ADVERTISEMENT

ಕಮಿಷನ್ ಹಿಂದೆಯೂ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತೆ: ಸತೀಶ ಜಾರಕಿಹೊಳಿ

‘ಬಜೆಟ್‌ ಬೆಂಬಲ ಇಲ್ಲದೇ ಗುತ್ತಿಗೆ ನೀಡಿದ್ದ ಬಿಜೆಪಿಯದೇ ತಪ್ಪು‘

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 14:25 IST
Last Updated 19 ಫೆಬ್ರುವರಿ 2026, 14:25 IST
<div class="paragraphs"><p>ಸತೀಶ ಜಾರಕಿಹೊಳಿ</p></div>

ಸತೀಶ ಜಾರಕಿಹೊಳಿ

   

ಬೆಂಗಳೂರು: ‘ಕಮಿಷನ್ ಹಿಂದೆಯೂ ಇತ್ತು, ಈಗಲೂ ಇದೆ, ಮುಂದೆಯೂ ಇರಲಿದೆ. ಅದನ್ನು ಪತ್ತೆ ಮಾಡಲು ಸಾಧ್ಯ ಇಲ್ಲ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಕಾಮಗಾರಿಯ ಬಿಲ್‌ ಪಾವತಿಗೆ ಕಮಿಷನ್ ಪಡೆಯುವ ಬಗ್ಗೆ ಗುತ್ತಿಗೆದಾರರು ಮಾಡಿರುವ ಆರೋಪಗಳ ಬಗ್ಗೆ ಸುದ್ದಿಗಾರರ ‍ಪ‍್ರಶ್ನೆಗೆ ಪ್ರತಿಕ್ರಿಯಿಸಿದ ಅವರು,‘ಪರಿಹಾರ ಕಂಡುಕೊಳ್ಳಲು ದಾರಿ ಹುಡುಕಬೇಕಲ್ಲವೇ? ಅವರು ಈ ವಿಷಯವನ್ನು ಮುಖ್ಯಮಂತ್ರಿ ಮತ್ತು ಲೋಕಾಯುಕ್ತರ ಗಮನಕ್ಕೆ ತರಲಿ’ ಎಂದರು.

ADVERTISEMENT

‘ಬಿಲ್‌ ಮೊತ್ತ ಅಷ್ಟೊಂದು ಬಾಕಿ ಯಾಕೆ ಆಗಿದೆ ಎನ್ನುವ ಬಗ್ಗೆ ಚಿಂತನೆ ಆಗಬೇಕು. ಬಜೆಟ್ ಬೆಂಬಲ ಇಲ್ಲದೇ ಬಿಜೆಪಿ ತನ್ನ ಅವಧಿಯಲ್ಲಿ ಕಾಮಗಾರಿಗಳಿಗೆ ಟೆಂಡರ್ ನೀಡಿದೆ. ಕಾಮಗಾರಿ ಮುಗಿದಿದೆ. ಹಣ ಪಾವತಿಸಲು ಸಮಯ ಬೇಕು. ಹಿಂದಿನ ಸರ್ಕಾರ ಮಾಡಿರುವ ತಪ್ಪು ಅದು. ನೀರಾವರಿ, ಲೋಕೋಪಯೋಗಿ ಇಲಾಖೆಯಲ್ಲಿ ಹೆಚ್ಚಿನ ಮೊತ್ತ ಬಾಕಿಯಿದೆ. ಕಾಮಗಾರಿ ನಿಲ್ಲಿಸಲು ಆಗುವುದಿಲ್ಲ. ತಮಗೆ ಸೂಕ್ತವೆನಿಸಿದ ಕಡೆ ಗುತ್ತಿಗೆದಾರರು ಟೆಂಡರ್‌ನಲ್ಲಿ ಭಾಗವಹಿಸುತ್ತಾರೆ’ ಎಂದರು.

‘ಬಜೆಟ್​​ಗೆ ಸರಿದೂಗಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಆದರೆ, ಗುತ್ತಿಗೆದಾರರನ್ನು ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ. ಬೇರೆ ಸಚಿವರ ವಿಚಾರದಲ್ಲಿ ನಾನು ಉತ್ತರ ಕೊಡಲು ಆಗುವುದಿಲ್ಲ. ಅವರೇ ಸ್ಪಷ್ಟನೆ ಕೊಡಬೇಕು. ಆ ಕಡೆಯುವರು ಈ ಕಡೆ, ಈ ಕಡೆಯವರು ಆ ಕಡೆಗೆ ಆರೋಪ ಮಾಡುತ್ತಾರೆ. ಅದನ್ನು ಬಿಟ್ಟು ಕಮಿಷನ್ ‌ನಿಯಂತ್ರಣ ಮಾಡಬೇಕು ಅಷ್ಟೆ’ ಎಂದರು.

‘ಲೋಕೋಪಯೋಗಿ ಇಲಾಖೆಯಲ್ಲಿ ₹12 ಸಾವಿರ ಕೋಟಿ ಬಾಕಿ ಇತ್ತು. ₹3 ಸಾವಿರ ಕೋಟಿ ಕೊಡಲಾಗಿದೆ. ಬಾಕಿ ಉಳಿಯಲು ಅಧಿಕಾರಿಗಳು ಕಾರಣರಲ್ಲ. ಹಿಂದಿನ ಬಿಜೆಪಿ ಸರ್ಕಾರ ಕಾರಣ’ ಎಂದು ಆರೋಪಿಸಿದರು.

ಗೊಂದಲ ಸರಿ‍ಪಡಿಸಬೇಕು
‘ನಮ್ಮ ಹೈಕಮಾಂಡ್ ಗಟ್ಟಿ ಇದೆ. ಯಾರೂ ಅಲ್ಲಾಡಿಸಲು ಆಗುವುದಿಲ್ಲ. ಗೊಂದಲಗಳನ್ನು ಹೈಕಮಾಂಡ್ ಸರಿಪಡಿಸಬೇಕು ಎಂಬುದು ನಮ್ಮ ಮನವಿ’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.