ADVERTISEMENT

8 ಲಕ್ಷ ಅಲ್ಪಸಂಖ್ಯಾತವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ: ಸಚಿವ ಜಮೀರ್ ಅಹಮದ್

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2025, 16:25 IST
Last Updated 12 ಫೆಬ್ರುವರಿ 2025, 16:25 IST
ಜಮೀರ್ ಅಹಮದ್ ಖಾನ್
ಜಮೀರ್ ಅಹಮದ್ ಖಾನ್   

ಬೆಂಗಳೂರು: ‘ಅಲ್ಪಸಂಖ್ಯಾತರ ನಿರ್ದೇಶನಾಲಯದಿಂದ ಪ್ರಸಕ್ತ ಸಾಲಿನಲ್ಲಿ ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೆ 7.85 ಲಕ್ಷ ವಿದ್ಯಾರ್ಥಿಗಳಿಗೆ ₹290 ಕೋಟಿ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ’ ಎಂದು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.

‘6.25 ಲಕ್ಷ ವಿದ್ಯಾರ್ಥಿಗಳಿಗೆ ಡಿಬಿಟಿ ಮೂಲಕ ಈಗಾಗಲೇ ₹180 ಕೋಟಿ ವರ್ಗಾವಣೆ ಮಾಡಲಾಗಿದೆ. 1.60 ಲಕ್ಷ ವಿದ್ಯಾರ್ಥಿಗಳಿಗೆ ₹100 ಕೋಟಿ ಅನುದಾನ ಅಗತ್ಯ ಇರುವ ಬಗ್ಗೆ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದು ತಿಳಿಸಿದ್ದಾರೆ.

‘ವಿದ್ಯಾಸಿರಿ’ ಯೋಜನೆಯಲ್ಲಿ ಜನವರಿ ಅಂತ್ಯದವರೆಗೆ ಹಾಸ್ಟೆಲ್‌ಗಳಲ್ಲಿ 23 ಸಾವಿರ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿದೆ. ಹಾಸ್ಟೆಲ್‌ ಪ್ರವೇಶ ಸಿಗದ 5,753 ವಿದ್ಯಾರ್ಥಿಗಳಿಗೆ ಮಾಸಿಕ ₹1,500ರಂತೆ 10 ತಿಂಗಳ ಮೊತ್ತ ₹ 5 ಸಾವಿರ ವರ್ಗಾವಣೆ ಮಾಡಲಾಗಿದೆ. 200 ವಿದ್ಯಾರ್ಥಿಗಳ ಆಧಾರ್ ಲಿಂಕ್ ಸಮಸ್ಯೆ ಇದೆ. ಅದನ್ನು ಸರಿಪಡಿಸಿದ ನಂತರ ಅವರಿಗೂ ಹಣ ವರ್ಗಾವಣೆ ಆಗಲಿದೆ’ ಎಂದು ವಿವರಿಸಿದ್ದಾರೆ.

ADVERTISEMENT

‘ನಿರ್ದೇಶನಾಲಯಕ್ಕೆ ಪ್ರಸಕ್ತ ವರ್ಷ ನಿಗದಿಯಾಗಿದ್ದ ₹2,292 ಕೋಟಿಯಲ್ಲಿ ₹1,941 ಕೋಟಿ ಬಿಡುಗಡೆಯಾಗಿದೆ. ಅದರಲ್ಲಿ ₹1,608 ಕೋಟಿ (ಶೇ 83) ವೆಚ್ಚವಾಗಿದೆ. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ 7,500 ವಿದ್ಯಾರ್ಥಿಗಳಿಗೆ ‘ಅರಿವು’ ಯೋಜನೆ ಹಾಗೂ ವಿದೇಶಿ ವಿದ್ಯಾಭ್ಯಾಸ ನೆರವು ಯೋಜನೆಯಡಿಯಲ್ಲಿ ₹92.50 ಕೋಟಿ ಸಾಲ ವಿತರಿಸಲಾಗಿದೆ. ವಕ್ಫ್ ಮಂಡಳಿಗೆ ಬಿಡುಗಡೆಯಾದ ₹‌157 ಕೋಟಿಯಲ್ಲಿ ₹125 ಕೋಟಿ ವೆಚ್ಚ ಮಾಡಲಾಗಿದೆ’ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.