ADVERTISEMENT

ಎಸ್‌ಡಿಪಿಐ ಮೇಲೆ ದಾಳಿ: ದಾಖಲೆ ಒದಗಿಸಲು ಹೈಕೋರ್ಟ್‌ ಸೂಚನೆ

ಎಸ್‌ಡಿಪಿಐ ಕಚೇರಿ ಮೊಹರು ತೆರವು ಕೋರಿದ ಅರ್ಜಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 21:22 IST
Last Updated 7 ಫೆಬ್ರುವರಿ 2023, 21:22 IST
   

ಬೆಂಗಳೂರು: ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾಗೆ (ಎಸ್‌ಡಿಪಿಐ) ಸೇರಿದ ಸ್ಥಳಗಳ ಮೇಲೆ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನೀಡಿರುವ ನಿರ್ದೇಶನದ ದಾಖಲೆಗಳನ್ನು ಒದಗಿಸಿ’ ಎಂದು ಹೈಕೋರ್ಟ್‌, ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

‘ಎಸ್‌ಡಿಪಿಐಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಿ, ಜಪ್ತಿ ಮಾಡಿರುವ ಸ್ವತ್ತುಗಳಿಗೆ ಹಾಕಲಾದ ಮೊಹರು ತೆರವುಗೊಳಿಸಲು ನಿರ್ದೇಶಿಸಬೇಕು‘ ಎಂದು ಕೋರಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಎಸ್‌ಡಿಪಿಐ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ‘ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಎಸ್‌ಡಿಪಿಐನ 17 ಕಚೇರಿಗಳಿಗೆ ಮೊಹರು ಹಾಕಲಾಗಿದೆ. ಕಚೇರಿಗಳಿದ್ದ ಕಟ್ಟಡಗಳಿಗೆ ಬಾಡಿಗೆ ಕಟ್ಟುತ್ತಿದ್ದೇವೆ. ಮುಂಬರಲಿರುವ ವಿಧಾನಸಭೆ ಚುನಾವಣೆಗೆ ಎಸ್‌ಡಿಪಿಐ ಸಿದ್ಧವಾಗಬೇಕಿದ್ದು, ಕಚೇರಿಗಳನ್ನು ಬಂದ್ ಮಾಡಿರುವುದರಿಂದ ಯಾವುದೇ ರಾಜಕೀಯ ಕಾರ್ಯಕ್ರಮ ನಡೆಸಲಾಗುತ್ತಿಲ್ಲ. ಆದ್ದರಿಂದ ಮೊಹರುಗಳನ್ನು ತೆರವುಗೊಳಿಸಲು ಜಿಲ್ಲಾಡಳಿತಕ್ಕೆ ನಿರ್ದೇಶಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

ಅರ್ಜಿಗೆ ಪ್ರಾಥಮಿಕ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರಿ ವಕೀಲ ಎಂ. ವಿನೋದ್ ಕುಮಾರ್, ‘ಪಾ‍ಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು (ಪಿಎಫ್‌ಐ) ಕೇಂದ್ರ ಸರ್ಕಾರ ನಿಷೇಧಿಸಿದೆ. ಪಿಎಫ್‌ಐನ ಸಾಮಗ್ರಿಗಳು ಎಸ್‌ಡಿಪಿಐ ಕಚೇರಿಯಲ್ಲಿ ದೊರೆತಿವೆ. ಕೇಂದ್ರ ಸರ್ಕಾರದ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗಿದೆ. ಆದರೆ, ಅರ್ಜಿಯಲ್ಲಿ ಕೇಂದ್ರ ಸರ್ಕಾರವನ್ನು ಪ್ರತಿವಾದಿಯನ್ನಾಗಿ ಕಾಣಿಸಿಲ್ಲ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಕೇಂದ್ರ ಸರ್ಕಾರ ನೀಡಿರುವ ನಿರ್ದೇಶನದ ದಾಖಲೆಗಳನ್ನು ಮುಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಒದಗಿಸಿ‘ ಎಂದು ಸೂಚಿಸಿ, ಅರ್ಜಿಯನ್ನು ಇದೇ 16ಕ್ಕೆ ಮುಂದೂಡಿದೆ.

ಅರ್ಜಿಯಲ್ಲಿ ಏನಿದೆ?: ‘ಎಸ್‌ಡಿಪಿಐ, ಪಿಎಫ್‌ಐ ಜತೆ ಯಾವುದೇ ಸಂಪರ್ಕ ಹೊಂದಿಲ್ಲ. ಪಿಎಫ್‌ಐ ಮತ್ತದರ ಸಂಸ್ಥೆಗಳನ್ನು ನಿಷೇಧಿಸುವ ಸಂದರ್ಭದಲ್ಲಿ ಗೃಹ ಸಚಿವಾಲಯ ಎಸ್‌ಡಿಪಿಐ ಹೆಸರನ್ನು ಸೇರಿಸಿಲ್ಲ. ಆದರೂ ಪ್ರತಿವಾದಿಗಳು ಪಕ್ಷಕ್ಕೆ ಸೇರಿದ ಸ್ಥಳಗಳ ಮೇಲೆ ಅಕ್ರಮವಾಗಿ ದಾಳಿ ನಡೆಸಿ, ಜಪ್ತಿ ಮಾಡಿದ್ದಾರೆ’ ಎಂಬುದು ಅರ್ಜಿದಾರರ ಆಕ್ಷೇಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.