ಬೆಂಗಳೂರು:ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲೆಂದೇ ಶರಾವತಿ ಮತ್ತು ವಾರಾಹಿ ಪಂಪ್ಡ್ ಸ್ಟೋರೇಜ್ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಪರಿಸರ ಹೋರಾಟಗಾರ ಅಖಿಲೇಶ್ ಚಿಪ್ಲಿ ಆರೋಪಿಸಿದರು.
ನಗರದಲ್ಲಿ ಭಾನುವಾರ ನಡೆದ ‘ಪಶ್ಚಿಮ ಘಟ್ಟಗಳನ್ನು ಉಳಿಸಿ’ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅರಣ್ಯ, ಪರಿಸರ ಮತ್ತು ವನ್ಯಜೀವಿ ಅಭಯಾರಣ್ಯ ಇಲಾಖೆಗಳಿಂದ ಅನುಮತಿ ಸಿಕ್ಕಿಲ್ಲ. ಈ ಅನುಮತಿಗಾಗಿ ರಾಜ್ಯ ಸರ್ಕಾರವು ಈ ವರ್ಷದ ಜನವರಿಯಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ. ಆದರೆ, 2024ರಲ್ಲಿಯೇ ಆಂಧ್ರಪ್ರದೇಶದ ‘ಮೇಘಾ ಎಂಜಿನಿಯರಿಂಗ್ ವರ್ಕ್ಸ್’ ಎಂಬ ಕಂಪನಿಗೆ ಟೆಂಡರ್ ಆಗಿದೆ ಎಂದು ಹೇಳಿದರು.
ಬ್ಯಾಟರಿ ಸ್ಟೋರೇಜ್ ಎನರ್ಜಿ ಸಿಸ್ಟಂ ಮೂಲಕ ಎಲ್ಲಿ ಬೇಕಾದರೂ ವಿದ್ಯುತ್ ಸ್ಟೋರೇಜ್ ಮಾಡಲು ಅವಕಾಶವಿದೆ. ಆದರೂ ಪಶ್ಚಿಮ ಘಟ್ಟದ ಸಂರಕ್ಷಿತ ಪ್ರದೇಶದಲ್ಲಿ ಶರಾವತಿ ಮತ್ತು ವಾರಾಹಿ ಪಂಪ್ಡ್ ಸ್ಟೋರೇಜ್ ಯೋಜನೆಗಳನ್ನು ಅನುಷ್ಠಾನ ಮಾಡಲು ಸರ್ಕಾರ ಹೊರಟಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಗುಂಡಿಬೈಲು, ಹೆನ್ನಿ, ಹಿರೇಹೆನ್ನಿ ಮುಂತಾದ ಪ್ರದೇಶಗಳಲ್ಲಿ 350 ಕ್ಕೂ ಅಧಿಕ ಕುಟುಂಬಗಳು ಯಾವುದೇ ಹಕ್ಕುಪತ್ರ ಇಲ್ಲದೇ ಬಹಳ ವರ್ಷಗಳಿಂದ ಬದುಕುತ್ತಿದ್ದಾರೆ. ಈ ಪಂಪ್ಡ್ ಸ್ಟೋರೇಜ್ ಯೋಜನೆಯಡಿ ಈ ಕುಟುಂಬಗಳನ್ನು ಕೂಡ ಒಕ್ಕಲೆಬ್ಬಿಸಲಾಗುತ್ತದೆ. ಆದರೆ, ಹಕ್ಕುಪತ್ರ ಇಲ್ಲದೇ ಇರುವುದರಿಂದ ಇವರಿಗೆ ಯಾವುದೇ ಪರಿಹಾರ ಸಿಗುವುದಿಲ್ಲ ಎಂದು ಹೇಳಿದರು.
1,800 ಟನ್ ಸ್ಫೋಟಕಗಳನ್ನು ಬಳಸಿ ಇಲ್ಲಿ ಸುರಂಗಗಳನ್ನು ನಿರ್ಮಿಸಲಾಗುತ್ತಿದೆ. ಗುರುತ್ವಾಕರ್ಷಣೆಗೆ ವಿರುದ್ಧವಾಗಿ ನೀರನ್ನು ಮೇಲಕ್ಕೆ ಹರಿಸಬೇಕಿರುವುದರಿಂದ ಉತ್ಪಾದನೆಗಿಂತ ಶೇ 25ರಷ್ಟು ಅಧಿಕ ವಿದ್ಯುತ್ ಇಲ್ಲಿ ವ್ಯಯವಾಗಲಿದೆ ಎಂದು ವಿವರಿಸಿದರು.
ಪರಿಸರವಾದಿ ಶಂಕರ್ ಶರ್ಮ ಮಾತನಾಡಿ, ‘ಈ ಯೋಜನೆ ಕುರಿತು ತಯಾರಿಸಿದ ವಿಸ್ತೃತ ಯೋಜನಾ ವರದಿಯು ಹಸಿ ಸುಳ್ಳುಗಳಿಂದ ಕೂಡಿದೆ. ಮಾಡಲೇಬೇಕಾದ ಯೋಜನೆ ಎಂದು ಎಲ್ಲಿಯೂ ಹೇಳಿಲ್ಲ. ಈ ಯೋಜನೆಗಾಗಿ 400 ಎಕರೆ ಕಾಡು ಕಡಿಯಬೇಕಾಗುತ್ತದೆ ಎಂಬುದನ್ನು ಹೇಳಿದ್ದಾರೆ. ವಿನಾಶದ ಅಂಚಿನಲ್ಲಿರುವ ಸಿಂಹಬಾಲದ ಸಿಂಗಲೀಕ ಸಹಿತ ಅನೇಕ ಜೀವಜಂತುಗಳು ನಾಶವಾಗಲಿವೆ. ಹಾಗಾಗಿ ಈ ಯೋಜನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು. ಪರಿಸರ ಹೋರಾಟಗಾರ ಜೋಸೆಫ್ ಹೂವರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.