ADVERTISEMENT

ಶೈಕ್ಷಣಿಕ ವರ್ಷದ ಮೊದಲ ದಿನ ಶಾಲೆಗಳಲ್ಲಿ ಹಬ್ಬ: ಮಕ್ಕಳ ಸಡಗರ

ಸಂಭ್ರಮದಿಂದ ಆರಂಭವಾದ ಶೈಕ್ಷಣಿಕ ವರ್ಷದ ಮೊದಲ ದಿನ

​ಪ್ರಜಾವಾಣಿ ವಾರ್ತೆ
Published 16 ಮೇ 2022, 18:21 IST
Last Updated 16 ಮೇ 2022, 18:21 IST
ಮಂಗಳೂರಿನ ಮಣ್ಣಗುಡ್ಡೆಯ ದ.ಕ. ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಾರಂಭೋತ್ಸವದ ಪ್ರಯುಕ್ತ ಸೋಮವಾರ ಆಯೋಜಿಸಿದ್ದ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಮಕ್ಕಳ ಸಂಭ್ರಮ ಪ್ರಜಾವಾಣಿ ಚಿತ್ರ/ಇರ್ಷಾದ್‌ ಮೊಹಮ್ಮದ್‌
ಮಂಗಳೂರಿನ ಮಣ್ಣಗುಡ್ಡೆಯ ದ.ಕ. ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಾರಂಭೋತ್ಸವದ ಪ್ರಯುಕ್ತ ಸೋಮವಾರ ಆಯೋಜಿಸಿದ್ದ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಮಕ್ಕಳ ಸಂಭ್ರಮ ಪ್ರಜಾವಾಣಿ ಚಿತ್ರ/ಇರ್ಷಾದ್‌ ಮೊಹಮ್ಮದ್‌   

ಬೆಂಗಳೂರು: ತಳಿರು ತೋರಣಗಳಿಂದ ಶೃಂಗರಿಸುವ ಮೂಲಕ ಹಬ್ಬದ ವಾತಾವರಣ ಸೃಷ್ಟಿಸಿದ್ದ ಶಾಲೆಗಳತ್ತ ಮಕ್ಕಳು ಸೋಮವಾರ ಉತ್ಸಾಹದಿಂದ ಹೆಜ್ಜೆ ಹಾಕಿ ಸಂಭ್ರಮಿಸಿದರು.

ಶಾಲಾ ಆವರಣಗಳಲ್ಲಿ ರಂಗೋಲಿಗಳನ್ನು ಬಿಡಿಸಲಾಗಿತ್ತು. ಶಿಕ್ಷಕರು ಮತ್ತು ಸಿಬ್ಬಂದಿ ಮಕ್ಕಳನ್ನು ನಗುಮೊಗ
ದೊಂದಿಗೆ ಸ್ವಾಗತಿಸಿದರು. ಹಲವು ಶಾಲೆಗಳಲ್ಲಿ ಮಕ್ಕಳಿಗೆ ಗುಲಾಬಿ, ಪುಸ್ತಕ ಹಾಗೂ ಸಿಹಿ ತಿಂಡಿ ನೀಡಿ ಬರಮಾಡಿಕೊಳ್ಳಲಾಯಿತು.

ಕೋವಿಡ್‌ ಕರಿಛಾಯೆಯಿಂದ ಮನೆಯಲ್ಲಿಯೇ ಹೆಚ್ಚು ಸಮಯ ಕಳೆದಿದ್ದ ಮಕ್ಕಳಿಗೆ ಮರಳಿ ಶಾಲೆಗೆ ಮರಳುವುದು ಉತ್ಸಾಹ ತಂದಿತ್ತು. ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷದ ಮೊದಲ ದಿನ ಖುಷಿಯಿಂದ ಪಾಠಪ್ರವಚನಗಳಲ್ಲಿ ಭಾಗಿಯಾದರು. ಸ್ನೇಹಿತರನ್ನು ಭೇಟಿಯಾಗಿ ಸಂಭ್ರಮಿಸಿದರು. ಹಲವರು ಎರಡು ವರ್ಷಗಳ ನಂತರ ತಮ್ಮ ಸ್ನೇಹಿತರನ್ನು ಭೇಟಿಯಾಗಿದ್ದು ಸಂತಸ ಮೂಡಿಸಿತ್ತು.

ADVERTISEMENT

ಎರಡು ವರ್ಷಗಳಿಂದ ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳು ನಿಗದಿತ ಅವಧಿಯಲ್ಲಿ ಆರಂಭ ಆಗಲಿರಲಿಲ್ಲ. ಹೀಗಾಗಿ, ಈ ಬಾರಿ 15 ದಿನ ಮೊದಲೇ ಶಾಲೆಗಳ ಬಾಗಿಲು ತೆರೆದಿದ್ದು, ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳಿಗಾಗಿ ಕಲಿಕಾ ಚೇತರಿಕೆ ಕಾರ್ಯಕ್ರಮ ಆರಂಭಿಸಿದೆ.

