ADVERTISEMENT

ರಜೆ ಮುಗಿದ ತಕ್ಷಣ ಶಾಲೆ ಆರಂಭ: ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 16:02 IST
Last Updated 22 ಸೆಪ್ಟೆಂಬರ್ 2025, 16:02 IST
ಮಧು ಬಂಗಾರಪ್ಪ
ಮಧು ಬಂಗಾರಪ್ಪ   

ಬೆಂಗಳೂರು: ‘ಶಾಲಾ ಅವಧಿಯಲ್ಲಿ ಬೋಧನೆಗೆ ಅಡ್ಡಿಯಾಗಬಾರದು ಎಂಬ ಕಾರಣಕ್ಕೆ ಜಾತಿವಾರು ಸಮೀಕ್ಷೆಗೆ ದಸರಾ ರಜೆಯನ್ನು ಬಳಸಿಕೊಂಡಿದ್ದೇವೆ. ರಜೆ ಮುಗಿದ ತಕ್ಷಣ ಶಾಲೆಗಳು ಪುನರಾರಂಭವಾಗಲಿವೆ’ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಶಿಕ್ಷಕರಿಗೆ ದಸರಾ ಹಬ್ಬ ಮಾಡಲು ಅವಕಾಶ ಕೊಡದೇ ಸಮೀಕ್ಷೆ ಮಾಡಿಸಲಾಗುತ್ತಿದೆ ಎಂದು ಬಿಜೆಪಿ ಆರೋಪ ಮಾಡಿದೆ. ಬಿಜೆಪಿ ಅವಧಿಯಲ್ಲೂ ಶಿಕ್ಷಕರ ಮೇಲೆ ಅನ್ಯ ಕಾರ್ಯಗಳ ಭಾರ ಇತ್ತು. ಕೇಂದ್ರ ಸರ್ಕಾರ ನಡೆಸುವ ಗಣತಿಯನ್ನು ಅವರು ಯಾರ ಬಳಿ ಮಾಡಿಸುತ್ತಾರೆ? ಶಿಕ್ಷಕರನ್ನು ಬಳಸದ ಹೊರತು ಬೇರೆ ಪರ್ಯಾಯ ವ್ಯವಸ್ಥೆ ಎಲ್ಲಿದೆ’ ಎಂದು ಪ್ರಶ್ನಿಸಿದರು.

‘ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಅರಿಯಲು ಸಮೀಕ್ಷೆ ಅನಿವಾರ್ಯ. ಸಮೀಕ್ಷೆಯಲ್ಲಿ ಭಾಗವಹಿಸಲು ಶಿಕ್ಷಕರು ಹಾಗೂ ಶಿಕ್ಷಕರ ಸಂಘಟನೆಗಳ ಜತೆ ಮಾತನಾಡಿ ಮನವರಿಕೆ ಮಾಡಿಕೊಟ್ಟಿದ್ದೇವೆ. ಶಿಕ್ಷಕರೂ ಸಹಕಾರ ನೀಡುತ್ತಿದ್ದಾರೆ. ಜನರೂ ಸಹ ಮನೆಗಳ ಬಳಿಗೆ ಬರುವ ಶಿಕ್ಷಕರಿಗೆ ಸಂಪೂರ್ಣ ಸಹಕಾರ ನೀಡಬೇಕು’ ಎಂದು ಕೋರಿದರು.

ADVERTISEMENT

‘ದಸರಾ ರಜೆ ವಿಸ್ತರಣೆ ಪ್ರಸ್ತಾಪ ಇಲ್ಲ. ರಜೆ ಮುಗಿಯುತ್ತಿದ್ದಂತೆ ಶಾಲೆಗಳು ಆರಂಭವಾಗುತ್ತವೆ. ಸಮೀಕ್ಷೆಯಲ್ಲಿ ಭಾಗವಹಿಸುವ ಶಿಕ್ಷಕರಿಗೆ ಪರ್ಯಾಯ ರಜೆ ನೀಡುವ ಕುರಿತು ಚರ್ಚಿಸಲಾಗುವುದು. ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ಹೇಳಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.