ADVERTISEMENT

ಗ್ರಾಮ ಪಂಚಾಯಿತಿ ಸದಸ್ಯನ ಭೇಟಿಗೆ ಬಂದ ನಟ ಉಪೇಂದ್ರ

​ಪ್ರಜಾವಾಣಿ ವಾರ್ತೆ
Published 13 ಜನವರಿ 2021, 10:14 IST
Last Updated 13 ಜನವರಿ 2021, 10:14 IST
ತ್ಯಾವಣಿಗೆ ಸಮೀಪದ ಅರೇಹಳ್ಳಿ ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿದ್ದ ಉಪೇಂದ್ರ ಅವರಿಗೆ ಗ್ರಾಮ ಪಂಚಾಯಿತಿ ಸದಸ್ಯ ಚೇತನ್ ಹೂವಿನ ಸಸಿ ನೀಡಿದರು.
ತ್ಯಾವಣಿಗೆ ಸಮೀಪದ ಅರೇಹಳ್ಳಿ ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿದ್ದ ಉಪೇಂದ್ರ ಅವರಿಗೆ ಗ್ರಾಮ ಪಂಚಾಯಿತಿ ಸದಸ್ಯ ಚೇತನ್ ಹೂವಿನ ಸಸಿ ನೀಡಿದರು.   

ತ್ಯಾವಣಿಗೆ (ದಾವಣಗೆರೆ): ಚನ್ನಗಿರಿ ತಾಲ್ಲೂಕಿನ ಕಾರಿಗನೂರು ಗ್ರಾಮ ಪಂಚಾಯಿತಿಗೆ ಈಚೆಗೆ ನಡೆದ ಚುನಾವಣೆಯಲ್ಲಿ ಗೆದ್ದಿರುವ ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿ ಚೇತನ್‌ ಅವರನ್ನು ಅಭಿನಂದಿಸಲು ಪ್ರಜಾಕೀಯ ಪಕ್ಷದ ಸಂಸ್ಥಾಪಕ, ನಟ ಉಪೇಂದ್ರ ಅವರು ಮಂಗಳವಾರ ಅರೇಹಳ್ಳಿ ಗ್ರಾಮಕ್ಕೆ ದಿಢೀರ್‌ ಭೇಟಿ ನೀಡಿ ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದರು.

‘ಪ್ರಜಾಕೀಯ ಪಕ್ಷದಲ್ಲಿ ಪ್ರಜೆಗಳೇ ಪ್ರಭುಗಳು. ಗೆದ್ದಿರುವ ಅಭ್ಯರ್ಥಿ ಸೇವಕ’ ಎಂದು ಹೇಳಿದ ಉಪೇಂದ್ರ, ಗ್ರಾಮಸ್ಥರನ್ನು ಹುರಿದುಂಬಿಸಿದರು. ‘ವರ್ಷಕ್ಕೊಮ್ಮೆ ಗ್ರಾಮಕ್ಕೆ ಭೇಟಿ ನೀಡುತ್ತೇನೆ. ನಿಮಗೆ ಚಾಲೇಂಜ್ ಮಾಡುತ್ತೇನೆ; ಚೇತನ್ ಅವರಿಗೆ ಕೆಲಸ ನೀಡಿ. ಗ್ರಾಮವನ್ನು ರಾಜ್ಯದಲ್ಲಿಯೇ ಮಾದರಿ ಗ್ರಾಮ ಮಾಡಲು ಪಣ ತೊಡಿ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ತೇಜಸ್ವಿ ವಿ. ಪಟೇಲ್ ಮಾತನಾಡಿ, ‘ಗ್ರಾಮದ ಜನರೇ ಉತ್ಸಾಹಿ ಯುವಕ ಚೇತನ್ ಅವರನ್ನು ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಂಡು ಚುನಾವಣೆಯಲ್ಲಿ ಗೆಲ್ಲಿಸಿರುವುದು ಉತ್ತಮ ಬೆಳವಣಿಗೆ. ಇದೊಂದು ಅಪರೂಪದ ಘಟನೆ. ಈ ದಿಕ್ಕಿನಲ್ಲಿ ಗ್ರಾಮಸ್ಥರು ನಡೆದರೆ ಗಾಂಧಿಯವರ ಗ್ರಾಮ ಸ್ವರಾಜ್ಯದ ಕನಸು ಈಡೇರಿದಂತಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಚನ್ನಗಿರಿ ತಾಲ್ಲೂಕಿನ ಜನರು ಪ್ರಜ್ಞಾವಂತ ಮತದಾರರು ಎಂಬುದು ಮತ್ತೊಮ್ಮೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸಾಬೀತಾಗಿದೆ. ಈ ದಿಕ್ಕಿನಲ್ಲಿಯೇ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ವಿಧಾನಸಭೆ, ಸಂಸತ್ ಚುನಾವಣೆಯಲ್ಲಿಯೂ ಸಾಗಬೇಕು’ ಎಂದು ಸಲಹೆ ನೀಡಿದರು.

ಉಪೇಂದ್ರ ಅವರನ್ನು ನೋಡಲು ಅಕ್ಕಪಕ್ಕದ ಗ್ರಾಮಸ್ಥರು, ಯುವಕರು, ಕಾಲೇಜು ಹುಡುಗ–ಹುಡುಗಿಯರು, ಚಿಣ್ಣರು ಮುಗಿಬಿದ್ದರು.

ಮಹಿಳೆಯರು ಲಂಬಾಣಿ ನೃತ್ಯ ಮಾಡಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.