ADVERTISEMENT

ಪರಿಶಿಷ್ಟರ ಹಣ ಅನ್ಯ ಉದ್ದೇಶಕ್ಕೆ ಬಳಸಿದರೆ ಹೋರಾಟ: ಘಟನೆಗಳ ಎಚ್ಚರಿಕೆ

60ಕ್ಕೂ ಹೆಚ್ಚು ಸಂಘಟನೆಗಳ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 16:03 IST
Last Updated 3 ಮಾರ್ಚ್ 2026, 16:03 IST
ದುಂಡು ಮೇಜಿನ ಸಭೆಯಲ್ಲಿ ಛಲವಾದಿ ನಾರಾಯಣಸ್ವಾಮಿ, ನಿವೃತ್ತ ಐಎಎಸ್‌ ಅಧಿಕಾರಿ ಲಕ್ಷ್ಮೀನಾರಾಯಣ, ಮಾಜಿ ಸಚಿವ ಎನ್‌.ಮಹೇಶ್ ‍‍‍ಪಾಲ್ಗೊಂಡಿದ್ದರು
ದುಂಡು ಮೇಜಿನ ಸಭೆಯಲ್ಲಿ ಛಲವಾದಿ ನಾರಾಯಣಸ್ವಾಮಿ, ನಿವೃತ್ತ ಐಎಎಸ್‌ ಅಧಿಕಾರಿ ಲಕ್ಷ್ಮೀನಾರಾಯಣ, ಮಾಜಿ ಸಚಿವ ಎನ್‌.ಮಹೇಶ್ ‍‍‍ಪಾಲ್ಗೊಂಡಿದ್ದರು   

ಬೆಂಗಳೂರು: ‘ಪರಿಶಿಷ್ಟ ಸಮುದಾಯದವರಿಗೆ ಮೀಸಲಾದ ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನದಲ್ಲಿ ಕಳೆದ ಮೂರು ವರ್ಷಗಳಲ್ಲಿ ಸುಮಾರು ₹39,000 ಕೋಟಿಯನ್ನು ಸರ್ಕಾರ ಅನ್ಯ ಉದ್ದೇಶಗಳಿಗೆ ಬಳಸಿದೆ. ಇದು ದಲಿತರಿಗೆ ಮಾಡಿರುವ ವಂಚನೆ’ ಎಂದು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಂಘಟನೆಗಳು ದೂರಿವೆ.

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಂಘಟನೆಗಳ ದುಂಡು ಮೇಜಿನ ಸಭೆ ಮಂಗಳವಾರ ಇಲ್ಲಿ ನಡೆಯಿತು. ಸುಮಾರು 60 ಸಂಘಟನೆಗಳ ಪ್ರಮುಖರು ಈ ಸಭೆಯಲ್ಲಿ ಭಾಗವಹಿಸಿದ್ದರು.

‘ಈ ಸಾಲಿನ ಬಜೆಟ್‌ನಲ್ಲಿ ಪುನಃ ಅದೇ ತಪ್ಪನ್ನು ಮಾಡಿದರೆ ಬಜೆಟ್‌ ಪ್ರತಿಯನ್ನು ಸುಟ್ಟು ಹಾಕಿ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ’ ಎಂದೂ ಸಂಘಟನೆಗಳು ಎಚ್ಚರಿಕೆ ನೀಡಿವೆ. 

ADVERTISEMENT

ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ‘ಎಸ್‌ಸಿಎಸ್‌ಪಿ, ಟಿಎಸ್‌ಪಿ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಸುತ್ತಿರುವುದನ್ನು ಎಲ್ಲ ಸಂಘಟನೆಗಳು ಖಂಡಿಸಿವೆ. ಈ ಸರ್ಕಾರ ದಲಿತರಿಗೆ ವಂಚನೆ ಮಾಡುತ್ತಿದೆ. ಸರ್ಕಾರದ ವಿರುದ್ಧ ದೊಡ್ಡ ಹೋರಾಟ ರೂಪಿಸಬೇಕು ಎಂಬ ಮಾತನ್ನು ಸಭೆಯಲ್ಲಿ ಒಕ್ಕೊರಲಿನಿಂದ ಹೇಳಿದ್ದಾರೆ’ ಎಂದರು.

