ADVERTISEMENT

ಪ್ರತಿಭಟನೆ ನಡುವೆ ಗುತ್ತಿಗೆದಾರ ಸಂತೋಷ್ ಪಾಟೀಲ ಅಂತ್ಯಕ್ರಿಯೆ

ಭಾಗವಹಿಸದ ಬಿಜೆಪಿಯವರು; ಶಾಸಕಿ ಲಕ್ಷ್ಮಿ ಸೇರಿ ಕಾಂಗ್ರೆಸ್‌ ನಾಯಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2022, 11:33 IST
Last Updated 14 ಏಪ್ರಿಲ್ 2022, 11:33 IST
ಸಂತೋಷ್ ‍ಪಾಟೀಲ ಅಂತ್ಯಕ್ರಿಯೆ ವೇಳೆ ಪತ್ನಿ ಜಯಶ್ರೀ ಪಾಟೀಲ (ಬಲತುದಿ) ಹಾಗೂ ಬಂಧುಗಳ ಆಕ್ರಂದನ
ಸಂತೋಷ್ ‍ಪಾಟೀಲ ಅಂತ್ಯಕ್ರಿಯೆ ವೇಳೆ ಪತ್ನಿ ಜಯಶ್ರೀ ಪಾಟೀಲ (ಬಲತುದಿ) ಹಾಗೂ ಬಂಧುಗಳ ಆಕ್ರಂದನ   

ಬೆಳಗಾವಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್. ಈಶ್ವರಪ್ಪ ಅವರ ವಿರುದ್ಧ ಕಮಿಷನ್ ಆರೋಪ ಮಾಡಿ ಆತ್ಮಹತ್ಯೆಗೆ ಶರಣಾದ ಗುತ್ತಿಗೆದಾರ ಮತ್ತು ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ ಅವರ ಅಂತ್ಯಕ್ರಿಯೆ ತಾಲ್ಲೂಕಿನ ಸ್ವಗ್ರಾಮ ಬಡಸ ಕೆ.ಎಚ್.ನಲ್ಲಿರುವ ಅವರ ಜಮೀನಿನಲ್ಲಿ, ವೀರಶೈವ ಲಿಂಗಾಯತ ಸಂಪ್ರದಾಯದಂತೆ ಗುರುವಾರ ಬೆಳಿಗ್ಗೆ ನಡೆಯಿತು.

‘ಕುಟುಂಬಕ್ಕೆ ಪರಿಹಾರ ಸಿಗುವವರೆಗೂ ಅಂತ್ಯಕ್ರಿಯೆ ನಡೆಸಬಾರದು’ ಎಂದು ಕೆಲವರು ಮತ್ತು ‘ಅಂತ್ಯಕ್ರಿಯೆ ಜರುಗಲಿ, ನಂತರ ಹೋರಾಡೋಣ’ ಎಂದು ಕೆಲವರು ಹೇಳಿದ್ದರಿಂದ ಗೊಂದಲ ಉಂಟಾಯಿತು. ಬಂಧುಗಳಲ್ಲೇ ಭಿನ್ನ ಅಭಿಪ್ರಾಯಗಳು ವ್ಯಕ್ತವಾದವು. ಕಾಂಗ್ರೆಸ್‌ ಬೆಂಬಲಿತರಲ್ಲಿ ಕೆಲವರು ಪ್ರತಿಭಟನೆಯನ್ನೂ ನಡೆಸಿದರು. ಇದರ ನಡುವೆಯೇ ಅಂತ್ಯಕ್ರಿಯೆ ನೆರವೇರಿಸಲಾಯಿತು. ಬಿಜೆಪಿ ಕಾರ್ಯಕರ್ತರಾಗಲಿ, ಮುಖಂಡರಾಗಲಿ ಪಾಲ್ಗೊಳ್ಳದಿದ್ದಕ್ಕೆ ಕುಟುಂಬದವರಿಂದ ಆಕ್ರೋಶ ವ್ಯಕ್ತವಾಯಿತು. ಮೃತದೇಹಕ್ಕೆ ಕೇಸರಿ ಶಾಲು ಹಾಕಲಾಗಿತ್ತು.

