ADVERTISEMENT

‘ಪಠ್ಯಪುಸ್ತಕ ಪರಿಷ್ಕರಣೆ: ಮಕ್ಕಳ ಸಮಾಲೋಚನೆ ನಡೆಸಿ’

​ಪ್ರಜಾವಾಣಿ ವಾರ್ತೆ
Published 24 ಮೇ 2022, 18:53 IST
Last Updated 24 ಮೇ 2022, 18:53 IST

ಬೆಂಗಳೂರು: ಪಠ್ಯಪುಸ್ತಕಗಳಲ್ಲಿನ ಪಾಠಗಳ ಆಯ್ಕೆಗಾಗಿ ಮಕ್ಕಳ ಸಮಾಲೋಚನೆ ಏರ್ಪಡಿಸುವಂತೆಮಕ್ಕಳ ಹಕ್ಕುಗಳ ಕಾರ್ಯಕರ್ತನಾಗಸಿಂಹ ಜಿ.ರಾವ್‌, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರಿಗೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ.

‘ಪಠ್ಯಕ್ರಮದ ಕುರಿತು ರಾಜ್ಯದಲ್ಲಿ ದೊಡ್ಡಮಟ್ಟದ ಚರ್ಚೆ ನಡೆಯುತ್ತಿದೆ. ಮಕ್ಕಳು ಯಾವ ಪಾಠಗಳನ್ನು ಓದಬೇಕು ಎಂಬುದನ್ನು ಹಿರಿಯರೇ ನಿರ್ಧರಿಸುವುದು ಮೊದಲಿನಿಂದಲೂ ಬೆಳೆದುಬಂದಿದೆ. ಪಠ್ಯಪುಸ್ತಕ ಸಿದ್ಧಪಡಿಸುವ ಸಮಿತಿಯಲ್ಲೂ ಮಕ್ಕಳ ಪ್ರತಿನಿಧಿಗಳು ಇಲ್ಲ. ಇದರಿಂದಾಗಿ ಮಕ್ಕಳ ಭಾಗವಹಿಸುವಿಕೆಯ ಹಕ್ಕು ಕಸಿದಂತಾಗಿದೆ’ ಎಂದು ಅವರು ತಿಳಿಸಿದ್ದಾರೆ.

‘ತಾವು ಏನನ್ನು ಓದಬೇಕು ಎಂಬುದನ್ನು ನಿರ್ಧರಿಸುವ ಸಮರ್ಥತೆ ರಾಜ್ಯದ ಮಕ್ಕಳಲ್ಲಿ ಇದೆ. ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಮಕ್ಕಳ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಅವರೊಂದಿಗೆ ಪಠ್ಯಪುಸ್ತಕ ಹಾಗೂ ಅದರೊಳಗೆ ಸೇರ್ಪಡೆ ಮಾಡುವ ವಿಚಾರದ ಆಯ್ಕೆಯ ಬಗ್ಗೆ ಸಮಾಲೋಚನೆ ನಡೆಸಬೇಕು. ಮಕ್ಕಳು ನೀಡುವ ಶಿಫಾರಸ್ಸುಗಳನ್ನು ಶಿಕ್ಷಣ ತಜ್ಞರೊಂದಿಗೆ ಹಂಚಿಕೊಂಡು ಪಠ್ಯರಚನೆಯ ಪ್ರಕ್ರಿಯೆ ಪಾರಂಭಿಸಬೇಕು.

ADVERTISEMENT

ಪಠ್ಯಗಳ ಬಗ್ಗೆ ನಡೆಯುತ್ತಿರುವ ಚರ್ಚೆಗೆ ಸೂಕ್ತ ವೇದಿಕೆ ನಿರ್ಮಿಸಿ ಮಕ್ಕಳ ಮನದ ಗೊಂದಲ ನಿವಾರಿಸುವ ಕೆಲಸವನ್ನು ತಕ್ಷಣವೇ ಮಾಡಬೇಕು. ಪಠ್ಯದಲ್ಲಿ ಮಕ್ಕಳ ಹಕ್ಕು, ಮಕ್ಕಳ ರಕ್ಷಣೆಗೆ ಸಂಬಂಧಿಸಿದ ವಿಚಾರಗಳನ್ನು ಸೇರ್ಪಡೆ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.