ADVERTISEMENT

ಧಮ್‌ ಇದ್ದರೆ ಸತೀಶ್‌ ಜಾರಕಿಹೊಳಿಯವರ ರಾಜೀನಾಮೆ ಪಡೆಯಿರಿ: ಬಿಜೆಪಿ ಸವಾಲು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ನವೆಂಬರ್ 2022, 11:21 IST
Last Updated 8 ನವೆಂಬರ್ 2022, 11:21 IST
   

ಬೆಂಗಳೂರು: ‘ಹಿಂದೂ ಎಂಬ ಪದಕ್ಕೆ ಅಶ್ಲೀಲ ಅರ್ಥವಿದೆ‘ ಎಂದು ಹೇಳಿಕೆ ನೀಡಿ ವಿವಾದ ಹುಟ್ಟು ಹಾಕಿರುವ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಸತೀಶ್‌ ಜಾರ‌ಕಿಹೊಳಿ ಅವರ ರಾಜೀನಾಮೆ ಪಡೆಯಿರಿ ಎಂದು ಬಿಜೆಪಿ ಆಗ್ರಹಿಸಿದೆ.

ಸರಣಿ ಟ್ವೀಟ್‌ ಮೂಲಕ ಸತೀಶ್‌ ಜಾರಕಿಹೊಳಿ ಅವರ ಹೇಳಿಕೆಯನ್ನು ಬಿಜೆಪಿ ಖಂಡಿಸಿದೆ. ಹಿಂದೂ ವಿರೋಧಿ ಕಾಂಗ್ರೆಸ್‌ ಎನ್ನುವ ಹ್ಯಾಶ್‌ ಟ್ಯಾಗ್‌ ಮೂಲಕ ಟ್ವೀಟ್‌ ಮಾಡಿ ಕಾಂಗ್ರೆಸ್‌ ಅನ್ನು ತರಾಟೆಗೆ ತೆಗೆದುಕೊಂಡಿದೆ.

‘ಸತೀಶ್‌ ಜಾರಕಿಹೊಳಿ ಹೇಳಿಕೆಯನ್ನು ಕಾಂಗ್ರೆಸ್‌ ಉಸ್ತುವಾರಿ, ಕೆಪಿಸಿಸಿ ಅಧ್ಯಕ್ಷರು ಖಂಡಿಸಿದ್ದಾರೆ. ಆದರೆ ಕಾರ್ಯಾಧ್ಯಕ್ಷರು ತನ್ನ ಮಾತನ್ನು ಹಿಂತೆಗೆದುಕೊಳ್ಳುವುದಿಲ್ಲ ಎಂದು ರಾಜಾರೋಷವಾಗಿ ಹೇಳಿದ್ದಾರೆ. ಉಸ್ತುವಾರಿ, ಅಧ್ಯಕ್ಷರೇ ನಿಮಗೆ ಧಮ್‌ ಇದ್ದರೆ ಕಾಂಗ್ರೆಸ್‌ ಕಾರ್ಯಾಧ್ಯಕ್ಷರ ರಾಜೀನಾಮೆ ಪಡೆಯಿರಿ‘ ಎಂದು ಬಿಜೆ‍ಪಿ ಸವಾಲು ಎಸೆದಿದೆ.

ADVERTISEMENT

‘ರಾಮ ಕಾಲ್ಪನಿಕ, ರಾಮ ಸೇತು ಕಾಲ್ಪನಿಕ, ರಾಮಾಯಣಕ್ಕೆ ಅವಹೇಳನ, ರಾಮ ಮಂದಿರಕ್ಕೆ ವಿರೋಧ.. ಬಹುಸಂಖ್ಯಾತ ಹಿಂದೂಗಳು ಆರಾಧಿಸುವ ಶ್ರೀರಾಮ ದೇವರ ಅಸ್ತಿತ್ವವನ್ನೇ ಕಾಂಗ್ರೆಸ್‌ ಪ್ರಶ್ನಿಸುತ್ತಾ ಬರುತ್ತಿದೆ, ಈಗ ಹಿಂದೂ ಎನ್ನುವ ಪದವನ್ನೇ ಕಾಂಗ್ರೆಸ್‌ ನಾಯಕರು ಅಶ್ಲೀಲ ಎನ್ನುತ್ತಿದ್ದಾರೆ. ಏಕೆ ಈ ಮನಸ್ಥಿತಿ?‘ ಎಂದು ಬಿಜೆಪಿ ಪ್ರಶ್ನಿಸಿದೆ.

