ADVERTISEMENT

ಬೆಳಗಾವಿ: ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಸಚಿವತ್ರಯರ ಮಾಲಾರ್ಪಣೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2020, 8:01 IST
Last Updated 29 ಆಗಸ್ಟ್ 2020, 8:01 IST
ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಸಚಿವರಾದ ರಮೇಶ್ ಜಾರಕಿಹೊಳಿ, ಕೆ‌.ಎಸ್. ಈಶ್ವರಪ್ಪ ಮಾಲಾರ್ಪಣೆ ಮಾಡಿದರು.
ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಸಚಿವರಾದ ರಮೇಶ್ ಜಾರಕಿಹೊಳಿ, ಕೆ‌.ಎಸ್. ಈಶ್ವರಪ್ಪ ಮಾಲಾರ್ಪಣೆ ಮಾಡಿದರು.   
""

ಬೆಳಗಾವಿ: ಪೀರನವಾಡಿಯಲ್ಲಿ ಮರುಪ್ರತಿಷ್ಠಾಪನೆ ಮಾಡಲಾಗಿರುವ ಸಂಗೊಳ್ಳಿರಾಯಣ್ಣ ಪ್ರತಿಮೆಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ‌.ಎಸ್. ಈಶ್ವರಪ್ಪ ಹಾಗೂ ಅಬಕಾರಿ ಸಚಿವ ನಾಗೇಶ್‌ ಅವರು ಶನಿವಾರ ಮಾಲಾರ್ಪಣೆ ಮಾಡಿದರು.

ಇದಕ್ಕೂ ಮುಂಚೆ ಪೀರನವಾಡಿ ವೃತ್ತದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೂ ಮಾಲಾರ್ಪಣೆ ಮಾಡಿದರು. ವಿಧಾನಸಭೆಯ ಉಪಾಧ್ಯಕ್ಷ ಆನಂದ ಮಾಮನಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಉಪಸ್ಥಿತರಿದ್ದರು.

‘ಶಿವಾಜಿ– ರಾಯಣ್ಣ ಇಬ್ಬರೂ ರಾಷ್ಟ್ರ ಪುರುಷರು’
ಬೆಳಗಾವಿ: ‘ಶಿವಾಜಿ– ರಾಯಣ್ಣ ಇಬ್ಬರೂ ರಾಷ್ಟ್ರಪುರುಷರಾಗಿದ್ದು ಅವರನ್ನು ಜಾತಿಗೆ ಸೀಮಿತಗೊಳಿಸಲು ಸಾಧ್ಯವಿಲ್ಲ. ನಾವು ಇಬ್ಬರಿಗೂ ಗೌರವ ಕೊಡುತ್ತೇವೆ. ಅವರ ಅಭಿಮಾನಿಗಳು ಶಾಂತಿ ಕಾಪಾಡಲು ಸಂಪೂರ್ಣವಾಗಿ ಸಹಕಾರ ನೀಡಿದ್ದರಿಂದ ಸಮಸ್ಯೆ ಇತ್ಯರ್ಥಗೊಳಿಸಲು ಸಾಧ್ಯವಾಯಿತು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಇಲ್ಲಿ ಶನಿವಾರ ಹೇಳಿದರು.

‘ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿವಾದಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣಗಳನ್ನು ವಾಪಸ್ ಪಡೆಯುವ ಕುರಿತು ಮುಖ್ಯಮಂತ್ರಿ ಜೊತೆ ಮಾತನಾಡುತ್ತೇನೆ. ರಾಯಣ್ಣನ ಮೂರ್ತಿಯನ್ನು ಅಧಿಕೃತಗೊಳಿಸುವ ಕುರಿತು ಜಿಲ್ಲಾಧಿಕಾರಿ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸುತ್ತಾರೆ. ಈ ಬಗ್ಗೆ ನಾನು ಮಾತನಾಡುವುದಿಲ್ಲ’ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ADVERTISEMENT

ರಾಯಣ್ಣ ಸಮಾಧಿಗೆ ಭೇಟಿ
ಬೆಳಗಾವಿ:
ಜಿಲ್ಲೆಯ ಖಾನಾಪುರ ತಾಲ್ಲೂಕಿನ ನಂದಗಡದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನನ್ನು ಬ್ರಿಟಿಷರು ಗಲ್ಲಿಗೇರಿಸಿದ ಸ್ಥಳಕ್ಕೆ ಸಚಿವರಾದ ರಮೇಶ ಜಾರಕಿಹೊಳಿ‌ ಮತ್ತು ಕೆ.ಎಸ್. ಈಶ್ವರಪ್ಪ ಶನಿವಾರ ಭೇಟಿ ನೀಡಿದರು.

ಅಲ್ಲಿರುವ ಹನುಮಂತನ ಮೂರ್ತಿಗೆ ಮತ್ತು ನಂದಗಡ ಗ್ರಾಮದ ವೃತ್ತದಲ್ಲಿ‌ರುವ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಳಿಕ ರಾಯಣ್ಣ ಸಮಾಧಿ ಸ್ಥಳಕ್ಕೂ ಭೇಟಿ ನೀಡಿ ನಮನ ಸಲ್ಲಿಸಿದರು.

ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಸಚಿವರು ಮಾಲಾರ್ಪಣೆ ಮಾಡಿದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.