ಬೆಂಗಳೂರು: ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ 101 ಜಾತಿಗಳನ್ನು ಐದು ಗುಂಪುಗಳಾಗಿ ವರ್ಗೀಕರಿಸಿ, ಲಭ್ಯ ಶೇಕಡಾ 17 ಮೀಸಲಾತಿಯನ್ನು ಸುಪ್ರೀಂ ಕೋರ್ಟ್ ಮಾನದಂಡಗಳ ಅನ್ವಯ ಹಂಚಿಕೆ ಮಾಡಿರುವ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್‌ದಾಸ್ ನೇತೃತ್ವದ ಏಕಸದಸ್ಯ ಆಯೋಗ, ಆರು ಶಿಫಾರಸುಗಳನ್ನೂ ಮಾಡಿದೆ.
ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರ ರಚಿಸಿದ್ದ ನಾಗಮೋಹನ್ ದಾಸ್ ನೇತೃತ್ವದ ಆಯೋಗವು, ಸುಮಾರು 1,765 ಪುಟಗಳ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೋಮವಾರ ಸಲ್ಲಿಸಿತು. ಈ ವರದಿಯ ಪ್ರಮುಖ ಅಂಶಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.
ಪರಿಶಿಷ್ಟ ಜಾತಿಗಳನ್ನು ಐದು ಗುಂಪುಗಳಾಗಿ ವರ್ಗೀಕರಿಸಿರುವ ಆಯೋಗವು, ಗುಂಪು 1ರಲ್ಲಿ ಅತೀ ಹಿಂದುಳಿದ ಜಾತಿಗಳನ್ನು ಪಟ್ಟಿ ಮಾಡಿದೆ. ಈ ಗುಂಪಿನಲ್ಲಿರುವ ಜಾತಿಗಳ ಒಟ್ಟು ಜನಸಂಖ್ಯೆ ಸುಮಾರು 5 ಲಕ್ಷ. ಈ ಗುಂಪಿಗೆ ಶೇ 1ರಷ್ಟು ಮೀಸಲಾತಿ ಹಂಚಿಕೆ ಮಾಡಿದೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ತೀರಾ ವಂಚಿತ ಜಾತಿಗಳಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಜಾತಿಗಳನ್ನು ಗುಂಪು 1ರಲ್ಲಿ ಸೇರಿಸಲಾಗಿದೆ.
‘ಜಾತಿಗಳಲ್ಲಿರುವ ‘ಸಾಮ್ಯತೆ’ಗಳನ್ನು ಗುರುತಿಸಿ ಗುಂಪುಗಳನ್ನು ಆಯೋಗವು ಮರು ವರ್ಗೀಕರಿಸಿದೆ. ಗುಂಪು– 2ರಲ್ಲಿ ಎಡಗೈ ಜಾತಿಗಳಿದ್ದು ಅದಕ್ಕೆ ಶೇ 6, ಗುಂಪು 3ರಲ್ಲಿ ಬಲಗೈ ಜಾತಿಗಳಿದ್ದು ಅದಕ್ಕೆ ಶೇ 5, ಗುಂಪು 4ರಲ್ಲಿ ಬಂಜಾರ, ಬೋವಿ, ಕೊರಚ, ಕೊರಮ ಜಾತಿಗಳಿದ್ದು (ಅಸ್ಪೃಶ್ಯರಲ್ಲದವರು) ಈ ಗುಂಪಿಗೆ ಶೇಕಡಾ 4, ಗುಂಪು 5ರಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂದು ನಮೂದಿಸಿದವರಿದ್ದು ಈ ಗುಂಪಿಗೆ ಶೇಕಡಾ 1ರಷ್ಟು ಮೀಸಲಾತಿಯನ್ನು ಆಯೋಗವು ಹಂಚಿಕೆ ಮಾಡಿದೆ’ ಎಂದು ಉನ್ನತ ಮೂಲಗಳು ಖಚಿತ ಪಡಿಸಿವೆ.
ಸಮೀಕ್ಷೆಯಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂದು ಗುರುತಿಸಿಕೊಂಡವರು ಸುಮಾರು 5 ಲಕ್ಷದಷ್ಟು ಇದ್ದಾರೆ. ಅವರು ಮೂಲ ಜಾತಿಯನ್ನು ಗುರುತಿಸದ ಕಾರಣ ‘ಪ್ರತ್ಯೇಕ ಗುಂಪು’ ಮಾಡಲಾಗಿದೆ ಎಂದೂ ಗೊತ್ತಾಗಿದೆ.
