ADVERTISEMENT

ಹೈಕಮಾಂಡ್ ಹೇಳಿದವರು ಸಿಎಂ ಆಗುತ್ತಾರೆ, ಅವರಿಗೆ ಜೈ ಹೇಳುತ್ತೇವೆ: ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 14:17 IST
Last Updated 5 ಫೆಬ್ರುವರಿ 2026, 14:17 IST
ಸತೀಶ ಜಾರಕಿಹೊಳಿ
ಸತೀಶ ಜಾರಕಿಹೊಳಿ   

ಬೆಂಗಳೂರು: ‘ಹೈಕಮಾಂಡ್ ಹೇಳಿದವರು ಮುಖ್ಯಮಂತ್ರಿ ಆಗುತ್ತಾರೆ. ಹೈಕಮಾಂಡ್ ಯಾರನ್ನು ಆಯ್ಕೆ ಮಾಡುತ್ತದೆಯೊ ಅವರಿಗೆ ಜೈ ಹೇಳುತ್ತೇವೆ’ ಎಂದು ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.

ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ನಾಯಕತ್ವ ಬದಲಾವಣೆ, ಸಂಪುಟ ಪುನರ್‌ರಚನೆ ಕುರಿತ ಗೊಂದಲವನ್ನು ಹೈಕಮಾಂಡ್ ಆದಷ್ಟು ಬೇಗ ಪರಿಹರಿಸಬೇಕು’ ಎಂದರು.

‘ಸತೀಶ ಜಾರಕಿಹೊಳಿ ಮುಖ್ಯಮಂತ್ರಿ ಆಗಬೇಕು’ ಎಂಬ ಬೇಡಿಕೆಯ ಕುರಿತು ಪ್ರತಿಕ್ರಿಯಿಸಿ, ‘ಈ ರೀತಿ ನಾನು ಬೇಡಿಕೆ ಇಟ್ಟಿಲ್ಲ. ಸಚಿವನಾಗಿ ಎರಡು ವರ್ಷ ಕೆಲಸ ಮಾಡುತ್ತೇನೆ. ಮುಂದೆ ನೋಡೋಣ’ ಎಂದರು.

ADVERTISEMENT

‘ಕೆಪಿಸಿಸಿ ಅಧ್ಯಕ್ಷ ಹುದ್ದೆಯ ರೇಸ್‌ನಲ್ಲಿಯೂ ನಾನು ಇಲ್ಲ. ನಾಯಕತ್ವ ಬದಲಾವಣೆ ವಿಚಾರದಲ್ಲಿ ಗೊಂದಲ ನಿಜ. ಆದಷ್ಟು ಬೇಗ ಹೈಕಮಾಂಡ್ ಇದಕ್ಕೆ ಇತಿಶ್ರೀ ಹೇಳಬೇಕು ಎಂಬುದು ನಮ್ಮ ಆಶಯ’ ಎಂದರು.

ಗುತ್ತಿಗೆದಾರರ ಸಂಘದ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ, ‘ಗುತ್ತಿಗೆದಾರರದ್ದು ಆರೋಪ ಅಲ್ಲ, ಬೇಡಿಕೆ. ಲೋಕೋಪಯೋಗಿ ಇಲಾಖೆಯಿಂದಲೂ ಅವರಿಗೆ ಬಿಲ್‌ ಕೊಡಬೇಕು. ನಾವು ಆದ್ಯತೆ ಮೇಲೆ ಕೊಡುತ್ತಿದ್ದೇವೆ’ ಎಂದರು.

‘ಬಿಲ್‌ ಕೊಡದಿದ್ದರೆ ಕಾಮಗಾರಿ ತೆಗೆದುಕೊಳ್ಳುವುದಿಲ್ಲ’ ಎಂದು ಗುತ್ತಿಗೆದಾರರು ಎಚ್ಚರಿಕೆ ನೀಡಿರುವ ಬಗ್ಗೆ ಕೇಳಿದಾಗ, ‘ಕಾಮಗಾರಿ ತೆಗೆದುಕೊಳ್ಳದಿದ್ದರೆ ಅವರಿಗೇ ನಷ್ಟ. ಹೊರಗಿನವರು ಟೆಂಡರ್‌ನಲ್ಲಿ ಭಾಗವಹಿಸಿದರೆ ಯಾರಿಗೆ ನಷ್ಟ ಹೇಳಿ’ ಎಂದರು.

‘ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಪರಿಶಿಷ್ಟ ಜಾತಿ, ಪಂಗಡದ ಉದ್ಯಮಿಗಳು ನನ್ನನ್ನು ಭೇಟಿ ಮಾಡಿದ್ದರು. ಅವರ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿ ಜೊತೆ ಮಾತನಾಡುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.