ಪಟ್ಟು, ಮನವೊಲಿಕೆ:

ADVERTISEMENT

ಉಡುಪಿಯಿಂದ ಮೃತದೇಹದೊಂದಿಗೆ ಬೆಳಿಗ್ಗೆ ಎಂ.ಕೆ. ಹುಬ್ಬಳ್ಳಿ ಸಮೀಪ ಬರುತ್ತಿದ್ದಂತೆಯೇ ತಮಗೆ ಎದುರಾದ ಡಿಸಿಪಿ ರವೀಂದ್ರ ಗಡಾದಿ, ಎಸಿಪಿ ಎನ್‌.ವಿ. ಭರಮನಿ ಮೊದಲಾದ ಪೊಲೀಸ್ ಆಧಿಕಾರಿಗಳೊಂದಿಗೆ ಮಾತನಾಡಿದ ಕುಟುಂಬದವರು, ‘ಆರೋಪಿಗಳನ್ನು ಬಂಧಿಸುವವರೆಗೂ ನಾವು ಅಂತ್ಯಕ್ರಿಯೆ ನಡೆಸುವುದಿಲ್ಲ’ ಎಂದು ಪಟ್ಟು ಹಿಡಿದರು. ‘ಆರೋಪಿಗಳನ್ನು ಬಂಧಿಸುವುದಕ್ಕೆ ಬೇಕಾದ ಎಲ್ಲ ದಾಖಲೆಗಳೂ ಇವೆ. ತಡವೇಕೆ ಮಾಡುತ್ತಿದ್ದೀರಿ’ ಎಂದು ಪ್ರಶ್ನಿಸಿದರು. ‘ಪ್ರಕರಣ ಉಡುಪಿ ಠಾಣೆಯಲ್ಲಿ ದಾಖಲಾಗಿದ್ದು, ಅಲ್ಲಿನ ಪೊಲೀಸರು ಕ್ರಮ ಕೈಗೊಳ್ಳಬೇಕಾಗುತ್ತದೆ. ನಿಮ್ಮ ಮನವಿಯನ್ನು ಅವರಿಗೆ ತಲುಪಿಸುತ್ತೇವೆ’ ಎಂದು ಅಧಿಕಾರಿಗಳು ಮನವರಿಕೆ ಮಾಡಿದ ನಂತರ ಮೃತದೇಹವನ್ನು ಬಡಸ ಕೆ.ಎಚ್. ಗ್ರಾಮಕ್ಕೆ ಸಾಗಿಸಲಾಯಿತು.

ಮುಗಿಲು ಮುಟ್ಟಿದ ಆಕ್ರಂದನ:

ಮನೆಯ ಬಳಿಗೆ ಮೃತದೇಹ ತರಲಾಗುತ್ತಿದ್ದಂತೆಯೇ ತಾಯಿ ಪಾರ್ವತಿ ಪಾಟೀಲ, ಪತ್ನಿ ಜಯಶ್ರೀ ಪಾಟೀಲ ಹಾಗೂ ಕುಟುಂಬದವರು ಮತ್ತು ಬಂಧುಗಳ ಆಕ್ರಂದನ ಮುಗಿಲು ಮುಟ್ಟಿತು.

ಸ್ಥಳಕ್ಕೆ ಬಂದ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ, ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮುಖಂಡ ಅಡಿವೇಶ ಇಟಗಿ ಮೊದಲಾದವರು, ‘ಪರಿಹಾರ ಸಿಗುವವರೆಗೂ ಹೋರಾಡೋಣ. ಸ್ಥಳಕ್ಕೆ ಬಿಜೆಪಿ ಶಾಸಕರು ಬರಲಿ. ಅಲ್ಲಿವರೆಗೆ ಮೃತದೇಹವನ್ನು ಎತ್ತುವುದು ಬೇಡ’ ಎಂದು ಸಲಹೆ ನೀಡಿದರು. ಇದಕ್ಕೆ ಕೆಲವರಿಂದ ಬೆಂಬಲ–ಬಹುತೇಕರಿಂದ ವಿರೋಧ ವ್ಯಕ್ತವಾಯಿತು. ಕೆಲವರು ಕೈ–ಕೈಮಿಲಾಯಿಸುವ ಹಂತಕ್ಕೂ ಪರಿಸ್ಥಿತಿ ಹೋಗಿತ್ತು. ಪೊಲೀಸರು ಮಧ್ಯಪ್ರವೇಶಿಸಿ ತಿಳಿಗೊಳಿಸಿದರು.

ಕೆಲ ಹೊತ್ತಿನ ಬಳಿಕ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಬಂದು ತೀರ್ಥ ಪ್ರೋಕ್ಷಣೆ ಮಾಡಿ ತೆರಳಿದರು. ಬಳಿಕ ಮೃತದೇಹದ ಅಂತಿಮ ಮೆರವಣಿಗೆ ನಡೆಯಿತು.