ಒಳ ಮೀಸಲಾತಿ ವರ್ಗೀಕರಣಕ್ಕೆ ಜಾತಿಗಳ ಶೈಕ್ಷಣಿಕ ಹಿಂದುಳಿದಿರುವಿಕೆ, ಸರ್ಕಾರಿ ಉದ್ಯೋಗದಲ್ಲಿ ಅಗತ್ಯ ಪ್ರಾತಿನಿಧ್ಯದ ಕೊರತೆ, ಸಾಮಾಜಿಕ ಹಿಂದುಳಿದಿರುವಿಕೆಯ ಮಾನದಂಡಗಳನ್ನು ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆ ಮಾನದಂಡಗಳ ಆಧಾರದಲ್ಲಿಯೇ ಮೀಸಲಾತಿಯನ್ನು ಹಂಚಿಕೆ ಮಾಡಲಾಗಿದೆ ಎಂದು ಮೂಲಗಳು ವಿವರಿಸಿವೆ.
ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ನೀಡಲು 2005ರಲ್ಲಿ ಸರ್ಕಾರ ರಚಿಸಿದ್ದ ನ್ಯಾಯಮೂರ್ತಿ ಎ.ಜಿ. ಸದಾಶಿವ ನೇತೃತ್ವದ ಆಯೋಗವು, ಆಗ ಪರಿಶಿಷ್ಟ ಜಾತಿಗಳಿಗೆ ಇದ್ದ ಶೇ 15ರ ಮೀಸಲಾತಿಯನ್ನು ಎಡಗೈಗೆ ಶೇ 6, ಬಲಗೈಗೆ ಶೇ 5, ಸ್ಪೃಶ್ಯ ಉಪಜಾತಿಗಳಿಗೆ ಶೇ 3 ಹಾಗೂ ಈ ಮೂರೂ ಗುಂಪುಗಳಿಗೆ ಸೇರದ ಜಾತಿಗಳವರಿಗೆ ಶೇ 1ರಷ್ಟು ಮೀಸಲಾತಿ ನೀಡಬಹುದು ಎಂದು ಶಿಫಾರಸು ಮಾಡಿತ್ತು.
ಆದರೆ, ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ಒಳಮೀಸಲಾತಿ ಕುರಿತು ಪರಿಶೀಲಿಸಿ ಶಿಫಾರಸು ಮಾಡಲು ಅಂದಿನ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿ ರಚಿಸಿತ್ತು. ಈ ಸಮಿತಿಯು 2011ರ ಜನಗಣತಿಯಂತೆ ಒಟ್ಟು 101 ಪರಿಶಿಷ್ಟ ಜಾತಿಗಳ ಜಾತಿವಾರು ಜನಸಂಖ್ಯೆಯನ್ನು ಪರಿಗಣಿಸಿ ನಾಲ್ಕು ಗುಂಪುಗಳಾಗಿ ವರ್ಗೀಕರಿಸಿತ್ತು. ಆಗ ಪರಿಶಿಷ್ಟ ಜಾತಿಗಳಿಗೆ ಇದ್ದ ಮೀಸಲಾತಿಯನ್ನು ಶೇ 17ಕ್ಕೆ ಹೆಚ್ಚಿಸುವ ತೀರ್ಮಾನ ತೆಗೆದುಕೊಂಡಿತ್ತು. ಎಡಗೈಗೆ ಶೇ 6, ಬಲಗೈಗೆ ಶೇ 5.5, ಲಂಬಾಣಿ, ಬೋವಿ, ಕೊರಮ, ಕೊರಚ ಜಾತಿಗಳಿರುವ ಗುಂಪಿಗೆ ಶೇ 4.5 ಹಾಗೂ ಈ ಮೇಲಿನ ಗುಂಪುಗಳಿಗೆ ಸೇರದ ಜಾತಿಗಳಿಗೆ ಶೇ 1 ಮೀಸಲಾತಿ ಹಂಚಿಕೆ ಮಾಡಿತ್ತು.