ಶಾಲೆ ಆರಂಭಕ್ಕೆ ಅಧಿಕಾರಿಗಳು, ಶಿಕ್ಷಕರು ಹಾಗೂ ಎಸ್‌ಡಿಎಂಸಿ ಸದಸ್ಯರು ಪೂರ್ವಸಿದ್ಧತೆ ಮಾಡಿಕೊಂಡಿದ್ದರು. ಬಹುತೇಕ ಶಾಲೆಗಳಲ್ಲಿ ಮೊದಲ ದಿನ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಿರುವುದು ವರದಿಯಾಗಿದೆ.

ಶಾಲೆಗಳ ಪುನರಾರಂಭದ ದಿನವೇ ಸಮವಸ್ತ್ರ ಮತ್ತು ಪಠ್ಯಪುಸ್ತಕ ನೀಡಲು ಶಿಕ್ಷಣ ಇಲಾಖೆ ಉದ್ದೇಶಿಸಿತ್ತು. ಆದರೆ, ಇದುವರೆಗೆ ಶೇಕಡ 60ರಷ್ಟು ಮಾತ್ರ ಪಠ್ಯಪುಸ್ತಕಗಳನ್ನು ಪೂರೈಸಲಾಗಿದೆ. ಟೆಂಡರ್‌ ಪ್ರಕ್ರಿಯೆಯ ವಿಳಂಬ
ದಿಂದಾಗಿ ಸಮವಸ್ತ್ರಗಳನ್ನು ಸಕಾಲಕ್ಕೆ ಪೂರೈಸಲು ಸಾಧ್ಯವಾಗಿಲ್ಲ.

‘ಪಠ್ಯಪುಸ್ತಕ ಪೂರೈಸಿಲ್ಲ’: ‘ಶಿಕ್ಷಣ ಇಲಾಖೆಮಕ್ಕಳಿಗೆ ಸಕಾಲಕ್ಕೆ ಪಠ್ಯ ಪುಸ್ತಕ ಒದಗಿಸುವಲ್ಲಿ ವಿಫಲವಾಗಿದೆ. ಇದು ಖಂಡನೀಯ. ಸರ್ಕಾರವೇ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದೆ’ ಎಂದು ಕರ್ನಾಟಕ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ (ಕೆಎಎಂಎಸ್) ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ದೂರಿದ್ದಾರೆ.

‘ಇನ್ನೂ ಒಂದು ತಿಂಗಳು ಬೇಕಾಗಬಹುದು’

‘ಶೇ 60ರಷ್ಟು ಪಠ್ಯಪುಸ್ತಕಗಳನ್ನು ಮುದ್ರಿಸಲಾಗಿದ್ದು, ಶೇ 54ರಷ್ಟು ಸರಬರಾಜು ಮಾಡಲಾಗಿದೆ. ಇನ್ನೂ ಶೇ 40ರಷ್ಟು ಮುದ್ರಣವಾಗಬೇಕಾಗಿದೆ. ಉಳಿದ ಪಠ್ಯಪುಸ್ತಕಗಳ ಮುದ್ರಣ ಮತ್ತು ಸರಬರಾಜು ಮಾಡಲು ಇನ್ನೂ ಒಂದು ತಿಂಗಳು ಸಮಯಾವಕಾಶ ಬೇಕಾಗಬಹುದು’ ಎಂದು ಪಠ್ಯಪುಸ್ತಕದ ಪ್ರಮುಖ ಮುದ್ರಕರಾದ ಅಭಿಮಾನಿ ಪ್ರಕಾಶನದ ಆಡಳಿತಾಧಿಕಾರಿ ಅನಿಲ್‌ ಹೊಸಕೊಪ್ಪ ತಿಳಿಸಿದ್ದಾರೆ.

‘ಕಾಗದದ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಉತ್ತರ ಭಾರತದ ಮಿಲ್‌ಗಳು ನೀಡಿರುವ ವಿವರಗಳನ್ನು ಶಿಕ್ಷಣ ಇಲಾಖೆಗೆ ನೀಡಲಾಗಿದೆ. ಇನ್ನೂ ಅನುಮೋದನೆ ದೊರೆಯಬೇಕಾಗಿದೆ. ಆದರೆ, ಕಾಗದ ದರ ಏರಿಕೆಯಾಗಿರುವುದರಿಂದ ಮುದ್ರಕರಿಗೆ ಅಪಾರ ನಷ್ಟವಾಗಲಿದೆ ಎನ್ನುವುದನ್ನು ಅಧಿಕಾರಿಗಳಿಗೆ ತಿಳಿಸಿದ್ದೇವೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.