ಬೆಂಗಳೂರು: ಏರ್‌ಟ್ಯಾಕ್ಸಿ ಸೇವೆಗೆ ಆಧುನಿಕ ಸ್ಪರ್ಶ ನೀಡಲು ಹೊರಟಿರುವ ಬೆಂಗಳೂರಿನ ನವೋದ್ಯಮ ‘ಸರಳಾ ಏವಿಯೇಷನ್’ ಎಲ್ಲರ ಕಣ್ಸೆಳೆಯುವಂಥ, ಇತ್ತ ವಿಮಾನವೂ ಅಲ್ಲದ, ಅತ್ತ ಹೆಲಿಕಾಪ್ಟರ್ ಸಹ ಅಲ್ಲದ ಭಿನ್ನ ವೈಮಾನಿಕ ವಾಹನವನ್ನು ಅಭಿವೃದ್ಧಿಪಡಿಸಿದೆ.
ವಿಮಾನ ಮತ್ತು ಹೆಲಿಕಾಪ್ಟರ್‌ನ ಕಾರ್ಯಾಚರಣೆ ತತ್ವಗಳ ಮಿಶ್ರಣದಂತಿರುವ ಈ ಅತ್ಯಾಕರ್ಷಕ ವೈಮಾನಿಕ ವಾಹನಕ್ಕೆ ಕಂಪನಿಯು ‘ಶೂನ್ಯ’ ಎಂದು ಹೆಸರಿಟ್ಟಿದೆ. ಸಂಪೂರ್ಣ ವಿದ್ಯುತ್ ಚಾಲಿತವಾಗಿರುವ ‘ಶೂನ್ಯ’ದ ಪ್ರಾಯೋಗಿಕ ಹಾರಾಟಕ್ಕೆ ಇನ್ನೂ ವರ್ಷ ಒಪ್ಪತ್ತು ಕಾಯಬೇಕಿದೆ.
ಭವಿಷ್ಯತ್ತಿನ ಕಾಲದಿಂದ ವರ್ತಮಾನಕ್ಕೆ ಬಂದಿರುವ ವಿಮಾನದಂತೆ ಕಾಣುವ ‘ಶೂನ್ಯ’ ಡೂಮ್ಸ್‌ಡೇ, //ಸ್ಟಾರ್ಟ್‌ಟ್ರೆಕ್// ಮೊದಲಾದ ಹಾಲಿವುಡ್ ಸಿನಿಮಾಗಳಲ್ಲಿನ ವೈಮಾನಿಕ ನೌಕೆಗಳನ್ನು ನೆನಪಿಸುತ್ತದೆ. ಐಷಾರಾಮಿ ಕಾರುಗಳಲ್ಲಿ ಇರುವಂತೆ ಸನ್‌ರೂಫ್ ಅನ್ನೂ ಹೊಂದಿರುವ ವಿನ್ಯಾಸವು, ಅದರ ಅಂದವನ್ನು ಹೆಚ್ಚಿಸಿದೆ. ಹೂಡಿಕೆದಾರರ ಸಮಾವೇಶದ ಪ್ರದರ್ಶನ ಕೇಂದ್ರದಲ್ಲಿ ಸರಳಾ ಏವಿಯೇಷನ್‌ನ ಮಳಿಗೆಯತ್ತ ಅತಿಹೆಚ್ಚು ಜನರನ್ನು ‘ಶೂನ್ಯ’ ಸೆಳೆಯುತ್ತಿದೆ.
‘ಅತ್ಯಂತ ದಟ್ಟಣೆಯ ನಗರಗಳಿಂದ ವಿಮಾನ ನಿಲ್ದಾಣಗಳಿಗೆ, ಉಪನಗರಗಳಿಗೆ ಏರ್‌ಟ್ಯಾಕ್ಸಿ ಸೇವೆ ಒದಗಿಸುವಲ್ಲಿ ಹೆಲಿಕಾಪ್ಟರ್ ಮತ್ತು ಸಣ್ಣ ವಿಮಾನಗಳಿಗಿಂತ ವಿಶಿಷ್ಟವಾದ ವಿಮಾನ ರೂಪಿಸುವುದು ನಮ್ಮ ಉದ್ದೇಶವಾಗಿತ್ತು. ಅದನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದೇವೆ’ ಎನ್ನುತ್ತಾರೆ ಸರಳಾ ಏವಿಯೇಷನ್‌ನ ಸಿಇಒ ಆ್ಯಡ್ರಿಯನ್ ಷಮಿಡ್ಟ್.
‘ಒಮ್ಮೆ ಚಾರ್ಜ್ ಮಾಡಿದರೆ ಗರಿಷ್ಠ 160 ಕಿ.ಮೀ. ದೂರ ಕ್ರಮಿಸುವ ಸಾಮರ್ಥ್ಯ ಇದಕ್ಕಿದೆ. ಬೆಂಗಳೂರು–ಮೈಸೂರು, ಮುಂಬೈ–ಪುಣೆ, ದೆಹಲಿ–ಗುರುಗ್ರಾಮ–ನೋಯ್ಡಾ ಮಧ್ಯೆ ಏರ್‌ಟ್ಯಾಕ್ಸಿ ಸೇವೆ ಒದಗಿಸಲು ‘ಶೂನ್ಯ’ವನ್ನು ಬಳಕೆ ಮಾಡಿಕೊಳ್ಳಬಹುದು. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನೆಲೆಯಾಗಿಸಿಕೊಂಡು ಬೆಂಗಳೂರಿನಲ್ಲಿ ಸೇವೆ ಆರಂಭಿಸಲು ಮಾತುಕತೆ ನಡೆಯುತ್ತಿದೆ’ ಎಂದು ಅವರು ಮಾಹಿತಿ ನೀಡಿದರು.
Highlights - * ತಯಾರಿಕೆಗೆ ಸಿದ್ದವಿರುವ ಮಾದರಿಯ ಪ್ರದರ್ಶನ * 2026ರ ಆರಂಭದಲ್ಲಿ ಪ್ರಾಯೋಗಿಕ ಹಾರಾಟ * 2028ಕ್ಕೆ ತಯಾರಿಕೆ ಮತ್ತು ಪೂರೈಕೆ ಆರಂಭ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.