
ಬೆಂಗಳೂರು: ‘ನಾಯಕತ್ವ ಗೊಂದಲ ಹೈಕಮಾಂಡ್ ಗಮನದಲ್ಲಿ ಇರುವುದರಿಂದ ನಾವು ಪದೇ ಪದೇ ಮನವಿ ಮಾಡುವ ಅಗತ್ಯವಿಲ್ಲ. ಇದೇ 21ಕ್ಕೆ ನಾನು ದೆಹಲಿಗೆ ತೆರಳುತ್ತಿದ್ದು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿ ಮಾಡುತ್ತೇನೆ’ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ನಾಯಕತ್ವ ವಿಚಾರವಾಗಿ ಹಲವು ಸಚಿವರು ಹಾಗೂ ಶಾಸಕರು ನೀಡುತ್ತಿರುವ ವಿಭಿನ್ನ ಹೇಳಿಕೆಗಳು ಸರ್ಕಾರದ ವರ್ಚಸ್ಸಿಗೆ ಕುಂದು ತರದಂತೆ ನೋಡಿಕೊಳ್ಳಬೇಕಿದೆ’ ಎಂದರು.
‘ನಾಯಕತ್ವ ವಿಚಾರದಿಂದ ಸ್ಥಳೀಯ ಚುನಾವಣೆಗಳಿಗೆ ತೊಂದರೆ ಆಗುವುದಿಲ್ಲ. ಸ್ಥಳೀಯ ನಾಯಕರನ್ನು ನೋಡಿ ಚುನಾವಣೆಯಲ್ಲಿ ಮತ ಹಾಕುತ್ತಾರೆ. ಶಾಸಕರು ಕ್ಷೇತದಲ್ಲಿ ಉತ್ತಮ ಸಂಬಂಧ ಇಟ್ಟುಕೊಂಡರೆ ಸಮಸ್ಯೆ ಆಗುವುದಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ₹ 1 ಲಕ್ಷ ಕೋಟಿಗೂ ಹೆಚ್ಚು ಹಣ ಖರ್ಚು ಮಾಡುತ್ತಿದ್ದೇವೆ. ಗ್ಯಾರಂಟಿ ಯೋಜನೆಗಳಿಗೆ ಬೇರೆ ಹಣವಿದೆ’ ಎಂದರು.
‘ತುಮಕೂರಿನಲ್ಲಿ ನಡೆದ ಕಾರ್ಯಕ್ರಮದ ನಂತರ ಶಾಸಕ ಕೆ.ಎನ್. ರಾಜಣ್ಣ ಅವರ ನಿವಾಸಕ್ಕೆ ಮುಖ್ಯಮಂತ್ರಿ ಭೇಟಿ ನೀಡಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ’ ಎಂದರು.
‘ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದ ವಿಚಾರದಲ್ಲಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ನಿರ್ಧರಿಸುತ್ತಾರೆ. ಮುಖ್ಯಮಂತ್ರಿ ಸೂಚನೆ ನೀಡಿದ ನಂತರ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.