ADVERTISEMENT

ಶಾಲೆಗಳ ಪುನರಾರಂಭ: ‌ವಿಪಕ್ಷಗಳಿಂದ ತೀವ್ರ ವಿರೋಧ

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ಗೆ ಪತ್ರ ಬರೆದ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2020, 18:55 IST
Last Updated 9 ಅಕ್ಟೋಬರ್ 2020, 18:55 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ಶಾಲೆಗಳನ್ನು ಪುನರಾರಂಭ ಮಾಡುವ ಪ್ರಸ್ತಾವಕ್ಕೆ ವಿರೋಧ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ತೀವ್ರ ವಿರೋಧ ವ್ಯಕ್ತಪಡಿಸಿವೆ.

ಕೋವಿಡ್‌ ನಿಯಂತ್ರಣಕ್ಕೆ ಬರುವವರೆಗೂ ಶಾಲೆಗಳನ್ನು ಪುನರಾರಂಭ ಮಾಡಬಾರದು ಎಂದು ಎರಡೂ ಪಕ್ಷಗಳು ರಾಜ್ಯ ಸರ್ಕಾರವನ್ನು ಆಗ್ರಹಿಸಿವೆ.

ಈ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಅವರಿಗೆ ಶುಕ್ರವಾರ ಪತ್ರ ಬರೆದಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ಕೊರೊನಾ ಸೋಂಕು ದೇಶದ ಇತರ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ವೇಗವಾಗಿ ಹಬ್ಬುತ್ತಿದೆ. ಈಗ ಜೀವ ಉಳಿಸಿಕೊಳ್ಳುವುದೇ ಮುಖ್ಯ. ಉಳಿದೆಲ್ಲವೂ ನಗಣ್ಯ. ಇಂತಹ ಸಂದರ್ಭದಲ್ಲಿ ಕೊರೊನಾ ಸೋಂಕು ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೆ ಶಾಲೆಗಳನ್ನು ತೆರೆಯಬಾರದು’ ಎಂದು ಆಗ್ರಹಿಸಿದ್ದಾರೆ.

ADVERTISEMENT

ನಗರ ಪ್ರದೇಶದ ಖಾಸಗಿ ಶಾಲೆಗಳ ಮಕ್ಕಳಿಗೆ ಆನ್‌ಲೈನ್‌ ತರಗತಿಗಳು ನಡೆಯುತ್ತಿವೆ. ಅದೇ ರೀತಿ ರಾಜ್ಯದ ಎಲ್ಲ ಮಕ್ಕಳಿಗೂ ಆನ್‌ಲೈನ್‌ ತರಗತಿಗಳನ್ನು ಪ್ರಾರಂಭಿಸಬೇಕು. ಅದಕ್ಕೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಿಕೊಡಬೇಕು, ಪ್ರಸಕ್ತ ಶೈಕ್ಷಣಿಕ ವರ್ಷದ ಎಲ್ಲ ವಿದ್ಯಾರ್ಥಿಗಳನ್ನೂ ಉತ್ತೀರ್ಣಗೊಳಿಸಿ, ಮುಂದಿನ ತರಗತಿಗೆ ಕಳಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಸರ್ಕಾರದ ದಾಖಲೆಗಳ ಪ್ರಕಾರ 10 ವರ್ಷದೊಳಗಿನ 20,256 ಮಕ್ಕಳು ಮತ್ತು 11 ರಿಂದ 20 ವರ್ಷದೊಳಗಿನ 47,061 ಮಕ್ಕಳು ಕೊರೊನಾ ಸೋಂಕಿತರಾಗಿದ್ದಾರೆ. 61 ಮಕ್ಕಳು ಮೃತಪಟ್ಟಿದ್ದಾರೆ. ಮಕ್ಕಳು ಶಾಲೆಗೆ ಬಂದಾಗ ಮಾಸ್ಕ್‌ ಧರಿಸುವುದು, ಸ್ಯಾನಿಟೈಸರ್‌ ಬಳಕೆ, ಅಂತರ ಕಾಯ್ದುಕೊಳ್ಳುವುದು ಕಷ್ಟವಾಗುತ್ತದೆ. ಇದರಿಂದ ಮನೆಗಳಲ್ಲಿ ಇರುವವರಿಗೂ ಸೋಂಕು ಹರಡುವ ಅಪಾಯವಿದೆ ಎಂದು ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

ಅನಾಹುತಕ್ಕೆ ದಾರಿ: ಶಾಲೆ ಆರಂಭಕ್ಕೆ ವಿರೋಧ ವ್ಯಕ್ತಪಡಿಸಿರುವ ಕುಮಾರಸ್ವಾಮಿ, ‘ಈ ಸಂದರ್ಭದಲ್ಲಿ ಶಾಲೆಗಳ ಆರಂಭ ದೊಡ್ಡ ಅನಾಹುತಕ್ಕೆ ದಾರಿಯಾಗಲಿದೆ ಎಂಬುದನ್ನು ಸರ್ಕಾರ ಮನಗಾಣಬೇಕು. ಜೀವ ಮುಖ್ಯ ಅನ್ನೋ ಮಾತು ನಿಜವಾಗಿಸಬೇಕಾದರೆ ಈ ವರ್ಷ ಯಾವುದೇ ಕಾರಣಕ್ಕೂ ಶಾಲೆ ಆರಂಭಿಸಬೇಡಿ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಆಗ್ರಹಿಸಿದ್ದಾರೆ.

‘ಕಲಬುರ್ಗಿ ಜಿಲ್ಲೆಯ ವಠಾರ ಶಾಲೆಯ ಮಕ್ಕಳಿಗೆ ಕೊರೊನಾ ಸೋಂಕು ತಗುಲಿದೆ. ವಿದ್ಯಾಗಮ ಯೋಜನೆಯಲ್ಲಿ ಪಾಲ್ಗೊಂಡ 26 ಶಿಕ್ಷಕರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಇದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಕಳೆದ ವರ್ಷದ ಮಕ್ಕಳ ಸಾಧನೆ ಪರಿಗಣಿಸಿ ಕೇಂದ್ರ ಮತ್ತು ರಾಜ್ಯ ಪಠ್ಯಕ್ರಮದ ಎಲ್ಲ ವಿದ್ಯಾರ್ಥಿಗಳನ್ನೂ ಉತ್ತೀರ್ಣಗೊಳಿಸಿ’ ಎಂದು ಸಲಹೆ ನೀಡಿದ್ದಾರೆ.

ಶಾಲೆ ಆರಂಭಿಸದಂತೆ ಮುಖ್ಯಮಂತ್ರಿ ಜತೆ ಖುದ್ದಾಗೆ ಮಾತನಾಡುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ.

ವದಂತಿಗಳಿಗೆ ಕಿವಿಗೊಡಬೇಡಿ: ಸಿ.ಎಂ

‘ಮಕ್ಕಳ ಆರೋಗ್ಯ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ಎಲ್ಲ ಪಕ್ಷಗಳ ಮುಖಂಡರು, ತಜ್ಞರು, ಹಿರಿಯ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು. ಆ ಬಳಿಕವೇ ಶಾಲೆಗಳ ಪುನರಾರಂಭದ ಕುರಿತು ತೀರ್ಮಾನಕ್ಕೆ ಬರಲಾಗುವುದು. ಅಲ್ಲಿಯವರೆಗೂ ಈ ಕುರಿತು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.