ADVERTISEMENT

ಎಸ್‌ಸಿಗೆ ಶೇ 17, ಎಸ್‌ಟಿಗೆ ಶೇ 7 ಮೀಸಲಾತಿ: ಇಂದಿನಿಂದ ಜಾರಿ

ಸರ್ಕಾರದಿಂದ ಅಧಿಸೂಚನೆ, ಅನುಷ್ಠಾನ ಕುರಿತು ಗೊಂದಲ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2022, 20:06 IST
Last Updated 31 ಅಕ್ಟೋಬರ್ 2022, 20:06 IST
   

ಬೆಂಗಳೂರು: ಶಿಕ್ಷಣ ಮತ್ತು ಉದ್ಯೋಗ ದಲ್ಲಿ ಪರಿಶಿಷ್ಟ ಜಾತಿಗೆ (ಎಸ್‌ಸಿ)ಶೇ 17, ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಶೇ 7 ಮೀಸಲಾತಿಯನ್ನು ರಾಜ್ಯೋತ್ಸವ ದಿನವಾದ ಮಂಗಳವಾರದಿಂದಲೇ (ನ.1) ಅನ್ವಯವಾಗುವಂತೆ ರಾಜ್ಯ ಸರ್ಕಾರ ಜಾರಿ ಮಾಡಿ ಸೋಮವಾರ ಅಧಿಸೂಚನೆ ಹೊರಡಿಸಿದೆ.

ಆದರೆ, ಹೆಚ್ಚಳಗೊಳಿಸಿದ ಮೀಸ ಲಾತಿಯನ್ನು ಅನುಷ್ಠಾನಗೊಳಿಸುವ ಪ್ರಕ್ರಿಯೆಗೆ ಸಂಬಂಧಿಸಿದಂತೆಈ ಅಧಿಸೂಚನೆಯಲ್ಲಿ ಯಾವುದೇ ಸ್ಪಷ್ಟತೆ ಇಲ್ಲ.‌ ಹೀಗಾಗಿ, ಅಧಿಸೂಚನೆ ಜಾರಿಗೊಳಿಸುವ ಬಗ್ಗೆ ಗೊಂದಲವಿದೆ ಎಂದು ಹೆಸರು ಬಹಿರಂಗ ಪಡಿಸಲು ಬಯಸದ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಮೀಸಲಾತಿಯನ್ನು ಹೆಚ್ಚಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಯಲ್ಲಿರುವ ಎಲ್ಲ ಉಪಬಂಧಗಳನ್ನು ಅನುಷ್ಠಾನಗೊಳಿಸಬೇಕು’ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಸೂಚನೆಯಲ್ಲಿ ತಿಳಿಸಿದೆ. ಎಲ್ಲ ಇಲಾಖೆಗಳ ಮುಖ್ಯಸ್ಥರು, ವಿಶ್ವವಿದ್ಯಾಲಯಗಳು, ಶಿಕ್ಷಣ ಸಂಸ್ಥೆಗಳು, ನಿಗಮ, ಮಂಡಳಿ, ಆಯೋಗ, ಸರ್ಕಾರದ ಅಧೀನ ಸಂಸ್ಥೆಗಳು, ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಕಾರ್ಯದರ್ಶಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಾರ್ಯ ನಿರ್ವಾಹಕ ನಿರ್ದೇಶಕರಿಗೆ ಅಧಿಸೂಚನೆ ಯನ್ನು ಇಲಾಖೆ ಕಳುಹಿಸಿದೆ.

ADVERTISEMENT

‌ಸುಗ್ರೀವಾಜ್ಞೆಯ ಪ್ರಕಾರ, ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳವು ರಾಜ್ಯ ಸರ್ಕಾರದ ಅಥವಾ ಅನುದಾನಿತ ಎಲ್ಲಾ ಶಾಲೆ, ಕಾಲೇಜು ಅಥವಾ ಇತರ ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿಗೆ ಅನ್ವಯ ಆಗಲಿದೆ. ಅಲ್ಲದೆ, ರಾಜ್ಯ ಸರ್ಕಾರಿ ಅಂದರೆ, ಸರ್ಕಾರ, ವಿಧಾನಮಂಡಲ, ಯಾವುದೇ ಸ್ಥಳೀಯ ಪ್ರಾಧಿಕಾರ ಅಥವಾ ಸರ್ಕಾರದ ಒಡೆತನ ದಲ್ಲಿರುವ ಅಥವಾ ನಿಯಂತ್ರಣದಲ್ಲಿರುವ ಯಾವುದೇ ನಿಗಮ ಅಥವಾ