‘ಗ್ಯಾರಂಟಿ ಯೋಜನೆಗಳಿಗೆ ಒಂದು ವರ್ಷಕ್ಕೆ ₹52 ಸಾವಿರ ಕೋಟಿ ಬೇಕು. ಅಷ್ಟು ಮೊತ್ತವನ್ನು ಬಜೆಟ್‌ನಲ್ಲಿ ತೆಗೆದಿಟ್ಟ ಮೇಲೆ ಎಸ್‌ಸಿಎಸ್‌ಪಿ, ಟಿಎಸ್‌ಪಿ ಹಣವನ್ನು ಯಾಕೆ ಬಳಸಿಕೊಳ್ಳಬೇಕು? ಒಕ್ಕಲಿಗರಿಗೆ ಒಕ್ಕಲಿಗರ ಅಭಿವೃದ್ಧಿ ನಿಗಮದಿಂದ ತೆಗೆದು ಕೊಡುತ್ತಿದ್ದೀರಾ? ಲಿಂಗಾಯತರಿಗೆ ಕೊಡುವುದನ್ನು ಅವರ ಅಭಿವೃದ್ಧಿ ನಿಗಮದಿಂದ ತೆಗೆದುಕೊಡುತ್ತಿದ್ದೀರಾ’ ಎಂದು ಅವರು ಪ್ರಶ್ನಿಸಿದರು.

‘ಮುಸ್ಲಿಮರಿಗೆ ಕೊಡುವ ಗ್ಯಾರಂಟಿ ಹಣವನ್ನು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ತೆಗೆದು ಕೊಡುತ್ತೀರಾ? ಪರಿಶಿಷ್ಟ ಜಾತಿ, ವರ್ಗಗಳಿಗೆ ಕೊಡುವಾಗ ಅವರ ಹಣ ತೆಗೆದು ಯಾಕೆ ಕೊಡುತ್ತೀರಿ ಎಂಬ ವಿಷಯವನ್ನು ಸಭೆಯಲ್ಲಿ ಎಲ್ಲ ಮುಖಂಡರು ಪ್ರಸ್ತಾಪಿಸಿದರು’ ಎಂದು ಹೇಳಿದರು.

‘ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನ ₹42 ಸಾವಿರ ಕೋಟಿ ಎಂದು ಜನರಿಗೆ ತೋರಿಸುತ್ತೀರಿ. ಇದರಲ್ಲಿ 34 ಇಲಾಖೆಗಳಿವೆ. ಅವುಗಳಿಗೆ ₹21 ಸಾವಿರ ಕೋಟಿ ಕೊಡುತ್ತೀರಿ. ಉಳಿದ ₹21 ಸಾವಿರ ಕೋಟಿಯಲ್ಲಿ ₹14 ಸಾವಿರ ಕೋಟಿಯನ್ನು ಗ್ಯಾರಂಟಿಗಳಿಗೆ ಬಳಸಿದರೆ ಉಳಿಯುವುದು ₹7 ಸಾವಿರ ಕೋಟಿ. ಅಂದರೆ, ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸಿಗುವ ಎಸ್‌ಸಿಎಸ್‌ಪಿ, ಟಿಎಸ್‌ಪಿ ಹಣ ಕೇವಲ ₹7 ಸಾವಿರ ಕೋಟಿ. ಅಂದ ಮೇಲೆ ₹42 ಸಾವಿರ ಕೋಟಿ ಕೊಡುತ್ತಿದ್ದೇವೆ ಎಂದು ಯಾಕೆ ಹೇಳಿಕೊಳ್ಳುತ್ತೀರಿ’ ಎಂದು ಛಲವಾದಿ ಪ್ರಶ್ನಿಸಿದರು.

ಸಭೆಯಲ್ಲಿ ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ, ಮಾಜಿ ಸಚಿವ ಎನ್‌.ಮಹೇಶ್, ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮೀನಾರಾಯಣ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.