ADVERTISEMENT

ವಸತಿ ಯೋಜನೆಯಲ್ಲಿ ಅಕ್ರಮ ಆರೋಪ: ಸಚಿವ ಸೋಮಶೇಖರ್‌ ಬಂಧನಕ್ಕೆ ಎಎಪಿ ಆಗ್ರಹ

ಬೆಂಗಳೂರು ‘ಫ್ರೀಡಂ ಪಾರ್ಕ್‌’ನಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2022, 4:58 IST
Last Updated 20 ಸೆಪ್ಟೆಂಬರ್ 2022, 4:58 IST
ನಗರದಲ್ಲಿ ಸೋಮವಾರ ಆಮ್‌ ಆದ್ಮಿ ಪಕ್ಷದಿಂದ ಸಚಿವ ಎಸ್‌.ಟಿ.ಸೋಮಶೇಖರ್‌ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಯಿತು   – ಪ್ರಜಾವಾಣಿ ಚಿತ್ರ
ನಗರದಲ್ಲಿ ಸೋಮವಾರ ಆಮ್‌ ಆದ್ಮಿ ಪಕ್ಷದಿಂದ ಸಚಿವ ಎಸ್‌.ಟಿ.ಸೋಮಶೇಖರ್‌ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಯಿತು   – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ವಸತಿ ಯೋಜನೆ ಕಾಮಗಾರಿಯಲ್ಲಿ ನಡೆದಿದ್ದ ಅಕ್ರಮಕ್ಕೆ ಸಂಬಂಧಿಸಿದಂತೆ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ ಬಂಧಿಸಬೇಕು’ ಎಂದು ಆಗ್ರಹಿಸಿ ಆಮ್‌ ಆದ್ಮಿ ಪಕ್ಷದ (ಎಎಪಿ) ಕಾರ್ಯಕರ್ತರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ ಪ್ರತಿಭಟಿಸಿದರು.

‘ಸೋಮಶೇಖರ್‌, ಬಿ.ಎಸ್‌.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ಸೇರಿ ಒಟ್ಟು 9 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ₹ 29.5 ಕೋಟಿ ಲಂಚ ಪಡೆದಿರುವ ಪ್ರಕರಣ ಇದಾಗಿದೆ’ ಎಂದು ಎಎಪಿ ಬೆಂಗಳೂರು ಅಧ್ಯಕ್ಷ ಮೋಹನ್‌ ದಾಸರಿ ಹೇಳಿದರು.

‘ಲೋಕಾಯುಕ್ತ ನ್ಯಾಯಾಲಯದಲ್ಲಿ ದಾಖಲೆ ಸಹಿತ ದೂರು ದಾಖಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಚಿವ ಸೋಮಶೇಖರ್‌ ಅವರನ್ನು ವಜಾ ಮಾಡಬೇಕು. ನಿಷ್ಪಕ್ಷಪಾತ ತನಿಖೆಗೆ ಲೋಕಾಯುಕ್ತ ಪೊಲೀಸರಿಗೆ ಅವಕಾಶ ಮಾಡಿಕೊಡಬೇಕು’ ಎಂದು ಆಗ್ರಹಿಸಿದರು.

ADVERTISEMENT

ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿ ಅಧ್ಯಕ್ಷ ಚನ್ನಪ್ಪಗೌಡ ನೆಲ್ಲೂರು ಮಾತನಾಡಿ, ‘ಬಿಜೆಪಿ ಸರ್ಕಾರವು ಭ್ರಷ್ಟ ಜನಪ್ರತಿನಿಧಿಗಳು, ಭ್ರಷ್ಟ ಅಧಿಕಾರಿಗಳ ರಕ್ಷಣೆಗೆ ನಿಂತಿದೆ. ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ಅಧಿಕಾರದಲ್ಲಿ ಇರುವವರೆಗೂ ಜನರ ತೆರಿಗೆ ಹಣವು ಭ್ರಷ್ಟರ ಪಾಲಾಗುತ್ತಿರುತ್ತದೆ’ ಎಂದು ಕಿಡಿಕಾರಿದರು.

ಪಕ್ಷದ ಮುಖಂಡರಾದ ವಿಜಯ್‌ ಶರ್ಮ, ಸಂಚಿತ್‌ ಸವ್ಹಾನಿ, ಬಿ.ಟಿ.ನಾಗಣ್ಣ, ಜಗದೀಶ್‌ ವಿ. ಸದಂ, ದರ್ಶನ್‌ ಜೈನ್‌, ಸುರೇಶ್‌ ರಾಥೋಡ್‌, ಜಗದೀಶ್‌ ಚಂದ್ರ, ಕುಶಲಸ್ವಾಮಿ, ಉಷಾ ಮೋಹನ್‌, ಸುಹಾಸಿನಿ ಫಣಿರಾಜ್, ಡಾ.ಸತೀಶ್‌, ಶಶಿಕುಮಾರ್‌ ಆರಾಧ್ಯ, ಶ್ರೀಕಾಂತ್‌, ಗುರುಮೂರ್ತಿ, ಸುಮನ್‌ ಪ್ರಶಾಂತ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.