ADVERTISEMENT

ತಪ್ಪೆಂದು ಸಾಬೀತುಪಡಿಸಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಸತೀಶ ಜಾರಕಿಹೊಳಿ

ಹಿಂದೂ ಎಂಬುದಕ್ಕೆ ಅಶ್ಲೀಲ ಅರ್ಥಗಳಿವೆ: ಹೇಳಿಕೆ ಸಮರ್ಥಿಸಿಕೊಂಡ ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2022, 9:07 IST
Last Updated 8 ನವೆಂಬರ್ 2022, 9:07 IST
ಸತೀಶ ಜಾರಕಿಹೊಳಿ
ಸತೀಶ ಜಾರಕಿಹೊಳಿ   

ಬೆಳಗಾವಿ: ‘ಹಿಂದೂ ಪದದ ಬಗ್ಗೆ ನಾನು ಹೇಳಿದ್ದರಲ್ಲಿ ತಪ್ಪಿದೆ ಎಂದು ಯಾರಾದರೂ ಸಾಬೀತು ಮಾಡಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಯಾರು ಬೇಕಾದರೂ ಬಹಿರಂಗ ಚರ್ಚೆಗೆ ಬಂದರೂ ನಾನು ಸಿದ್ಧ. ಬೇಕಿದ್ದರೆ ರಾಜ್ಯ ಸರ್ಕಾರವೇ ಒಂದು ಸಮಿತಿ ರಚನೆ ಮಾಡಿ, ತನಿಖೆ ನಡೆಸಲಿ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಸವಾಲು ಹಾಕಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಸಮರ್ಥನೆ ನೀಡಿದ ಅವರು, ‘ಹಿಂದೂ ಎಂಬ ಪದವು ಪರ್ಷಿಯನ್‌ ಮೂಲದ್ದು ಎಂಬ ಮಾತಿಗೆ ನಾನು ಈಗಲೂ ಬದ್ಧ. 1963ರಲ್ಲಿ ಒಂದು ಶಬ್ದಕೋಶ ಹೊರತರಲಾಗಿದೆ. ಅದರಲ್ಲಿ ಹಿಂದೂ ಪದಕ್ಕೆ ಅಶ್ಲೀಲ ಅರ್ಥಗಳನ್ನು ನೀಡಲಾಗಿದೆ ಎಂದು ನಾನು ಹೇಳಿದ್ದೇನೆ. ನಾನೇ ಈ ಪದದ ಅರ್ಥ ಕಂಡುಹಿಡಿದಿಲ್ಲ. ಹಿಂದೆ ಹಲವರು ಬರೆದಿದ್ದನ್ನೇ ಉಚ್ಛರಿಸಿದ್ದೇನೆ. ಈ ಬಗ್ಗೆ ಚರ್ಚೆ ಆಗಬೇಕು ಎಂದೂ ಹೇಳಿದ್ದೇನೆ. ಆದರೆ, ಹೇಳಿಕೆಯನ್ನು ಯಾರ್‍ಯಾರೋ ಅವರಿಗೆ ಬೇಕಾದ ಹಾಗೆ ಅರ್ಥೈಸಿದರೆ ನಾನೇನು ಮಾಡಲಿ’ ಎಂದರು.

‘ವಿಕಿಪೀಡಿಯಾದಲ್ಲಿ ಹುಡುಕಿ ನೋಡಿ. ಅಲ್ಲಿ ಯಾರು ಬೇಕಾದರೂ ಬರೆದಿದ್ದೆಲ್ಲವನ್ನೂ ಹಾಕುವುದಿಲ್ಲ. ಅದಕ್ಕೊಂದು ಸಮಿತಿ ಇದೆ. ಅವರು ಪರಾಮರ್ಷಿಸಿ ಪೋಸ್ಟ್‌ ಮಾಡುತ್ತಾರೆ. ದಾಖಲೆ ಬೇಕು ಎನ್ನುವವರು ನೀವೇ ಓದಿಕೊಳ್ಳಿ’ ಎಂದರು.

‘ಶಬ್ದಕೋಶ ಯಾವುದು, ಯಾರು ಬರೆದಿದ್ದು?’ ಎಂದು ಕೇಳಿದ ಪ್ರಶ್ನೆಗೆ ‘ನೀವೇ ಹುಡುಕಿ ನೋಡಿ, ಸಿಗುತ್ತದೆ’ ಎಂದು ಪ್ರತಿಕ್ರಿಯಿಸಿದರು.

