ADVERTISEMENT

ಗುತ್ತಿಗೆದಾರನ ಲಾಕರ್‌ನಲ್ಲಿ ₹6 ಕೋಟಿ: ಐ.ಟಿ ಅಧಿಕಾರಿಗಳಿಂದ ಜಪ್ತಿ

ಬೆಂಗಳೂರಿನ ಎರಡು ಬ್ಯಾಂಕುಗಳಲ್ಲಿ ಇರಿಸಿದ್ದ ಅಕ್ರಮ ಹಣ:

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2019, 20:40 IST
Last Updated 4 ಏಪ್ರಿಲ್ 2019, 20:40 IST
ಟೋಲ್ ಪ್ಲಾಜಾದಲ್ಲಿ ಸಂಗ್ರಹಿಸಿಟ್ಟ ಹಣ ಎಣಿಸುತ್ತಿರುವ ಅಧಿಕಾರಿ
ಟೋಲ್ ಪ್ಲಾಜಾದಲ್ಲಿ ಸಂಗ್ರಹಿಸಿಟ್ಟ ಹಣ ಎಣಿಸುತ್ತಿರುವ ಅಧಿಕಾರಿ   

ನವದೆಹಲಿ/ ಬೆಂಗಳೂರು:ಗುತ್ತಿಗೆದಾರರೊಬ್ಬರು ಬೆಂಗಳೂರಿನ ಬ್ಯಾಂಕ್ ಲಾಕರ್‌ನಲ್ಲಿ ಅಕ್ರಮವಾಗಿ ಇರಿಸಿದ್ದ₹ 6 ಕೋಟಿ ನಗದನ್ನು ಗುರುವಾರ ಜಪ್ತಿ ಮಾಡಿದ್ದಾಗಿ ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ರಾಜಕಾರಣಿಯೊಬ್ಬರ ಆಪ್ತರಾಗಿರುವ ಗುತ್ತಿಗೆದಾರನ ನಿವಾಸ ಮತ್ತು ಕಚೇರಿಯ ಮೇಲೆ ದಾಳಿ‌ ನಡೆಸಿದ ಸಂದರ್ಭ ಅಕ್ರಮ ಹಣ ₹ 6 ಕೋಟಿ ಇರುವುದು ಪತ್ತೆಯಾಯಿತು. ಎರಡು ಬ್ಯಾಂಕ್‌ಗಳ ಲಾಕರ್‌ಗಳಲ್ಲಿ ಈ ಹಣ ಪತ್ತೆಯಾಗಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಆಮಿಷ ಒಡ್ಡಲು ಈ ಹಣ ಇರಿಸಲಾಗಿತ್ತು ಎನ್ನಲಾಗಿದೆ.

ADVERTISEMENT

ಅಧಿಕಾರಿ ಮನೆಯಲ್ಲೇ ಕೋಟಿ ಪತ್ತೆ: ಈ ಮಧ್ಯೆ ಬುಧವಾರ ಸಿಬಿಐ ಬಲೆಗೆ ಬಿದ್ದಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಮನೆ ಮತ್ತು ಕಚೇರಿಯಿಂದ ₹1.65 ಕೋಟಿ ನಗದು ಸೇರಿದಂತೆ ದಾಖಲೆ ವಶಪಡಿಸಿಕೊಳ್ಳಲಾಗಿದೆ.

ತೆರಿಗೆ ವಂಚನೆ ಪ್ರಕರಣದಿಂದ ಶ್ರೀನಿವಾಸರಾವ್‌ ಎಂಬುವವರನ್ನು ಪಾರುಮಾಡಲು ₹ 14 ಲಕ್ಷ ಲಂಚ ಪಡೆಯುತ್ತಿದ್ದಾಗ ಈ ಅಧಿಕಾರಿಗಳು ಸಿಬಿಐ ಬಲೆಗೆ ಬಿದ್ದಿದ್ದರು.

ಜಯನಗರದ ಕಾಫಿ ಕ್ಲಬ್‌ವೊಂದರಲ್ಲಿ‘ವಿಂಡ್ಸರ್‌ ಎಡಿಫೈಸಸ್‌ ಪ್ರೈವೇಟ್‌ ಲಿ’. ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸರಾವ್‌ ಅವರಿಂದ ಐಟಿಒ ಎಚ್‌.ಆರ್.ನಾಗೇಶ್‌ ಲಂಚದ ಹಣ ಪಡೆಯುವಾಗ ಸಿಬಿಐನ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದರು. ಬಳಿಕ ಇನ್ನೊಬ್ಬ ಐಟಿಒ ನರೇಂದರ್‌ ಸಿಂಗ್‌ ಅವರನ್ನು ಬಂಧಿಸಲಾಯಿತು. ಇಬ್ಬರನ್ನು ಗುರುವಾರ ಕೋರ್ಟ್‌ಗೆ ಹಾಜರುಪಡಿಸಲಾಯಿತು.

