ADVERTISEMENT

ಶಾಲೆ ಆರಂಭಕ್ಕೆ ಹಬ್ಬದ ಸಡಗರ

ಎಸ್ಸೆಸ್ಸೆಲ್ಸಿ ಶೇ 41, ದ್ವಿತೀಯ ಪಿಯುಸಿ ಶೇ 32 ವಿದ್ಯಾರ್ಥಿಗಳು ಹಾಜರು

​ಪ್ರಜಾವಾಣಿ ವಾರ್ತೆ
Published 1 ಜನವರಿ 2021, 19:31 IST
Last Updated 1 ಜನವರಿ 2021, 19:31 IST
ಬೆಂಗಳೂರಿನ ಚಾಮರಾಜಪೇಟೆಯ ವಿಶ್ವೇಶ್ವರಯ್ಯ ಬಿಬಿಎಂಪಿ ಪಬ್ಲಿಕ್‌ ಶಾಲೆ ಮತ್ತು ಕಾಲೇಜಿನಲ್ಲಿ ಶಿಕ್ಷಕ ಎಚ್. ಎಸ್. ನಟೇಶ್ ಅವರು ಶುಕ್ರವಾರ ಕೊರೊನಾ ವೈರಸ್‌ ಮಾದರಿಯ ಪೋಷಾಕು ಧರಿಸಿ ಜಾಗೃತಿ ಮೂಡಿಸಿದರು –ಪ್ರಜಾವಾಣಿ ಚಿತ್ರ
ಬೆಂಗಳೂರಿನ ಚಾಮರಾಜಪೇಟೆಯ ವಿಶ್ವೇಶ್ವರಯ್ಯ ಬಿಬಿಎಂಪಿ ಪಬ್ಲಿಕ್‌ ಶಾಲೆ ಮತ್ತು ಕಾಲೇಜಿನಲ್ಲಿ ಶಿಕ್ಷಕ ಎಚ್. ಎಸ್. ನಟೇಶ್ ಅವರು ಶುಕ್ರವಾರ ಕೊರೊನಾ ವೈರಸ್‌ ಮಾದರಿಯ ಪೋಷಾಕು ಧರಿಸಿ ಜಾಗೃತಿ ಮೂಡಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ತರಗತಿಗಳು ಶುಕ್ರವಾರದಿಂದ ಪುನರಾರಂಭಗೊಂಡಿದ್ದು, ಶಿಕ್ಷಕರು ಹಾಗೂ ಮಕ್ಕಳು ಹಬ್ಬದ ಸಂಭ್ರಮವನ್ನು ಶಾಲೆಯಲ್ಲಿ ಕಂಡರು. ಶಾಲೆ–ಕಾಲೇಜುಗಳಲ್ಲಿ ಕೈಗೊಂಡಿದ್ದ ಮುಂಜಾಗ್ರತಾ ಕ್ರಮದಿಂದಾಗಿ ಆತಂಕ ಮರೆಯಾಗಿ, ಹೊಸ ವರ್ಷ ಆರಂಭದ ದಿನ ಮಕ್ಕಳಲ್ಲಿ ಭರವಸೆಯ ಬೆಳಕು ಮೂಡಿದ್ದು ಎಲ್ಲೆಡೆ ಕಾಣಿಸುವಂತಿತ್ತು.

‘ಕೊರೊನಾ ಓಡಿಸೋಣ... ಮಕ್ಕಳನ್ನು ಸುರಕ್ಷಿತ ವಾತಾವರಣದಲ್ಲಿ ಓದಿಸೋಣ...’ ಎಂಬ ಧ್ಯೇಯವಾಕ್ಯದೊಂದಿಗೆೆ ಒಂಬತ್ತು ತಿಂಗಳ ಬಳಿಕ ಮೊದಲ ದಿನದ ತರಗತಿಗಳನ್ನು ನಡೆದವು. ಮಕ್ಕಳಿಗೆ ಗುಲಾಬಿ ಹೂವು, ಚಾಕಲೇಟ್‌ ನೀಡಿ, ಆರತಿ ಮಾಡಿ ಸ್ವಾಗತಿಸಿದ ಶಿಕ್ಷಕರು, ವಿದ್ಯಾರ್ಥಿಗಳಲ್ಲಿ ಧೈರ್ಯ ತುಂಬಿದರು. ಕೆಲವೆಡೆಗಳಲ್ಲಿ ಓಲಗ ವಾದ್ಯ, ತಮಟೆ ಬಾರಿಸಿ ಮಕ್ಕಳನ್ನು ಬರಮಾಡಿಕೊಂಡರು.

ಬಾಲಕರಿಗಿಂತ ಬಾಲಕಿಯರೇ ಸಂಖ್ಯೆಯೇ ಹೆಚ್ಚಿತ್ತು. ಶೇ 41ರಷ್ಟು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು, ಶೇ 32ರಷ್ಟು ದ್ವಿತೀಯ ಪಿಯು ವಿದ್ಯಾರ್ಥಿಗಳು ತರಗತಿಗೆ ಹಾಜರಾದರು. ಮಕ್ಕಳೊಂದಿಗೆ ಪೋಷಕರೂ ಶಾಲೆಗೆ ಬಂದು, ಸುರಕ್ಷತಾ ಕ್ರಮಗಳನ್ನು ಕಂಡು ಸಮಾಧಾನ ಪಟ್ಟುಕೊಂಡರು.

ADVERTISEMENT

10ನೇ ತರಗತಿ ಮತ್ತು ದ್ವಿತೀಯ ಪಿಯು ತರಗತಿಗಳು ಬೆಳಿಗ್ಗೆ ಆರಂಭವಾದರೆ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಬೆಳಿಗ್ಗೆ ಮತ್ತು ಮಧ್ಯಾಹ್ನದ ಪಾಳಿಗಳಲ್ಲಿ 6ರಿಂದ 9ನೇ ತರಗತಿಗಳಿಗೆ ವಿದ್ಯಾಗಮ ಕಾರ್ಯಕ್ರಮ ನಡೆಸಲಾಯಿತು. ಶಾಲಾವರಣದಲ್ಲಿ ಪುಟ್ಟಪುಟ್ಟ ತಂಡಗಳಲ್ಲಿ ಮಾರ್ಗದರ್ಶಿ ಶಿಕ್ಷಕರ ಕಣ್ಗಾವಲಿನಲ್ಲಿ ವಿದ್ಯಾಗಮ ನಡೆಸಲಾಯಿತು. ಖಾಸಗಿ ಶಾಲೆಗಳಲ್ಲಿಯೂ ಸಂಭ್ರಮದ ವಾತಾವರಣ ಮನೆ ಮಾಡಿತ್ತು.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಉಪಸಭಾಧ್ಯಕ್ಷ ಆನಂದ ಮಾಮನಿ, ಸಚಿವರಾದ ಪ್ರಭು ಚೌಹಾಣ್, ಕೆ. ಗೋಪಾಲಯ್ಯ, ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಸೇರಿದಂತೆ ಅನೇಕ ಶಾಸಕರು, ಸಚಿವರು ಹಾಗೂ ಶಾಲೆಗಳಿಗೆ ಕೆಲವು ಮಠಾಧೀಶರೂ ಶಾಲೆಗೆ ಬಂದು ಮಕ್ಕಳಿಗೆ ವಿಶ್ವಾಸ ತುಂಬಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.