ಕಂಪನಿಗಳಲ್ಲಿ ಹಾಗೂ ಸಾರ್ವ ಜನಿಕ ಸಂಸ್ಥೆಗಳಲ್ಲಿ (ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಯಡಿ ನೋಂದಣಿ ಯಾದ ಸಹಕಾರ ಸಂಘಗಳು, ಸರ್ಕಾರಿ ಅಥವಾ ಅನುದಾನಿತ ಶೈಕ್ಷಣಿಕ ಸಂಸ್ಥೆ ಗಳು, ಕಂಪನಿ ಕಾಯ್ದೆಗಳಡಿ ಬರುವ ಸರ್ಕಾರಿ ಕಂಪನಿ, ಸ್ಥಳೀಯ ಪ್ರಾಧಿಕಾರ, ಸರ್ಕಾರದ ಒಡೆತನ ಅಥವಾ ನಿಯಂತ್ರಣದಲ್ಲಿರುವ ಸ್ವಾಯತ್ತ ಸಂಸ್ಥೆಗಳು) ನೇಮಕಾತಿ ಮತ್ತು ಹುದ್ದೆಗಳಿಗೂ ಮೀಸಲಾತಿ ಹೆಚ್ಚಳ ಅನ್ವಯ ಆಗಲಿದೆ.

‘ಸುಗ್ರೀವಾಜ್ಞೆಯಲ್ಲಿರುವ ಎಲ್ಲ ಉಪಬಂಧಗಳು ನ. 1ರಿಂದಲೇ ಜಾರಿಗೆ ಬರತಕ್ಕದ್ದೆಂದು ಸರ್ಕಾರ ಗೊತ್ತು
ಪಡಿಸುತ್ತದೆ ಎಂದಷ್ಟೆ ಅಧಿಸೂಚನೆಯಲ್ಲಿದೆ. ಈ ಅಧಿಸೂಚನೆಯ ಜಾರಿಯಿಂದ ರಾಜ್ಯದಲ್ಲಿ ಒಟ್ಟು ಮೀಸಲಾತಿ ಪ್ರಮಾಣ ಶೇ 56 ಆಗುತ್ತದೆ. ಹೆಚ್ಚಳಗೊಳಿಸಿದ ಮೀಸಲಾತಿಯನ್ನು ಅನ್ವಯ ಮಾಡಲು ರೋಸ್ಟರ್‌ ಅನ್ನು (ಹುದ್ದೆಯ ಮೀಸಲಾತಿ ನಿಗದಿಪಡಿಸಿದ ಪಟ್ಟಿ) ಮರುನಿಗದಿಪಡಿಸಬೇಕಿದೆ. ಕಾನೂನು ವ್ಯಾಪ್ತಿಯ ಅಡಿಯಲ್ಲಿಯೂ ಮೀಸಲಾತಿ ಹೆಚ್ಚಳದ ಅನುಷ್ಠಾನ ಅಷ್ಟು ಸುಲಭವಲ್ಲ’ ಎಂದೂ ಅಧಿಕಾರಿ ವಿವರಿಸಿದರು.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರಿಗೆ ಕರೆ ಮಾಡಿದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ.

‘ಹೊಸ ನೇಮಕಾತಿಗಳಿಗೆ ಅನ್ವಯ’

‘ಎಸ್‌ಸಿ, ಎಸ್‌ಟಿ ಸಮುದಾಯದವರಿಗೆ ಹೆಚ್ಚಳಗೊಳಿಸಿದ ಮೀಸಲಾತಿ ಪ್ರಮಾಣ ನ. 1ರಿಂದ ಜಾರಿಯಾಗಲಿದ್ದು, ಅಂದಿನಿಂದ ಹೊರಡಿಸುವ ನೇಮಕಾತಿ ಅಧಿಸೂಚನೆಗಳಿಗೆ ಅನ್ವಯ ಆಗಲಿದೆ’ ಕೆಪಿಎಸ್‌ಸಿ ಕಾರ್ಯದರ್ಶಿ ವಿಕಾಸ್‌ ಕಿಶೋರ್‌ ಸುರಳ್ಕರ್‌ ಹೇಳಿದರು.

‘ಹುದ್ದೆಗಳ ಭರ್ತಿಗೆ ಈಗಾಗಲೇ ಹೊರಡಿಸಿದ ಅಧಿಸೂಚನೆಗಳು ಮತ್ತು ನೇಮಕಾತಿ ಪ್ರಕ್ರಿಯೆಯ ವಿವಿಧ ಹಂತಗಳಲ್ಲಿರುವ ಅಧಿಸೂಚನೆಗಳಲ್ಲಿ ಈ ಹಿಂದಿನಂತೆಯೇ ಮೀಸಲಾತಿ ಪ್ರಮಾಣವನ್ನು ಪ್ರವರ್ಗವಾರು (ಕೆಟಗರಿ) ನಿಗದಿಪಡಿಸಿ, ಪ್ರಕಟಿಸಲಾಗಿದೆ. ನನ್ನ ಪ್ರಕಾರ, ಈಗಾಗಲೇ ಹೊರಡಿಸಿರುವ ನೇಮಕಾತಿ ಅಧಿಸೂಚನೆಗಳಿಗೆ ಹೆಚ್ಚಳಗೊಳಿಸಿದ ಮೀಸಲಾತಿ ಪ್ರಮಾಣ ಅನ್ವಯಿಸುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.