
ಸುವರ್ಣ ವಿಧಾನಸೌಧ (ಬೆಳಗಾವಿ): ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ ಮಾನ್ಯತೆ ನವೀಕರಣದ ಸಂಬಂಧ ಇರುವ ತೊಡಕುಗಳ ನಿವಾರಣೆಗೆ ಸದನ ಸಮಿತಿ ರಚಿಸಲು ಸರ್ಕಾರ ಒಪ್ಪಿಗೆ ನೀಡಿದೆ.
ವಿಧಾನ ಪರಿಷತ್ತಿನಲ್ಲಿನ ಪುಟ್ಟಣ್ಣ, ಶಶೀಲ್ ಜಿ.ನಮೋಶಿ, ಎಸ್.ವಿ.ಸಂಕನೂರ ಮತ್ತು ಎಸ್.ಎಲ್. ಬೋಜೇಗೌಡ ಅವರು ನಿಯಮ 330ರ ಅಡಿಯಲ್ಲಿ ವಿಷಯ ಪ್ರಸ್ತಾಪಿಸಿ, ‘ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರವು ಮಾನ್ಯೆತ ನವೀಕರಣ ನಿಯಮಗಳನ್ನು ರೂಪಿಸಿದೆ. ಆದರೆ ಯಾವ ಶಾಲೆಗಳೂ ಅವುಗಳನ್ನು ಪಾಲಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಶಾಲೆಗಳನ್ನು ಮುಚ್ಚುವ ಸ್ಥಿತಿ ಎದುರಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
ಚರ್ಚೆಯ ಬಳಿಕ ಉತ್ತರ ನೀಡಿದ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, ‘ಲಂಚದ ಸಮಸ್ಯೆ ಇದ್ದರೆ, ಅದನ್ನು ನನ್ನ ಗಮನಕ್ಕೆ ತನ್ನಿ. ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಇಲ್ಲಿ ಚರ್ಚಿಸಲಾದ ಎಲ್ಲ ಸಮಸ್ಯೆಗಳು ನಿಜಕ್ಕೂ ಇವೆ. ನಾನು ಅಧಿಕಾರ ವಹಿಸಿಕೊಳ್ಳುವ ಮುನ್ನ 62 ನಿಯಮಗಳು ಇದ್ದವು. ಅದನ್ನು ಈಗ 48ಕ್ಕೆ ಇಳಿಸಿದ್ದೇವೆ. ಇನ್ನೂ ಸರಳ ಮಾಡಲು ಯತ್ನಿಸುತ್ತೇವೆ. ಯಾವೆಲ್ಲಾ ಸಮಸ್ಯೆ ಇದೆ ಮತ್ತು ಅವಕ್ಕೆ ಪರಿಹಾರಗಳನ್ನು ಕಂಡುಕೊಳ್ಳಲು ಸದನ ಸಮಿತಿ ರಚಿಸಲು ಒಪ್ಪಿಗೆ ಇದೆ’ ಎಂದರು.
ಸಭಾಪತಿಯ ಪೀಠದಲ್ಲಿದ್ದ ಎಂ.ಕೆ.ಪ್ರಾಣೇಶ್ ಅವರು, ‘ಸದನ ಸಮಿತಿ ರಚಿಸಲಾಗುವುದು. ಅದರ ಸದಸ್ಯರು ಯಾರು ಎಂಬುದನ್ನು ತಿಳಿಸಲಾಗುತ್ತದೆ’ ಎಂದರು.
ಪುಟ್ಟಣ್ಣ, ‘50-60 ವರ್ಷಗಳ ಹಿಂದೆ ಆರಂಭಿಸಲಾಗಿರುವ ಶಾಲೆಗಳಿಗೆ ಭೂಮಿ ಹೇಗೆ ಬಂತು ಎಂಬುದಕ್ಕೆ ದಾಖಲೆ ನೀಡಿ, ಕಟ್ಟಡ ನಕ್ಷೆ ಮಂಜೂರಾತಿ ದಾಖಲೆ ನೀಡಿ, ಅಗ್ನಿಶಾಮಕ ದಳದ ನಿರಪೇಕ್ಷಣಾ ಪತ್ರ ನೀಡಿ ಎಂಬ ನಿಯಮವಿದೆ. ಹಳೆಯ ಶಾಲೆಗಳಿಗೆ ಈ ಎಲ್ಲ ದಾಖಲೆಗಳನ್ನು ಎಲ್ಲಿಂದ ತರುವುದು. ಈ ಅಸಹಾಯಕತೆಯನ್ನು ಬಳಸಿಕೊಂಡು ಲೋಕೋಪಯೋಗಿ ಇಲಾಖೆ, ಅಗ್ನಿಶಾಮಕ ಸೇವೆಗಳ ಇಲಾಖೆ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ’ ಎಂದು ಆರೋಪಿಸಿದರು.
‘ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಸದನ ಸಮಿತಿ ರಚಿಸಿ’ ಎಂದು ಸರ್ಕಾರವನ್ನು ಒತ್ತಾಯಿಸಿದರು. ನಮೋಶಿ ಮತ್ತು ಬೋಜೇಗೌಡ ಅವರು ಪುಟ್ಟಣ್ಣ ಅವರಿಗೆ ದನಿಗೂಡಿಸಿದರು.
ನಮೋಶಿ, ‘ಖಾಸಗಿ ಶಾಲೆಗಳಿಗಷ್ಟೇ ಈ ನಿಯಮ ಅನ್ವಯ ಮಾಡಲಾಗುತ್ತಿದೆ. ಸರ್ಕಾರಿ ಶಾಲೆಗಳಿಗೆ ಏಕೆ ಅನ್ವಯ ಮಾಡುತ್ತಿಲ್ಲ. ಅಲ್ಲಿನ ಮಕ್ಕಳ ಸುರಕ್ಷತೆಗೆ ಬೆಲೆ ಇಲ್ಲವೇ’ ಎಂದು ಪ್ರಶ್ನಿಸಿದರು.
ಬೋಜೇಗೌಡ, ‘15 ಮೀಟರ್‌ಗಳಿಗಿಂತ ಕಡಿಮೆ ಎತ್ತರದ ಕಟ್ಟಡಗಳಿರುವ ಶಾಲೆಗೆ ಈ ನಿಯಮ ಅನ್ವಯಿಸಬಾರದು ಎಂದು ಹೈಕೋರ್ಟ್ ಸೂಚನೆ ನೀಡಿದೆ. ಹೀಗಿದ್ದೂ ಶಿಕ್ಷಣ ಇಲಾಖೆ ಅಧಿಕಾರಿಗಳು ಹೈಕೋರ್ಟ್ ಸೂಚನೆಯನ್ನು ಪಾಲಿಸುತ್ತಿಲ್ಲ. ಬದಲಿಗೆ ಮಾನ್ಯತೆ ನವೀಕರಣ ತಡೆಹಿಡಿದು, ಲಂಚ ಕೀಳುತ್ತಿದ್ದಾರೆ’ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.