
ಬೆಳಗಾವಿ: ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಯಾರೊಬ್ಬರ ಶ್ರಮದಿಂದ ಬಂದಿಲ್ಲ. ಸಾಮಾನ್ಯ ಕಾರ್ಯಕರ್ತರಿಂದ ಹಿಡಿದು ಹಿರಿಯ ನಾಯಕರವರೆಗೆ ಎಲ್ಲರ ಶ್ರಮವೂ ಇದೆ. ನಮಗಿರುವ 1.25 ಕೋಟಿ ಮತದಾರರಿಂದ ನಾವು ಶಾಸಕರು, ಮಂತ್ರಿ ಆಗಿದ್ದೇವೆ. ತನ್ನಿಂದಲೇ ಸರ್ಕಾರ ರಚನೆಯಾಗಿದೆ ಎಂದು ಯಾರಾದರೂ ಹೇಳಿದರೆ ಅದನ್ನು ನಾನು ಒಪ್ಪುವುದಿಲ್ಲ. ಅದು ನ್ಯಾಯವೂ ಅಲ್ಲ. ಎಲ್ಲರದ್ದೂ ಸಮಾನ ಶ್ರಮವಿದೆ, ಸಮಾನ ಪ್ರಾಧಾನ್ಯತೆ ಸಿಗಬೇಕು’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಭಾನುವಾರ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಶಾಸಕರಾಗಿ ಚುನಾಯಿತರಾದ ಎಲ್ಲರದ್ದೂ ಸಮಾನ ಶ್ರಮವಿದೆ. ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಎಲ್ಲರೂ ಕಷ್ಟ, ನಷ್ಟ ಅನುಭವಿಸಿದ್ದಾರೆ. ಯಾರೋ ಇಬ್ಬರು ಇದರ ‘ಕ್ರೆಡಿಟ್’ ತೆಗೆದುಕೊಳ್ಳಲು ಬರುವುದಿಲ್ಲ’ ಎಂದು ಪರೋಕ್ಷವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಟೀಕಿಸಿದರು.
‘ಡಾ.ಜಿ. ಪರಮೇಶ್ವರ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಎಂಟು ವರ್ಷ ದುಡಿದಿದ್ದಾರೆ. ಅವರ ಕಾಲದಲ್ಲಿ ಮಾಡಿದ ಕಾರ್ಯಕ್ರಮಗಳ ಕಾರಣದಿಂದ ಕಾಂಗ್ರೆಸ್‌ಗೆ ಬಲ ಬಂದಿದೆ. ಸರ್ಕಾರ ರಚನೆ ಮಾಡುವಷ್ಟು ಪಕ್ಷವನ್ನು ಸಿದ್ಧಪಡಿಸಿದವರಲ್ಲಿ ಅವರೂ ಒಬ್ಬರು. ಅವರಿಗೂ ಸಮಾನ ಅವಕಾಶ ಸಿಗಬೇಕು ಎಂಬುದು ನನ್ನ ಒತ್ತಾಸೆ’ ಎಂದರು.
‘ನಾನು ಕೂಡ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಪರಮೇಶ್ವರ ಅವರು ಈ ಹಿಂದೆಯೂ ಹೇಳಿದ್ದಾರೆ. ಅದರಲ್ಲಿ ಏನೂ ತಪ್ಪಿಲ್ಲ. ನಾನು ಕೂಡ ಆಕಾಂಕ್ಷಿ ಆಗಿದ್ದೇನೆ. ಕಾಂಗ್ರೆಸ್ ಪಕ್ಷಕ್ಕೆ ಪರಿಶಿಷ್ಟರು, ಅಲ್ಪಸಂಖ್ಯಾತ ಸಮುದಾಯದವರೇ ಮುಖ್ಯ ಮತದಾರರು. ಹಾಗಾಗಿ, ಆ ಸಮುದಾಯಗಳಿಗೆ ಪ್ರಾತಿನಿಧ್ಯ ಸಿಗಬೇಕಿದೆ’ ಎಂದರು.
