎಷ್ಟು ಎಂಬುದು ಗೊತ್ತಾಗಬೇಕಿದೆ ಅಷ್ಟೇ. ನಾವು ರಾಜ್ಯದಲ್ಲಿ ಗೆಲ್ಲುವ 22 ಸ್ಥಾನಗಳು ಯಾವುವು ಎಂಬುದನ್ನು ಮುಚ್ಚಿದ ಲಕೋಟೆಯಲ್ಲಿ ನಿಮಗೆ ನೀಡುತ್ತೇನೆ’ ಎಂದೂ ಹೇಳಿದರು.

ADVERTISEMENT

‘ಲೋಕಸಭಾ ಚುನಾವಣೆ ಬಳಿಕ ಪಕ್ಷದಲ್ಲಿ ಯಾವುದೇ ಸ್ಥಾನಮಾನ ಹೊಂದದೇ ಇದ್ದರೂ ರಾಜ್ಯದಾದ್ಯಂತ ಸಂಚಾರ ಮಾಡಿ ಪಕ್ಷವನ್ನು ಇನ್ನಷ್ಟು ಬಲಪಡಿಸುತ್ತೇನೆ.30 ವರ್ಷಗಳಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಿ ಪಕ್ಷ ಬೆಳೆಸಿದ್ದೇನೆ. ಒಂದು ವೇಳೆ ಅಧ್ಯಕ್ಷ ಸ್ಥಾನ ಹೋದರೂ ವಿರೋಧ ಪಕ್ಷದ ನಾಯಕ ಸ್ಥಾನ ಇದ್ದೇ ಇರುತ್ತದೆ ಅಲ್ಲವೇ’ ಎಂದೂ ಮರು ಪ್ರಶ್ನೆ ಹಾಕಿದರು.

‘ಚುನಾವಣಾ ಪ್ರಚಾರಕ್ಕೆ ಹೆಲಿಕಾಪ್ಟರ್‌ ಸಿಗುತ್ತಿಲ್ಲ’ ಎಂಬ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ನನಗೂ ಕಳೆದ ಒಂದು ವಾರದಿಂದ ಸರಿಯಾಗಿ ಹೆಲಿಕಾಪ್ಟರ್‌ ಸಿಕ್ಕಿರಲಿಲ್ಲ. ಒಂದು ಎಂಜಿನ್‌ ಇರುವ ಹೆಲಿಕಾಪ್ಟರ್‌ನಲ್ಲೇ ಕಷ್ಟಪಟ್ಟು ಓಡಾಡುತ್ತಿದ್ದೇನೆ. ಚುನಾವಣೆ ಇರುವುದಿಂದ ಎಲ್ಲರೂ ಹೆಲಿಕಾಪ್ಟರ್‌ ಬುಕ್‌ ಮಾಡಿರಬಹುದು. ಹಾಗಾಗಿ, ವ್ಯತ್ಯಯ ಆಗಿರಬಹುದು’ ಎಂದರು.

‘ಯಡಿಯೂರಪ್ಪ ಉತ್ತರಾಧಿಕಾರಿ ಯಾರು’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ರಾಜಕಾರಣದಲ್ಲಿ ಯಾರೂ ಶಾಶ್ವತ ಅಲ್ಲ. ಅಟಲ್‌ ಬಿಹಾರಿ ವಾಜಪೇಯಿ ಅವರ ಉತ್ತರಾಧಿಕಾರಿ ಯಾರು ಎಂಬುದು ಗೊತ್ತಿರಲಿಲ್ಲ. ಗುಜರಾತ್‌ನಿಂದ ನರೇಂದ್ರ ಮೋದಿ ಬಂದರು. ಹಾಗೆಯೇ, ನಮ್ಮಲ್ಲೂ ಆ ಕಾಲಕ್ಕೆ ಯಾರಾದರೂ ಬರುತ್ತಾರೆ’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.