ಸದಾಶಿವ ಆಯೋಗ ಪಟ್ಟಿ ಮಾಡಿದ್ದ ಎಡಗೈ ಗುಂಪಿನಲ್ಲಿ 29 ಜಾತಿಗಳಿದ್ದವು, ಆದರೆ, ಮಾಧುಸ್ವಾಮಿ ಸಮಿತಿ ಪಟ್ಟಿ ಮಾಡಿದ್ದ ಎಡಗೈ ಗುಂಪಿನಲ್ಲಿ ಕೇವಲ ಆರು ಜಾತಿಗಳಿದ್ದವು. ಇನ್ನು ಸದಾಶಿವ ಆಯೋಗ ಪಟ್ಟಿ ಮಾಡಿದ್ದ ಬಲಗೈ ಗುಂಪಿನಲ್ಲಿ 26 ಜಾತಿಗಳಿದ್ದವು, ಆದರೆ, ಮಾಧುಸ್ವಾಮಿ ಸಮಿತಿ ಪಟ್ಟಿ ಮಾಡಿದ್ದ ಬಲಗೈ ಗುಂಪಿನಲ್ಲಿ ಕೇವಲ ನಾಲ್ಕು ಜಾತಿಗಳಿದ್ದವು. ಗುಂಪಿನಲ್ಲಿದ್ದ ಜಾತಿಗಳ ಸಂಖ್ಯೆಯನ್ನು ಕಡಿಮೆ ಮಾಡಿ ಮಾಧುಸ್ವಾಮಿ ಸಮಿತಿಯು ಮೀಸಲಾತಿ ಪ್ರಮಾಣವನ್ನು ಮರು ಹಂಚಿಕೆ ಮಾಡಿತ್ತು.
ಆದರೆ, ನಾಗಮೋಹನ್‌ದಾಸ್ ಆಯೋಗವು ಹೊಸತಾಗಿ ಸಮೀಕ್ಷೆ ನಡೆಸಿ, ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದ್ದ ಮಾನದಂಡಗಳ ಆಧಾರದಲ್ಲಿಯೇ ವೈಜ್ಞಾನಿಕವಾಗಿ ಜಾತಿಗಳನ್ನು ವರ್ಗೀಕರಿಸಿದೆ ಎಂದು ವರದಿಯಲ್ಲಿ ಸಮರ್ಥನೆ ನೀಡಲಾಗಿದೆ.
1.07 ಕೋಟಿ ಜನರು ಭಾಗಿ
ರಾಜ್ಯದಾದ್ಯಂತ ಮೇ 5ರಿಂದ ಜುಲೈ 6ರವರೆಗೆ ನಡೆದ ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿಯ 27.24 ಲಕ್ಷ ಕುಟುಂಬಗಳ 1.07 ಕೋಟಿ ಜನರು ಭಾಗಿಯಾಗಿದ್ದಾರೆ. ಪರಿಶಿಷ್ಟ ಕುಟುಂಬಗಳ ಸಮೀಕ್ಷೆ ಮತ್ತು ಸರ್ಕಾರದ ವಿವಿಧ ಇಲಾಖೆ, ನಿಗಮ– ಮಂಡಳಿಗಳಿಂದ ಸಂಗ್ರಹಿಸಿದ ದತ್ತಾಂಶವನ್ನು ಆಯೋಗ ವಿಶ್ಲೇಷಿಸಿದೆ. ಅದರ ಆಧಾರದಲ್ಲಿ ಪರಿಶಿಷ್ಟ ಜಾತಿಯಲ್ಲಿ ಒಳ ಜಾತಿಗಳನ್ನು ವರ್ಗೀಕರಿಸಿ ಮೀಸಲಾತಿಯನ್ನು ಆಯೋಗ ಹಂಚಿಕೆ ಮಾಡಿದೆ.
