ADVERTISEMENT

ನೆರೆ ಪರಿಹಾರ: 2ನೇ ವರದಿಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2020, 17:14 IST
Last Updated 7 ಜನವರಿ 2020, 17:14 IST
ಪ್ರವಾಹ
ಪ್ರವಾಹ   

ಬೆಂಗಳೂರು: ಎರಡನೇ ಬಾರಿಗೆ ಸಂಭವಿಸಿದ ನೆರೆಯಿಂದ ಆಗಿರುವ ಹಾನಿಯ ಬಗ್ಗೆ ಅಧಿಕಾರಿಗಳು ವರದಿ ಸಿದ್ಧಪಡಿಸುತ್ತಿದ್ದು, ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ ಶೀಘ್ರ ವರದಿ ಸಲ್ಲಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ ಮಂಗಳವಾರ ಹೇಳಿದರು.

ಮೊದಲ ಬಾರಿಗೆ ನೆರೆಯಿಂದಾಗಿ ಹಾನಿಗೊಳಗಾದ ಪ್ರದೇಶಗಳಲ್ಲೇ ಮತ್ತೊಮ್ಮೆ ನೆರೆ ಬಂದು ಹಾನಿಯಾಗಿದೆ. ಇಂತಹ ಪ್ರದೇಶಗಳಿಗೆ ಎರಡು ಬಾರಿ ಪರಿಹಾರ ಕೇಳಲು ಸಾಧ್ಯವಿಲ್ಲ. ಹಾಗಾಗಿ ಎಲ್ಲವನ್ನೂ ಪರಿಶೀಲಿಸಿ ವರದಿ ಸಿದ್ಧಪಡಿಸಲಾಗುತ್ತಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಎನ್‌ಡಿಆರ್‌ಎಫ್ ನಿಯಮದ ಪ್ರಕಾರ ಎರಡನೇ ಕಂತಿನ ಹಣ ಬಿಡುಗಡೆಯಾಗಿದೆ. 12 ರಾಜ್ಯಗಳು ನೆರೆಗೆ ತುತ್ತಾಗಿದ್ದು, ಎಲ್ಲಾ ರಾಜ್ಯಗಳಿಗೂ ಪರಿಹಾರ ನೀಡಬೇಕಾಗುತ್ತದೆ. ಇದರಿಂದಾಗಿ ರಾಜ್ಯಕ್ಕೆ ಪರಿಹಾರ ಬಿಡುಗಡೆ ಸ್ವಲ್ಪ ತಡವಾಗಿರಬಹುದು. ಪ್ರಧಾನಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಹಣ ಬಿಡುಗಡೆಯಾಗಿದೆ ಎಂದರು.

ADVERTISEMENT

ಪ್ರವಾಹಪೀಡಿತ ಪ್ರದೇಶಗಳಲ್ಲಿ ಹಾನಿಗೆ ತುತ್ತಾದ ಮನೆಗಳ ನಿರ್ಮಾಣಕ್ಕೆ ಈಗಾಗಲೇ ಮೊದಲ ಕಂತಿನ ಹಣ ಬಿಡುಗಡೆಯಾಗಿದೆ. ಶೀಘ್ರವೇ ಎರಡನೇ ಕಂತಿನ ಹಣ ನೀಡಲಾಗುವುದು. ಮನೆ ನಿರ್ಮಾಣಕ್ಕೆ ಹಣದ ಕೊರತೆ ಇಲ್ಲ. ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆತಿಳಿಸಲಾಗಿದೆ. ಪರಿಹಾರದ ವಿಚಾರದಲ್ಲಿ ಸರ್ಕಾರ ಕೊಟ್ಟಿರುವ ಭರವಸೆಯನ್ನು ಉಳಿಸಿಕೊಳ್ಳಲಿದೆ ಎಂದು ತಿಳಿಸಿದರು.

ಎನ್‌ಡಿಆರ್‌ಎಫ್ ಪ್ರಕಾರ ರಾಜ್ಯಕ್ಕೆ ₹3 ಸಾವಿರ ಕೋಟಿ ನೆರವು ಬರಬೇಕಿದ್ದು, ಈಗಾಗಲೇ ₹1200 ಕೋಟಿ ಬಂದಿದೆ ಎಂದರು.

ಐಎಂಎ: ಐಎಂಎ ವಂಚನೆ ಪ್ರಕರಣದಲ್ಲಿ ಯಾರನ್ನೂ ರಕ್ಷಣೆ ಮಾಡುತ್ತಿಲ್ಲ. ಈಗಾಗಲೇ ಈ ಕಂಪನಿಆಸ್ತಿ ಮುಟ್ಟುಗೋಲು ಹಾಕಿಕೊಂಡಿದ್ದು, ಇದೇ ರೀತಿ ವಂಚಿಸಿದ ಇತರ ಕಂಪನಿಗಳ ಆಸ್ತಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.