ADVERTISEMENT

ಶಾಲೆಗಳ ‘ಗಳಿಕೆ’ ಮೇಲೂ ಕಣ್ಣು

ಎಸ್‌ಡಿಎಂಸಿ ಖಾತೆಯಲ್ಲಿರುವ ಬಡ್ಡಿ ಹಣ ವಾಪಸ್‌ ಪಡೆಯುತ್ತಿರುವ ಶಿಕ್ಷಣ ಇಲಾಖೆ

ಸಂಧ್ಯಾ ಹೆಗಡೆ
Published 8 ಜುಲೈ 2018, 20:01 IST
Last Updated 8 ಜುಲೈ 2018, 20:01 IST
ಶಿರಸಿ ತಾಲ್ಲೂಕಿನ ಹಳ್ಳಿಯ ಸರ್ಕಾರಿ ಶಾಲೆಯ ಎದುರು ಸಾಗಿದ ಮಕ್ಕಳು
ಶಿರಸಿ ತಾಲ್ಲೂಕಿನ ಹಳ್ಳಿಯ ಸರ್ಕಾರಿ ಶಾಲೆಯ ಎದುರು ಸಾಗಿದ ಮಕ್ಕಳು   

ಬೆಂಗಳೂರು/ಶಿರಸಿ: ಕಡಿಮೆ ದಾಖಲಾತಿ ಹೊಂದಿರುವ ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿರುವ ಬೆನ್ನಿಗೇ ರಾಜ್ಯ ಸರ್ಕಾರ, ಶಾಲಾ ಕಟ್ಟಡಗಳ ನಿರ್ಮಾಣ ಹಾಗೂ ದುರಸ್ತಿಗೆ ಮಂಜೂರಾಗಿದ್ದ ಅನುದಾನದಿಂದ ಬಂದಿರುವ ಬಡ್ಡಿ ಮೊತ್ತವನ್ನೂ ವಾಪಸ್‌ ತರಿಸಿಕೊಳ್ಳುವ ಮೂಲಕ ಅವುಗಳ ಮೇಲೆ ಮತ್ತೊಂದು ಬರೆ ಎಳೆದಿದೆ.

ರಾಜ್ಯದಾದ್ಯಂತ ಇರುವ ಎಲ್ಲ ಸರ್ಕಾರಿ ಶಾಲೆಗಳ ಬ್ಯಾಂಕ್ ಖಾತೆಯಲ್ಲಿ ಹೊಂದಿರುವ ಬಡ್ಡಿ ಹಣವನ್ನು ವಾಪಸ್‌ ತರಿಸಿಕೊಳ್ಳಬೇಕು ಎಂದು ಶೈಕ್ಷಣಿಕ ಜಿಲ್ಲೆಗಳ ಉಪನಿರ್ದೇಶಕರಿಗೆ ಶಿಕ್ಷಣ ಇಲಾಖೆಯಿಂದ ಆದೇಶ ಹೋಗಿದೆ. ಶಿರಸಿ ಶೈಕ್ಷಣಿಕ ಜಿಲ್ಲೆಯೊಂದರಲ್ಲೇ ₹ 3.25 ಕೋಟಿ ಬಡ್ಡಿ ಹಣ ಸಂಗ್ರಹವಿದೆ. ಈಗಾಗಲೇ ಹಲವು ಶಾಲೆಗಳಿಂದ ಬಡ್ಡಿ ಹಣ ಇಲಾಖೆಗೆ ವಾಪಸ್‌ ಹೋಗಿದೆ.