‘ಹಿಂದೂ ಪದದ ಬಗ್ಗೆ ಸಾಕಷ್ಟು ವರ್ಷಗಳಿಂದ ಚರ್ಚೆ ಇದೆ. ಅದನ್ನು ಸಂಬಂಧಿಸಿದವರೇ ಮುಂದೆ ಬಂದು ಸರಿ– ತಪ್ಪನ್ನು ಹೇಳಬೇಕಿತ್ತು. ಅವರಿಗೆ ಸಂಬಂಧಿಸಿದ್ದನ್ನು ನಾನು ಹೇಳಿದ್ದೇನೆ. ಇದಕ್ಕೆ ಅವರು ಕೃತಜ್ಞತೆ ಸಲ್ಲಿಸಬೇಕಿತ್ತು. ಆದರೆ, ಅನಗತ್ಯ ವಿವಾದ ಮಾಡುತ್ತಿದ್ದಾರೆ. ತಮ್ಮ ಧರ್ಮದ ಪದವನ್ನು ತಾವೇ ಪರಾಮರ್ಶೆ ಮಾಡಬೇಕು’ ಎಂದೂ ಹೇಳಿದರು.

* ಕ್ಷಮೆ ಕೇಳುವ ಪ್ರಮೇಯವೇ ಇಲ್ಲ:

‘ನಾನು ಯಾರ ಕ್ಷಮೆ ಕೇಳುವ ಪ್ರಮೇಯವೇ ಇಲ್ಲ. ತಪ್ಪು ಮಾತಾಡಿದ್ದೇನೆ ಎಂದು ಸಾಧಿಸಿದರೆ ಕ್ಷಮೆ ಕೇಳುವುದಷ್ಟೇ ಅಲ್ಲ; ಶಾಸಕ ಸ್ಥಾನಕ್ಕೇ ರಾಜೀನಾಮೆ ನೀಡುತ್ತೇನೆ. ಅರ್ಧ–ಮರ್ಧ ಓದಿಕೊಂಡು ಮಾತಾಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕ ಯಡಿಯೂರಪ್ಪ ಹೇಳಿದ್ದಾರಂತೆ. ನನ್ನ ಬಳಿ ಪೂರ್ಣ ದಾಖಲೆಗಳಿವೆ, ಪೂರ್ಣ ಓದಿಕೊಂಡೇ ಮಾತನಾಡಿದ್ದೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನೀವು ಯಾವ ಧರ್ಮದವರು ಎಂದು ಕೇಳಲಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ‘ನಾನು ಭಾರತೀಯ’ ಎಂದರು.

* ನಾನು ಏಕಾಂಗಿ ಅಲ್ಲ; ನನ್ನದೇ ಪಡೆ ಇದೆ

‘ನಡೆದ ಸಂಗತಿಯ ಬಗ್ಗೆ ಪಕ್ಷದ ಕೆಲ ಮುಖಂಡರು ವಿಚಾರಿಸಿದ್ದಾರೆ. ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ ಅವರೂ ಕೇಳಿದರು. ನನ್ನ ನಿಲುವು ಏನು ಎಂದು ಅವರಿಗೂ ಸ್ಪಷ್ಟಪಡಿಸಿದ್ದೇನೆ. ಇದು ನನ್ನ ವೈಯಕ್ತಿಕ ಕಾರ್ಯಕ್ರಮದಲ್ಲಿ ನಡೆದ ಚರ್ಚೆ, ಪಕ್ಷದ ವೇದಿಕೆಯಲ್ಲಿ ಮಾತನಾಡಿಲ್ಲ. ಹಾಗಾಗಿ, ಪಕ್ಷಕ್ಕೆ– ಚುನಾವಣೆಗೆ ಇದು ಸಂಬಂಧವಿಲ್ಲ’ ಎಂದರು.

‘ಈ ಚರ್ಚೆಯಿಂದ ಕಾಂಗ್ರೆಸ್ಸಿನಲ್ಲಿ ನಾನು ಏಕಾಂಗಿ ಆಗುವ ಪ್ರಶ್ನೆಯೇ ಇಲ್ಲ. ನನ್ನದೇ ಆದ ಪಡೆ ಇದೆ. ನಾನು ಹೇಗೆ ವೈರಲ್‌ ಮಾಡುತ್ತೇನೆ ನೋಡಿ’ ಎಂದೂ ಹೇಳಿದರು.

‘ಕೆಲವು ಗ್ರಂಥಗಳು ಸಮಯ ಕಳೆಯಲು ಬರೆದವು. ಅವು ನಮ್ಮನ್ನು ಆಳುತ್ತವೆ ಎಂದು ಹೇಳಿದ್ದೀರಿ. ಯಾವ ಗ್ರಂಥಗಳು?’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಅದಕ್ಕೆ ಇನ್ನೊಂದು ವೇದಿಕೆ ತಯಾರು ಮಾಡಿ ಹೇಳುತ್ತೇನೆ. ಯಾವ ಗ್ರಂಥಗಳು ಎಂದು ಓದಿದವರಿಗೆ ಗೊತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.