‘ಒನ್ ಮ್ಯಾನ್ ಶೋ’ ವಿಚಾರವನ್ನು ನಾನು ನಂಬುವುದಿಲ್ಲ. ಮುಖ್ಯಮಂತ್ರಿ ಯಾರಾಗಬೇಕು, ಯಾವಾಗ ಆಗಬೇಕು ಎಂದು ಹೈಕಮಾಂಡ್ ನಿರ್ಧರಿಸುತ್ತದೆ. ಎರಡೂವರೆ ವರ್ಷದ ನಂತರ ಅಧಿಕಾರ ಹಸ್ತಾಂತರ ಮಾಡಬೇಕು ಎಂಬ ವಿಚಾರ ನನಗೆ ಗೊತ್ತಿಲ್ಲ. ಅದು ಬೆಂಗಳೂರಿನಲ್ಲಿ ನಡೆದಿದ್ದಲ್ಲ. ಅಂಥ ಚರ್ಚೆಗಳು ದೆಹಲಿಯಲ್ಲಿ ಮಾತ್ರ ನಡೆಯುತ್ತವೆ. ಸದ್ಯ ಯಾವುದೇ ಚರ್ಚೆಯೂ ನಡೆದಿಲ್ಲ. ಚರ್ಚೆಗೆ ದೆಹಲಿಗೆ ಬನ್ನಿ ಎಂದು ನನ್ನನ್ನು ಕರೆದರೆ ಖಂಡಿತ ಹೋಗುತ್ತೇನೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
‘ಕೆಲವರಿಗೆ ಅಧಿಕಾರ ಇಂದೇ ಬರಬಹುದು ಅಥವಾ ಇಂದೇ ಹೋಗಬಹುದು. ಮತ್ತೆ ಕೆಲವರಿಗೆ ಒಂದು ವರ್ಷ ಬಿಟ್ಟು ಬರಬಹುದು, ಕೆಲವರಿಗೆ ಹೋಗಲೂಬಹುದು. ಇಂಥದ್ದಕ್ಕೆಲ್ಲ ‘ತ್ಯಾಗ’ ಎಂಬ ಪದ ಸರಿಯಲ್ಲ’ ಎಂದೂ ಅವರು ಸೂಚ್ಯವಾಗಿ ಹೇಳಿದರು.
‘ಮಾಜಿ ಸಚಿವ ರಾಜಣ್ಣ ಹೇಳಿದಂತೆ ನವೆಂಬರ್‌ನಲ್ಲಿ ಯಾವುದೇ ಕ್ರಾಂತಿ ಆಗುವುದಿಲ್ಲ. ಯಥಾಸ್ಥಿತಿ ಮುಂದುವರಿಯುತ್ತದೆ. ಈಗಾಗಲೇ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಭೆ ನಡೆಸಿದ್ದಾರೆ. ಶೀಘ್ರ ಒಂದು ಸ್ಪಷ್ಟ ನಿರ್ಧಾರಕ್ಕೆ ಬರಲಿದ್ದಾರೆ’ ಎಂದು ಸಚಿವ ಹೇಳಿದರು.
‘ನೀವು ಸಿ.ಎಂ ರೇಸ್‌ನಲ್ಲಿ ನಿಂತಿದ್ದೀರಾ’ ಎಂಬ ಪ್ರಶ್ನೆಗೆ ಚುಟುಕಾಗಿ ಉತ್ತರಿಸಿದ ಸತೀಶ ಜಾರಕಿಹೊಳಿ, ‘ಅದನ್ನು ಕೇಳಬೇಡಿ. ಈಗ ಹೇಳುವ ಅಗತ್ಯವೇ ಇಲ್ಲ’ ಎಂದರು.
‘ತೇನ್‌ಸಿಂಗ್ ಜತೆಗೆ ಹಿಮಾಲಯ ಏರಿದವರಿಗೆ ಬೆಲೆ ಇಲ್ಲವೇ?’
‘1960ರಲ್ಲಿ ತೇನ್‌ಸಿಂಗ್ ನೊರ್ಗೆ ಹಿಮಾಲಯ ಪರ್ವತ ಏರಿದರು. ಆಗ ಜಗತ್ತಿನ ಎಲ್ಲ ಪತ್ರಿಕೆಗಳೂ ತೇನ್‌ಸಿಂಗ್ ಬಗ್ಗೆ ಮಾತ್ರ ಬರೆದವು. ಅವರ ಜೊತೆಗೆ ಇನ್ನೂ 14 ಜನ ಕೂಡ ಇದ್ದರು. ಅವರ ಹೆಸರು ಎಲ್ಲೂ ಬರಲಿಲ್ಲ. ಇದು ಹಾಗೇ ಆಗಿದೆ’ ಎಂದು ಸಚಿವ ಸತೀಶ ಜಾರಕಿಹೊಳಿ ಅವರು ಡಿ.ಕೆ.ಶಿವಕುಮಾರ್ ವಿರುದ್ಧ ವ್ಯಂಗ್ಯವಾಡಿದರು.
ಡಿ.ಕೆ.ಶಿವಕುಮಾರ ಜೈಲಿಗೆ ಹೋಗಿ ಶಾಸಕರನ್ನು ಭೇಟಿ ಆಗಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ‘ನಮ್ಮ ಶಾಸಕರಿದ್ದಾರೆ. ಹಾಗಾಗಿ, ಹೋಗಿ ಭೇಟಿಯಾಗಿ ಬಂದಿದ್ದಾರೆ. ಹಿಂದೆಯೂ ಒಂದು ಸಾರಿ ಹೋಗಿ ಭೇಟಿಯಾಗಿದ್ದರು. ಇದರಲ್ಲಿ ‘ಅಂಡರ್ ಕರೆಂಟ್ ಶಾಕ್’ ಏನಿಲ್ಲ. ನಮ್ಮದೂ ಕರೆಂಟ್ ಏನಿಲ್ಲ. ಎಲ್ಲವೂ ಸರಿ ಇದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.