ಹುಬ್ಬಳ್ಳಿ: ‘ಕೇರಳದಿಂದ ಮಂಗಳೂರಿಗೆ ಬಂದ ವ್ಯಕ್ತಿಗಳು ಗಲಭೆ ಮಾಡುತ್ತ, ಕೊಲೆಗೆ ಪ್ರಚೋದನೆ ನೀಡುತ್ತ ದಾಂಧಲೆ ಮಾಡುತ್ತಿದ್ದಾರೆ. ಪಿಎಫ್‌ಐ ಸಂಘಟನೆ ನಿಷೇಧಿಸಿದಂತೆ, ಎಸ್‌ಡಿಪಿಐ ಪಕ್ಷವನ್ನು ನಿಷೇಧಿಸಬೇಕು’ ಎಂದು ಶ್ರೀರಾಮ ಸೇನಾ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ಆಗ್ರಹಿಸಿದರು.
ನಗರದ ಕ್ಯೂಬಿಕ್ಸ್ ಹೋಟೆಲ್ ಸಭಾಂಗಣದಲ್ಲಿ ಭಾನುವಾರ ನಡೆದ ಶ್ರೀರಾಮ ಸೇನೆಯ ‘ಲವ್ ಜಿಹಾದ್ ವಿರುದ್ಧ 24/7 ಕಾರ್ಯ ನಿರ್ವಹಿಸಿದ ಸಹಾಯವಾಣಿ’ಯ ಪ್ರಥಮ ವರ್ಷದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಮುಸ್ಲಿಮ್ ಮತಾಂಧರು ಲವ್ ಜಿಹಾದ್ ಮೂಲಕ ಹಿಂದೂ ಹುಡುಗಿಯರನ್ನು ಯಾಮಾರಿಸುತ್ತಿದ್ದಾರೆ. ಅವರು ನಿಜವಾಗಿಯೂ ಪ್ರೀತಿಸಿ ಮದುವೆಯಾಗಿದ್ದರೆ, ಗೋಮಾಂಸ ತಿನ್ನುವಂತೆ, ಬೂರ್ಖಾ ಧರಿಸುವಂತೆ ಯಾಕೆ ಒತ್ತಡ ಹಾಕಬೇಕು? ನಾವು ಪ್ರೀತಿಗೆ ವಿರೋಧಿಸುತ್ತಿಲ್ಲ. ಪ್ರೀತಿ ಹೆಸರಲ್ಲಿ ನಡೆಯುತ್ತಿರುವ ಕಪಟತನ, ಧರ್ಮ ವಿರೋಧಿ ಹಾಗೂ ದೇಶದ್ರೋಹಿ ಕಾರ್ಯದ ವಿರುದ್ಧ ಸಮರ ಸಾರುತ್ತಿದ್ದೇವೆ’ ಎಂದರು.
‘ನಮ್ಮ ಸಮಾಜದಲ್ಲಿರುವ ಜಾತಿ ಪದ್ಧತಿಯನ್ನು ಹೋಗಲಾಡಿಸಲು ಸಾಧ್ಯವಿಲ್ಲ. ಅದನ್ನು ವಿರೋಧಿಸಿ ಎಲ್ಲ ಜಾತಿಯವರನ್ನು ಒಟ್ಟುಗೂಡಿಸಿದ್ದ ಬಸವಣ್ಣನನ್ನೇ, ಒಂದು ಜಾತಿಗೆ ಸೀಮಿತವಾಗಿಸಿದ್ದಾರೆ. ಜಾತಿಯ ಅಹಂಕಾರ, ಸೊಕ್ಕು ಎಲ್ಲೇ ಮೀರುತ್ತಿದೆ. ಅದು ಮನೆಯ ಒಳಗಡೆಯೇ ಇರಲಿ, ಹೊರಗೆ ಬಂದಾಗ ಹಿಂದೂ ಅನ್ನುವುದಷ್ಟೇ ಆಗಿರಲಿ. ಪೆಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಎಲ್ಲರಿಗೂ ಪಾಠವಾಗಬೇಕು’ ಎಂದ ಮುತಾಲಿಕ್, ‘ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಒಂದು ಜಾತಿಗೆ ಸೀಮಿತ ಮಾಡುವುದು ಬೇಡ. ಮಹಾಪುರುಷರನ್ನು ಜಾತಿಯ ಚೌಕಟ್ಟಿನಲ್ಲಿ ನೋಡುವುದನ್ನು ಬಿಟ್ಟು ಬಿಡಿ. ಅವರೆಲ್ಲರ ಜಯಂತಿಯನ್ನು ಎಲ್ಲ ಸಮುದಾಯದವರು ಜಾತಿ ಚೌಕಟ್ಟು ಮೀರಿ ಒಗ್ಗಟ್ಟಿನಿಂದ ಆಚರಿಸಬೇಕು. ಹಿಂದೂ ಸಮಾಜ ಸಶಕ್ತವಾಗಬೇಕು’ ಎಂದು ಹೇಳಿದರು.
‘ದೇವಸ್ಥಾನ, ಮಠಗಳಿಗೆ ದೇಣಿಗೆ, ಹಣ ಕೊಡುವುದನ್ನು ನಿಲ್ಲಿಸಿ. ಅವು ಈಗಾಗಲೇ ಸದೃಢವಾಗಿ ಬೆಳೆದಿದ್ದು, ಅವರ‍್ಯಾರಿಗೂ ಹಿಂದೂಗಳ ಬಗ್ಗೆ ಕಾಳಜಿಯಿಲ್ಲ. ದೇಶಕ್ಕೆ ಹಿಂದೂ ಸಂಘಟಕರ ಅಗತ್ಯವಿದೆ. ಅವರ ವಿರುದ್ಧ ದಾಖಲಾಗುವ ಪ್ರಕರಣಗಳ, ಕೋರ್ಟ್ ವಿಚಾರಣೆಗಳಿಗೆ ಹಣದ ಅಗತ್ಯವಿದೆ. ನೆರವು ನೀಡುವವರು ಬೇಕಾಗಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.