ADVERTISEMENT

ಸೈಕಲ್‌ ಬೆಲೆ ಹೆಚ್ಚಳ

5.40 ಲಕ್ಷ ಸೈಕಲ್‌ ಖರೀದಿಗೆ ಆದೇಶ

​ಪ್ರಜಾವಾಣಿ ವಾರ್ತೆ
Published 29 ಜೂನ್ 2019, 20:00 IST
Last Updated 29 ಜೂನ್ 2019, 20:00 IST
   

ಬೆಂಗಳೂರು: ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 8ನೇ ತರಗತಿ ವಿದ್ಯಾರ್ಥಿಗಳು ಈ ಬಾರಿ ತುಸು ‘ದುಬಾರಿ’ ಸೈಕಲ್‌ ಏರಿ ಶಾಲೆಗಳಿಗೆ ಹೋಗಲಿದ್ದಾರೆ.

2018–19ನೇ ಸಾಲಿನ ಸೈಕಲ್‌ಗಳಿಗೆ ಹೋಲಿಸಿದರೆ ಈ ಬಾರಿ ಬಾಲಕರ ಸೈಕಲ್‌ ಬೆಲೆ ₹169ರಷ್ಟು ಹೆಚ್ಚಿದ್ದರೆ, ಬಾಲಕಿಯರ ಸೈಕಲ್‌ ಬೆಲೆ ₹ 176ರಷ್ಟು ಹೆಚ್ಚಿದೆ.

‘ಸೈಕಲ್‌ಗಳ ಗುಣಮಟ್ಟ ಹೆಚ್ಚಳಕ್ಕೆ ಕೆಲವೊಂದು ಷರತ್ತುಗಳನ್ನು ವಿಧಿಸಿದ್ದರಿಂದಲೇ ಬೆಲೆಯಲ್ಲಿ ಸ್ವಲ್ಪ ಹೆಚ್ಚಳ ಆಗಿದೆ. ಕಳೆದ ವರ್ಷ ಬಾಲಕರ ಸೈಕಲ್‌ ಬೆಲೆ ₹ 3,457 ಇದ್ದರೆ, ಬಾಲಕಿಯರ ಸೈಕಲ್‌ ಬೆಲೆ ₹3,674 ಇತ್ತು. ಈ ಬಾರಿ ಅದು ಕ್ರಮವಾಗಿ 3,626 ಮತ್ತು ₹ 3,850ಕ್ಕೆ ಏರಿಕೆಯಾಗಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್‌.ಆರ್‌.ಉಮಾಶಂಕರ್‌ ಶನಿವಾರ ಇಲ್ಲಿ ತಿಳಿಸಿದರು.

ADVERTISEMENT

‘ಕಳೆದ ವರ್ಷ ಕೆಲವು ದೂರುಗಳು ಬಂದ ಕಾರಣ ಗುಣಮಟ್ಟ ಸುಧಾರಣೆಗೆ ಈ ಬಾರಿ ಹೆಚ್ಚಿನ ಕ್ರಮ ಕೈಗೊಂಡಿದ್ದೇವೆ. ಐಎಸ್‌ಐ ಗುರುತು
ಹಾಕಲು, ಮೆಟಲಿಕ್ ಫಿನಿಷ್‌ ಮಾಡಲು, ಟೂಲ್‌ ಕಿಟ್‌ ಒದಗಿಸಲು ಹಾಗೂ ಮೂರು ತಿಂಗಳಿಗೊಮ್ಮೆ ಸರ್ವೀಸ್‌ ಶಿಬಿರ ನಡೆಸಲು ತಿಳಿಸಿದ್ದೇವೆ’ ಎಂದು ಅವರು ವಿವರಿಸಿದರು.

ಕಳೆದ ವರ್ಷ 4.94 ಲಕ್ಷ ಸೈಕಲ್‌ ಪೂರೈಕೆಗೆ ಆದೇಶ ನೀಡಲಾಗಿತ್ತು. ಈ ವರ್ಷ ಅದು 5.40 ಲಕ್ಷಕ್ಕೆ ಹೆಚ್ಚಿದೆ. ಜುಲೈ 2ನೇ ವಾರ ಸೈಕಲ್ ಪೂರೈಕೆಯಾಗಲಿದೆ ಎಂದರು.

2006ರಲ್ಲಿ ಸೈಕಲ್‌ ನೀಡುವ ಯೋಜನೆ ಆರಂಭಿಸಿದ್ದಾಗ ಸೈಕಲ್‌ ಬೆಲೆ ₹ 2,030 ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.