‘ಸತೀಶ್‌ ಜಾರಕಿಹೊಳಿ ಹೇಳಿಕೆಯಿಂದ ಕಾಂಗ್ರೆಸ್ ಹಿಂದೂ ವಿರೋಧಿ ಎನ್ನುವುದನ್ನು ಮತ್ತೆ ಸಾಬೀತುಪಡಿಸಿದೆ. ಈ ಹಿಂದೆ ಕಾಂಗ್ರೆಸ್, ಗೋ ಪೂಜೆ, ಶಾಲೆಗಳಲ್ಲಿ ಭಗವದ್ಗೀತೆ ಬೋಧನೆ, ಯೋಗ, ಧ್ಯಾನ, ಪೊಲೀಸ್ ಠಾಣೆಗಳಲ್ಲಿ ಆಯುಧ ಪೂಜೆಗೆ ವಿರೋಧ ವ್ಯಕ್ತಪಡಿಸಿತ್ತು. ಹಿಂದೂ ಧರ್ಮವನ್ನು ನಿಂದಿಸುವುದೇ ಕಾಂಗ್ರೆಸ್‌ ನಾಯಕರ ಕಾಯಕವೇ?‘ ಎಂ‌ದು ಬಿಜೆಪಿ ಪ್ರಶ್ನೆ ಮಾಡಿದೆ.

‘ಕಾಂಗ್ರೆಸ್‌ ಹಿಂದೂ ಧರ್ಮದ ವಿರುದ್ಧ ವಿಷಕಾರುತ್ತಿರುವುದು ಇದೇ ಮೊದಲಲ್ಲ.ಗೋಹತ್ಯೆ ನಿಷೇಧವನ್ನು ಕಾಂಗ್ರೆಸ್‌ ಇಂದಿಗೂ ವಿರೋಧಿಸುತ್ತಿದೆ. ಮತಾಂತರ ನಿಯಂತ್ರಣ ಕಾಯ್ದೆಗೂ ಕಾಂಗ್ರೆಸ್‌ ವಿರೋಧಿಸುತ್ತಿದೆ.ಹೆಜ್ಜೆ ಹೆಜ್ಜೆಗೂ ಹಿಂದೂ ಧರ್ಮವನ್ನು ಅವಮಾನಿಸುವುದೇ ಕಾಂಗ್ರೆಸ್‌ ಸಿದ್ಧಾಂತವೇ?‘ ಎಂದು ಕೇಳಿದೆ.

‘ರಾಹುಲ್ ಗಾಂಧಿಗೆ ಹಿಂದುತ್ವದಲ್ಲಿ ನನಗೆ ನಂಬಿಕೆಯಿಲ್ಲ, ಸಿದ್ದರಾಮಯ್ಯಗೆ ಕುಂಕುಮ, ಕೇಸರಿ ಕಂಡರೆ ಭಯ,ಹಿಂದೂ ಅರ್ಥವೇ ಅಶ್ಲೀಲ ಎಂದು ಸತೀಶ್ ಜಾರಕಿಹೊಳಿ ಹೇಳುತ್ತಾರೆ. ಕಾಂಗ್ರೆಸ್‌ ಹಿಂದೂಗಳ ವಿರುದ್ಧ ನಡೆದುಕೊಳ್ಳುವುದೇಕೆ?‘ ಎಂದು ಕಿಡಿ ಕಾರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.