ಸರ್ವ ಶಿಕ್ಷಣ ಅಭಿಯಾನ (ಎಸ್‌ಎಸ್‌ಎ) ಹಾಗೂ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ (ಆರ್‌ಎಂಎಸ್‌ಎ) ಯೋಜನೆಗಳ ಅಡಿಯಲ್ಲಿ ಸರ್ಕಾರದಿಂದ ಶಾಲೆಗಳಿಗೆ ಮಂಜೂರಾಗಿದ್ದ ಅನುದಾನವನ್ನು ತಕ್ಷಣವೇ ಬಳಕೆ ಮಾಡಲು ಸಾಧ್ಯವಾಗದಿದ್ದಾಗ ಆ ಮೊತ್ತವನ್ನು ಶಾಲೆಗಳ ಬ್ಯಾಂಕ್‌ ಖಾತೆಗಳಲ್ಲೇ ಠೇವಣಿ ಇಟ್ಟಿರಲಾಗಿರುತ್ತದೆ. ಪ್ರತಿ ಶಾಲೆಗೆ ಸಿಗುವ ಲಕ್ಷಾಂತರ ರೂಪಾಯಿ ಅನುದಾನ ಹಲವು ತಿಂಗಳುಗಳ ಕಾಲ ಅದರ ಖಾತೆಯಲ್ಲೇ ಇರುವುದರಿಂದ ದೊಡ್ಡ ಮೊತ್ತದ ಬಡ್ಡಿಯೂ ಸಿಕ್ಕಿರುತ್ತದೆ. ಆ ಬಡ್ಡಿ ಹಣದ ಮೇಲೆ ಶಿಕ್ಷಣ ಇಲಾಖೆಯ ಕಣ್ಣು ಬಿದ್ದಿದೆ.

ADVERTISEMENT

‘ಪ್ರತಿ ಶಾಲೆಯ ಖಾತೆಯಲ್ಲಿ ಸಂಗ್ರಹವಾಗಿರುವ ಬಡ್ಡಿ ಹಣದ ವಿವರವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಪಡೆಯುತ್ತಿದ್ದಾರೆ. ಅಲ್ಲದೆ ಶಾಲೆಯ ಮುಖ್ಯ ಶಿಕ್ಷಕರು ಖಾಲಿ ಚೆಕ್‌ಗೆ ನಮ್ಮಿಂದ ಸಹಿ ಹಾಕಿಸಿಕೊಳ್ಳುತ್ತಿದ್ದಾರೆ. ಶಾಲೆಯ ಖಾತೆಯಲ್ಲಿರುವ ಬಡ್ಡಿ ಹಣ ಅದರ ಅಭಿವೃದ್ಧಿಗಾಗಿಯೇ ಮೀಸಲಿರಬೇಕು. ಇಲಾಖೆಯ ಧೋರಣೆ ಸರಿಯಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಶಿರಸಿ ಶೈಕ್ಷಣಿಕ ಜಿಲ್ಲೆಯ ಹಲವು ಎಸ್‌ಡಿಎಂಸಿಗಳ ಅಧ್ಯಕ್ಷರು.

‘ನಮ್ಮ ಶಾಲೆಯ ಖಾತೆಯಲ್ಲಿ ₹ 33 ಸಾವಿರ ಬಡ್ಡಿ ಹಣ ಉಳಿದಿದೆ. ಎಲ್ಲ ಮೊತ್ತವನ್ನು ಸರ್ಕಾರ ವಾಪಸ್ ಪಡೆದರೆ ಎಸ್‌ಡಿಎಂಸಿ ಖಾತೆಯಲ್ಲಿ ಹಣವೇ ಇರುವುದಿಲ್ಲ’ ಎಂದರು ತಾಲ್ಲೂಕಿನ ಎಕ್ಕಂಬಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಸತ್ಯನಾರಾಯಣ ಪೂಜಾರಿ.

‘ಶಾಲೆಯ ನಿರ್ವಹಣೆಗೆ ಪ್ರತಿವರ್ಷ ಜೂನ್‌ನಲ್ಲಿ ಬಿಡುಗಡೆಯಾಗಬೇಕಾಗಿದ್ದ ಅನುದಾನ ಕಳೆದ ವರ್ಷ ಫೆಬ್ರುವರಿಯಲ್ಲಿ ದೊರೆತಿದೆ. ಈ ಬಾರಿ ಶೂ ಖರೀದಿಗೆ ಬಂದಿರುವ ₹ 12 ಸಾವಿರ ಹೊರತುಪಡಿಸಿ, ಯಾವುದೇ ಅನುದಾನ ಇನ್ನೂ ತನಕ ಬಂದಿಲ್ಲ. ಶೈಕ್ಷಣಿಕ ವರ್ಷದ ಆರಂಭದಲ್ಲಿ ಬರುತ್ತಿದ್ದ ಸಮವಸ್ತ್ರ ಕೂಡ ಬಂದಿಲ್ಲ ಎರಡನೇ ಸಮವಸ್ತ್ರದ ಅನುದಾನ ಜಮಾ ಆಗಿಲ್ಲ. ಹೀಗಿರುವಾಗ ಇದ್ದ ಹಣವನ್ನೂ ಹಿಂಪಡೆದರೆ ಹೇಗೆ’ ಎಂದು ಅವರು ಪ್ರಶ್ನಿಸಿದರು.