ಗುಂಪು 1; ಅತೀ ಹಿಂದುಳಿದ ಜಾತಿಗಳು ಶೇ 1
ಗುಂಪು 2; ಎಡಗೈ ಜಾತಿಗಳು ಶೇ 6
ಗುಂಪು 3; ಬಲಗೈ ಜಾತಿಗಳು ಶೇ 5
ಗುಂಪು 4; ಬಂಜಾರ, ಬೋವಿ, ಕೊರಚ, ಕೊರಮ (ಅಸ್ಪೃಶ್ಯರಲ್ಲದ ಜಾತಿಗಳು) ಶೇ 4
ಗುಂಪು 5; ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಜಾತಿ ಶೇ 1
60 ದಿನ ಸಮೀಕ್ಷೆ ಮಾಡಿದ್ದೇವೆ. ಆಯೋಗ ನೀಡಿರುವ ವರದಿಯು ಇನ್ನು ಸರ್ಕಾರದ ಆಸ್ತಿ. ಇದನ್ನು ಒಪ್ಪುವುದು ಅಥವಾ ಬಿಡುವುದು ಸರ್ಕಾರಕ್ಕೆ ಬಿಟ್ಟ ವಿಷಯಎಚ್.ಎನ್. ನಾಗಮೋಹನ್‌ದಾಸ್,ನ್ಯಾಯಮೂರ್ತಿ
ಆಯೋಗದ ಶಿಫಾರಸುಗಳೇನು?
* ಪಟ್ಟಿಯಲ್ಲಿ ಗುರುತಿಸಿಕೊಳ್ಳದ ಜಾತಿಗಳ ಕುಲಶಾಸ್ತ್ರೀಯ ಅಧ್ಯಯನ ನಡೆಸಿ, ಜಾತಿ ಪಟ್ಟಿಯಲ್ಲಿ ಸೇರಿಸಲು ಸರ್ಕಾರ ಕ್ರಮ ತೆಗದುಕೊಳ್ಳಬೇಕು
* ಆದಿ, ದ್ರಾವಿಡ, ಆದಿ ಕರ್ನಾಟಕ, ಆದಿ ಆಂದ್ರ ಎಂದು ನಮೂದಿಸಿದವರಿಗೆ ಅದೇ ಹೆಸರಿನಲ್ಲಿ ಜಾತಿ ಪ್ರಮಾಣಪತ್ರ ನೀಡಬೇಕು
* ಉದ್ಯೋಗದಲ್ಲಿ ರೋಸ್ಟರ್ ಬಿಂದುಗಳನ್ನು ‘ಗುಂಪು’ಗಳ ಆಧಾರದಲ್ಲಿ ಗುರುತಿಸಬೇಕು. ಅದೇ ಆಧಾರದಲ್ಲಿ ಮೀಸಲಾತಿ ನೀಡಬೇಕು
* ಆದಿ, ದ್ರಾವಿಡ, ಆದಿ ಕರ್ನಾಟಕ, ಆದಿ ಆಂಧ್ರ ಎಂದು ನಮೂದಿಸುವ ಜೊತೆಗೆ ಮೂಲ ಜಾತಿಯನ್ನೂ ಗುರುತಿಸಿದ್ದರೆ, ಅಂಥವರಿಗೆ ಅವರ ಮೂಲ ಜಾತಿಯ ಹೆಸರಿನಲ್ಲಿಯೇ ಜಾತಿ ಪ್ರಮಾಣಪತ್ರ ನೀಡಬೇಕು
5 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆಯ 70 ಜಾತಿ
ಸಮೀಕ್ಷೆಯ ಸಂದರ್ಭದಲ್ಲಿ ಕೆಲವು ವಿಶೇಷ ಸಂಗತಿಗಳು ಬಹಿರಂಗವಾಗಿವೆ. ಈವರೆಗೂ ಸರ್ಕಾರದ ಯಾವುದೇ ಸೌಲಭ್ಯಗಳು ತಲುಪದ, ವಂಚಿತವಾದ ಜಾತಿಗಳನ್ನು ವರದಿಯಲ್ಲಿ ಆಯೋಗ ಪಟ್ಟಿ ಮಾಡಿದೆ. ಐದು ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಇರುವ 70 ಜಾತಿಗಳನ್ನು ಗುರುತಿಸಲಾಗಿದೆ.
1 ಲಕ್ಷ ಜನಸಂಖ್ಯೆ ಇರುವ ಏಳೆಂಟು ಜಾತಿಗಳನ್ನು ವರದಿಯಲ್ಲಿ ಪಟ್ಟಿ ಮಾಡಲಾಗಿದೆ ಎಂದೂ ಸರ್ಕಾರ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.