
ಬ್ರಿಜೇಶ್ ಚೌಟ
ನವದೆಹಲಿ: ಕೋಮು ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಎಸ್‌ಡಿಪಿಐಗೆ ಕಡಿವಾಣ ಹಾಕಬೇಕು ಎಂದು ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಶುಕ್ರವಾರ ಇಲ್ಲಿ ಆಗ್ರಹಿಸಿದರು.
ಲೋಕಸಭೆಯಲ್ಲಿ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ’ಕೇಂದ್ರ ಗೃಹ ಸಚಿವಾಲಯವು ಪಿಎಫ್‌ಐ ಸಂಘಟನೆ ನಿಷೇಧಿಸಿದೆ. ಆದರೆ, ಪಿಎಫ್ಐ ಕಾರ್ಯಕರ್ತರು ಎಸ್‌ಡಿಪಿಐ ಕಾರ್ಯಕರ್ತರಂತೆ ನಟಿಸಿ ಚುನಾವಣಾ ರಾಜಕಾರಣಕ್ಕೆ ಧುಮುಕುತ್ತಿದ್ದಾರೆ. ಜತೆಗೆ, ರಾಷ್ಟ್ರೀಯ ಭದ್ರತೆಗೆ ಗಂಭೀರ ಬೆದರಿಕೆ ಒಡ್ಡುತ್ತಿದ್ದಾರೆ‘ ಎಂದು ದೂರಿದರು.
‘ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಇಂತಹ ಶಕ್ತಿಗಳನ್ನು ಪೋಷಿಸುತ್ತಿದೆ. ಎಸ್‌ಡಿಪಿಐ ಹಾಗೂ ಪಿಎಫ್‌ಐ ಜತೆಗೆ ಉತ್ತಮ ಸಂಬಂಧ ಹೊಂದಿದೆ. ಈ ಸಂಬಂಧವು ಸಮುದಾಯಗಳನ್ನು ಅಪಾಯಕ್ಕೆ ಸಿಲುಕಿಸಿದೆ, ಭದ್ರತೆಯನ್ನು ದುರ್ಬಲಗೊಳಿಸಿದೆ ಮತ್ತು ಮೂಲಭೂತ ಶಕ್ತಿಗಳು ವ್ಯಾಪಕ ಪ್ರಮಾಣದಲ್ಲಿ ಬೆಳೆಯಲು ಅವಕಾಶ ಮಾಡಿಕೊಟ್ಟಿದೆ‘ ಎಂದು ಅವರು ಕಿಡಿಕಾರಿದರು.
ಇಂತಹ ಶಕ್ತಿಗಳ ಅಕ್ರಮ ಆರ್ಥಿಕ ಚಟುವಟಿಕೆಗಳ ಬಗ್ಗೆ ಜಾರಿ ನಿರ್ದೇಶನಾಲಯವು ತನಿಖೆ ನಡೆಸುತ್ತಿದೆ. ರಾಷ್ಟ್ರವಿರೋಧಿ ಶಕ್ತಿಗಳ ಬೆನ್ನೆಲುಬನ್ನು ಮುರಿಯುವ ಮತ್ತು ಅವು ಹೊಸ ಹೆಸರುಗಳು ಅಥವಾ ರಾಜಕೀಯ ರಂಗಗಳಲ್ಲಿ ಮತ್ತೆ ಕಾಣಿಸಿಕೊಳ್ಳಲು ಅವಕಾಶ ನೀಡದಂತೆ ನೋಡಿಕೊಳ್ಳುವ ಸಮಯ ಬಂದಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು‘ ಎಂದು ಅವರು ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.