ಕಾಂಗ್ರೆಸ್‌ನವರಿಂದ ಪ್ರತಿಭಟನೆ:

ಅಂತ್ಯಕ್ರಿಯೆ ಸ್ಥಳದಲ್ಲೂ ಒಂದು ಗುಂಪು ವಿರೋಧ ವ್ಯಕ್ತಪಡಿಸಿತು. ‘ಊರಿನಲ್ಲಿ ಎರಡು ಮದುವೆಗಳಿವೆ. ಕುಟುಂಬದವರು, ಹೆಣ್ಣು ಮಕ್ಕಳು ಎರಡು ದಿನಗಳಿಂದ ಊಟ ಮಾಡಿಲ್ಲ. ಹೀಗಾಗಿ, ಅಂತ್ಯಕ್ರಿಯೆ ವಿಳಂಬ ಮಾಡುವುದು ಬೇಡ’ ಎಂದು ಕೆಲವರು ಹೇಳಿದರು. ಅದಕ್ಕೆ ಲಕ್ಷ್ಮಿ ಹೆಬ್ಬಾಳಕರ, ಚನ್ನರಾಜ, ಅಡಿವೇಶ ಮೊದಲಾದವರು ಆಕ್ಷೇಪ ವ್ಯಕ್ತಪಡಿಸಿದರು. ಅಡಿವೇಶ ಅವರು ಗುಂಡಿ ತೆಗೆದಿದ್ದ ಮಣ್ಣಿನ ಮೇಲೆ ನಿಂತು, ನನ್ನ ಸಮೇತ ಗುಂಡಿ ಮುಚ್ಚಿಬಿಡಿ ಎಂದು ಬೆದರಿಕೆ ಒಡ್ಡಿದರು. ಬಿಜೆಪಿ ನಾಯಕರು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘ನಗರದಲ್ಲೇ ಇರುವ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಸ್ಥಳಕ್ಕೆ ಬರಲಿ. ಅವರ ಪಕ್ಷದ ಕಾರ್ಯಕರ್ತನ ಸಾವಿಗೆ ನ್ಯಾಯ ದೊರಕಿಸಿಕೊಡಲಿ’ ಎಂದು ಒತ್ತಾಯಿಸಿದರು.

ಮಾನವೀಯತೆ ಸತ್ತು ಹೋಗಿದೆಯೇ?:

ದನಿಗೂಡಿಸಿದ ಪಂಚಮಸಾಲಿ ಸಮಾಜ ರಾಷ್ಟ್ರೀಯ ಯುವ ಘಟಕದ ಅಧ್ಯಕ್ಷ ರಾಜಶೇಖರ ಮೆಣಸಿನಕಾಯಿ, ‘ನಾವಿಲ್ಲಿ ರಾಜಕೀಯ ಮಾಡಲು ಬಂದಿಲ್ಲ. ಸಮಾಜದ ಕುಟುಂಬಕ್ಕೆ ನೋವಾಗಿದ್ದರಿಂದ ಬಂದಿದ್ದವೆ. ಶಿವಮೊಗ್ಗದ ಹರ್ಷ ಕುಟುಂಬಕ್ಕೆ ಪರಿಹಾರ ಕೊಡಲಾಗಿದೆ. ಈ ಲಿಂಗಾಯತ ಕುಟುಂಬಕ್ಕೇಕೆ ಸರ್ಕಾರ ಪರಿಹಾರ ನೀಡಿಲ್ಲ? ಆ ಪಕ್ಷದವರು ಬರಲಿಲ್ಲವೇಕೆ?’ ಎಂದು ಕೇಳಿದರು.

‘ಬಿಜೆಪಿಯವರಲ್ಲಿ ಮಾನವೀಯತೆ ಸತ್ತು ಹೋಗಿದೆಯೇ? ತಮ್ಮ ಪಕ್ಷದ ಕಾರ್ಯಕರ್ತನ ಅಂತ್ಯಸಂಸ್ಕಾರಕ್ಕೆ ಬರುವಷ್ಟು ಕರುಣೆ ಇಲ್ಲವೇ? ನೂರಾರು ಪೊಲೀಸರನ್ನು ನಿಯೋಜಿಸಿರುವುದೇಕೆ’ ಎಂದು ಕೇಳಿದರು.

ಕೆಲವರ ವಿರೋಧದ ನಡುವೆಯೇ, ಜೆಸಿಬಿಯಿಂದ ಮಣ್ಣು ಮುಚ್ಚಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಪ್ರತಿಭಟನೆ ಮುನ್ಸೂಚನೆ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್‌ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.