ಆರೋಪಿಗಳನ್ನು ಸೋಮವಾರದವರೆಗೆ ಸಿಬಿಐ ವಶಕ್ಕೆ ಕೊಡಲಾಗಿದೆ. ಸಿಬಿಐ ಅಧಿಕಾರಿಗಳು ಬುಧವಾರ ರಾತ್ರಿ ನಾಗೇಶ್‌ ಮತ್ತು ಸಿಂಗ್‌ ಅವರ ಮನೆ ಹಾಗೂ ಕಚೇರಿಗಳನ್ನು ಜಾಲಾಡಿದರು. ನಾಗೇಶ್‌ ಮನೆಯಲ್ಲಿ ₹ 1,35,49,650 ಹಣ ಸಿಕ್ಕಿತು. ಗುರುವಾರ ಬೆಳಿಗ್ಗೆ ಇದೇ ಅಧಿಕಾರಿಯ ಬ್ಯಾಂಕ್‌ ಲಾಕರ್‌ಗಳನ್ನು ತ‍‍‍ಪಾಸಣೆ ಮಾಡಿದಾಗ ₹ 30 ಲಕ್ಷ ನಗದು ಮತ್ತು 1,450 ಅಮೆರಿಕ ಡಾಲರ್‌ ದೊರೆತಿದೆ. ಆಸ್ತಿಗೆ ಸಂಬಂಧಿಸಿದ ದಾಖಲೆಗಳು, ಮೊಬೈಲ್‌ ಹಾಗೂ ಪೆನ್‌ಡ್ರೈವ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ನಾಗೇಶ್‌ ಮೂಲತಃ ಬೆಂಗಳೂರಿನವರು.

ಪ್ರಕರಣವೇನು?: ಐ.ಟಿ. ಆಸ್ತಿ ಸಮೀಕ್ಷೆ ನಡೆಸಿದ ವೇಳೆ ಶ್ರೀನಿವಾಸರಾವ್‌ ಅವರುಸರ್ವೋತ್ತಮ ರಾಜು ಎಂಬುವವರಿಗೆ ನೀಡಿದ್ದ ₹25 ಲಕ್ಷ ಮತ್ತು ₹15 ಲಕ್ಷದ ಎರಡು ರಶೀದಿಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಸಂಬಂಧ ಶ್ರೀನಿವಾಸ ರಾವ್‌ ಅವರಿಗೆ 11 ರಂದು ವಿಚಾರಣೆಗೆ ಹಾಜರಾಗುವಂತೆ ನಾಗೇಶ್‌ ನೋಟಿಸ್‌ ನೀಡಿದ್ದರು. ಆಮೇಲೆ ಮೇಲಿಂದ ಮೇಲೆ ಅವರನ್ನು ಐ.ಟಿ ಕಚೇರಿಗೆ ಕರೆಸಲಾಗಿತ್ತು. ಐ.ಟಿ ಹೆಚ್ಚುವರಿ ಕಮಿಷನರ್‌ ಬಳಿಯೂ ಕರೆದುಕೊಂಡು ಹೋಗಲಾಗಿತ್ತು.

ರಾಜಕಾರಣಿಗೆ ಸೇರಿದ ₹1.76 ಕೋಟಿ ವಶ
ಚಿಕ್ಕಬಳ್ಳಾಪುರ:
ಬಾಗೇಪಲ್ಲಿ ಬಳಿ ಇರುವ ಟೋಲ್ ಪ್ಲಾಜಾದ (ರಾಷ್ಟ್ರೀಯ ಹೆದ್ದಾರಿ–7) ಮೇಲೆ ಗುರುವಾರ ಜಂಟಿ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆ ಹಾಗೂಚುನಾವಣಾಧಿಕಾರಿಗಳು ₹1.76 ಕೋಟಿ ಹಣ ಜಪ್ತಿ ಮಾಡಿದರು. ಹೈದರಾಬಾದ್‌ನ ಚಾಬ್ರಾಸ್‌ ಅಸೋಸಿಯೇಟ್ಸ್‌ ಕಂಪನಿ ಇಲ್ಲಿ ಟೋಲ್ ಸಂಗ್ರಹಿಸುತ್ತಿದೆ.

‘ಮತದಾರರಿಗೆ ಹಂಚುವ ಉದ್ದೇಶಕ್ಕಾಗಿ ಹಣ ಸಂಗ್ರಹಿಸಿ ಇಟ್ಟಿದ್ದಾರೆ’ ಎಂದು ಆಂಧ್ರಪ್ರದೇಶದ ಪೊಲೀಸ್‌ ಅಧಿಕಾರಿಗಳು ಜಿಲ್ಲೆಯ ಚುನಾವಣಾಧಿಕಾರಿ ಗಮನಕ್ಕೆ ತಂದಿದ್ದರು.

ಗುತ್ತಿಗೆದಾರರ ಮನೆಯಿಂದ₹3.79 ಕೋಟಿ ವಶ
ಜೆಡಿಎಸ್‌ ಮುಖಂಡರು ಹಾಗೂ ಅವರ ಆಪ್ತರ ಮನೆಗಳ ಮೇಲೆ ಮಾರ್ಚ್‌ 28ರಂದು ಐ.ಟಿ ಅಧಿಕಾರಿಗಳು ಏಕಕಾಲಕ್ಕೆ ನಡೆಸಿದ ದಾಳಿ ಸಮಯದಲ್ಲಿ₹ 2.1 ಕೋಟಿ ನಗದು ಹಾಗೂ₹ 1.69 ಕೋಟಿ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

**

ಆದಾಯ ತೆರಿಗೆ ಅಧಿಕಾರಿಗಳೇ ದರೋಡೆಕೋರರು. ₹15 ಲಕ್ಷ ಲಂಚ ಪಡೆಯುವಾಗ ಸಿಕ್ಕಿ ಬಿದ್ದಿದ್ದು, ಅವರ ಮನೆಯಲ್ಲಿ ₹1.5 ಕೋಟಿ ಪತ್ತೆಯಾಗಿದೆ. ಅವರೇನು ಸತ್ಯ ಹರಿಶ್ಚಂದ್ರರಲ್ಲ.
-ಎಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.