ADVERTISEMENT

ಜೈಲಿನ ದೃಶ್ಯ ಪ್ರಸಾರ ನಿರ್ಬಂಧಿಸುವಂತೆ ಕೋರ್ಟ್‌ ಮೆಟ್ಟಿಲೇರಿದ ಸತ್ಯೇಂದ್ರ ಜೈನ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ನವೆಂಬರ್ 2022, 11:11 IST
Last Updated 23 ನವೆಂಬರ್ 2022, 11:11 IST
ಜೈಲಿನ ಆವರಣದಲ್ಲಿ ಹೊರಗಿನಿಂದ ತರಿಸಿದ ಆಹಾರ ಸೇವಿಸುತ್ತಿರುವ ಸತ್ಯೇಂದ್ರ ಜೈನ್‌
ಜೈಲಿನ ಆವರಣದಲ್ಲಿ ಹೊರಗಿನಿಂದ ತರಿಸಿದ ಆಹಾರ ಸೇವಿಸುತ್ತಿರುವ ಸತ್ಯೇಂದ್ರ ಜೈನ್‌   

ನವದೆಹಲಿ: ತಿಹಾರ್‌ ಜೈಲಿನೊಳಗಿನ ಸಿಸಿಟಿವಿ ದೃಶ್ಯಗಳನ್ನು ಮಾಧ್ಯಮಗಳು ಪ್ರಸಾರ ಮಾಡದಂತೆ ನಿರ್ಬಂಧಿಸಬೇಕೆಂದು ಕೋರಿ ದೆಹಲಿ ಸಚಿವ ಮತ್ತು ಆಪ್‌ ಮುಖಂಡ ಸತ್ಯೇಂದ್ರ ಜೈನ್‌ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ತಿಹಾರ್ ಜೈಲಿನಲ್ಲಿರುವ ಅವರಿಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳ ಯಾವುದೇ ತುಣುಕುಗಳನ್ನು ಮಾಧ್ಯಮಗಳು ಪ್ರಸಾರ ಮಾಡದಂತೆ ಅಥವಾ ಬಿತ್ತರಿಸದಂತೆ ನಿರ್ಬಂಧಿಸಲು ನಿರ್ದೇಶನ ನೀಡಬೇಕೆಂದು ಅವರು ನ್ಯಾಯಾಲಯವನ್ನು ಕೋರಿದ್ದಾರೆ. ಈ ಪ್ರಕರಣದ ವಿಚಾರಣೆಯನ್ನು ಗುರುವಾರ ಕೈಗೆತ್ತಿಕೊಳ್ಳುವುದಾಗಿ ವಿಶೇಷ ನ್ಯಾಯಾಧೀಶ ವಿಕಾಸ್ ಧುಲ್ ತಿಳಿಸಿದ್ದಾರೆ.

ಜೈನ್‌ ಅವರ ಆಹಾರ ಮತ್ತು ಆಹಾರ ಪದ್ಧತಿಯಲ್ಲಿ ಯಾವುದೇ ಬದಲಾವಣೆ ಮಾಡಿದ್ದರೆ, ಅದರ ವಿವರಣೆ ನೀಡುವಂತೆ ಕೋರ್ಟ್‌ ತಿಹಾರ್‌ ಜೈಲು ಪ್ರಾಧಿಕಾರಕ್ಕೆ ಕೇಳಿದೆ. ಜೈನ್‌ ಅವರ ವೈದ್ಯಕೀಯ ವರದಿ ಸಲ್ಲಿಸಲು ನ್ಯಾಯಾಲಯ ಸೋಮವಾರದವರೆಗೆ ಕಾಲಾವಕಾಶ ನೀಡಿದೆ.

ADVERTISEMENT

ಸತ್ಯೇಂದ್ರಜೈನ್‌, ಜೈಲಿನ ಆವರಣದಲ್ಲಿ ಹೊರಗಿನಿಂದ ತರಿಸಿದ ಆಹಾರ ಸೇವಿಸುತ್ತಿರುವ ವಿಡಿಯೊ ಬುಧವಾರ ಎಲ್ಲೆಡೆ ಹರಿದಾಡಿದೆ. ಇದಕ್ಕೂ ಮೊದಲು ಜೈಲಿನಲ್ಲಿ ಸೂಕ್ತ ಊಟ ಸಿಗದೇ 28 ಕೆಜಿ ತೂಕ ಕಳೆದುಕೊಂಡಿರುವುದಾಗಿ ಜೈನ್‌ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದರು. ಅದರ ಬೆನ್ನಲ್ಲೇ ಬಿಡುಗಡೆಗೊಂಡ ವಿಡಿಯೊವನ್ನಿಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಜೈನ್‌ ಅವರನ್ನು ಟ್ರೋಲ್‌ ಮಾಡಲಾಗುತ್ತಿದೆ.

ಜೈಲು ಕೋಣೆಯೊಳಗೆ ಜೈನ್‌ ಮಸಾಜ್‌ ಮಾಡಿಸಿಕೊಳ್ಳುತ್ತಿರುವ ವಿಡಿಯೊ ಕೂಡ ಹೊರಬಂದಿದ್ದು, ಬಿಜೆಪಿ ಅದನ್ನಿಟ್ಟುಕೊಂಡು ಆಪ್‌ ನಾಯಕರನ್ನು ಟೀಕಿಸಿತ್ತು. ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜೈನ್‌ ಜೈಲು ಸೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.