‘ಬಿಸಲಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ₹ 63 ಸಾವಿರ ಬಡ್ಡಿ ಹಣವಿದೆ.ನಮ್ಮ ಸುತ್ತಮುತ್ತಲಿನ ಶಾಲೆಯ ಮಾಹಿತಿ ಕಲೆ ಹಾಕಿದಾಗ ಉಳ್ಳಾಲಕೊಪ್ಪ ಶಾಲೆಯಲ್ಲಿ ₹ 34 ಸಾವಿರ, ಕೊರ್ಸೆ ಶಾಲೆಯಲ್ಲಿ ₹ 34 ಸಾವಿರ ಬಡ್ಡಿ ಹಣವಿದೆ. ಈ ಮೊತ್ತವನ್ನು ಶಾಲಾ ಬಳಕೆಗೆ ನೀಡಿದ್ದರೆ, ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಸ್ಮಾರ್ಟ್‌ ಕ್ಲಾಸ್‌ನಂತಹ ಸೌಲಭ್ಯಕ್ಕೆ ಬಳಸಿಕೊಳ್ಳುತ್ತಿದ್ದೆವು’ ಎಂದು ಬಿಸಲಕೊಪ್ಪ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಸಂತೋಷ ಹೆಗಡೆ ಹೇಳಿದರು.

‘ಖಾಲಿ ಚೆಕ್‌ ಮೇಲೆ ಸಹಿ ಹಾಕುವಂತೆ ಒತ್ತಡ ಬರುತ್ತಿದೆ. ಕೆಲವು ಎಸ್‌ಡಿಎಂಸಿ ಅಧ್ಯಕ್ಷರು ಈಗಾಗಲೇ ಸಹಿ ಹಾಕಿದ್ದಾರೆ. ಮೂರ್ನಾಲ್ಕು ದಿನಗಳಿಂದ ಈ ಪ್ರಕ್ರಿಯೆ ಆರಂಭವಾಗಿದ್ದು, ನಮ್ಮ ಶಾಲೆಯ ಖಾತೆಯ ಹಣವನ್ನು ಇಲಾಖೆ ಕಿತ್ತುಕೊಳ್ಳಲು ಮುಂದಾದರೆ, ಪ್ರತಿಭಟನೆ ನಡೆಸಲಾಗುತ್ತದೆ’ ಎಂದು ಶಿರಸಿ ತಾಲ್ಲೂಕಿನ ಹಲವು ಎಸ್‌ಡಿಎಂಸಿಗಳ ಅಧ್ಯಕ್ಷರು ಎಚ್ಚರಿಸಿದರು.

* ಶಾಲೆಗಳ ಖಾತೆಯಲ್ಲಿರುವ ಬಡ್ಡಿ ಹಣದ ಮಾಹಿತಿ ತಿಳಿಸುವಂತೆ ನಮಗೆ ಆದೇಶ ಬಂದಿದ್ದು ಅದನ್ನು ಸಂಗ್ರಹಿಸುತ್ತಿದ್ದೇವೆ. ಯಾರಿಂದಲೂ ಖಾಲಿ ಚೆಕ್‌ಗೆ ಸಹಿ ಮಾಡಿಸಿಕೊಳ್ಳುತ್ತಿಲ್ಲ

-ಸಿ.ಎಸ್.ನಾಯ್ಕ, ಶಿರಸಿ ಶೈಕ್ಷಣಿಕ ಜಿಲ್ಲೆಯ ಪ್ರಭಾರಿ ಡಿಡಿಪಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.