
ಬೆಂಗಳೂರು: ಕ್ವಾಂಟಮ್ ತಂತ್ರಜ್ಞಾನ, ಸೆಮಿಕಂಡಕ್ಟರ್ ವಲಯದ ಅಭಿವೃದ್ಧಿಗೆ ಮಲೇಷ್ಯಾದ ಪೆನಾಂಗ್ ರಾಜ್ಯ ಹಾಗೂ ಕರ್ನಾಟಕ ಪರಸ್ಪರ ಕೈಜೋಡಿಸಲಿವೆ.
ಪೆನಾಂಗ್ ಉಪಮುಖ್ಯಮಂತ್ರಿ ಜಗದೀಪ್ ಸಿಂಗ್ ದಿಯೊ ನೇತೃತ್ವದ ಉನ್ನತಮಟ್ಟದ ನಿಯೋಗದೊಂದಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು, ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಮಂಗಳವಾರ ಚರ್ಚೆ ನಡೆಸಿದರು.
ಬಳಿಕ ಮಾತನಾಡಿದ ಪ್ರಿಯಾಂಕ್ ಖರ್ಗೆ, ‘ತಂತ್ರಜ್ಞಾನ ಕ್ಷೇತ್ರಗಳಲ್ಲಿನ ರಾಜ್ಯದ ಪ್ರಗತಿ ಪಥದ ಮಾದರಿಯು ಶಿಕ್ಷಣ, ಕೌಶಲ, ನವೋದ್ಯಮ, ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಉದ್ಯಮ ವಲಯಗಳ ಯಶಸ್ಸಿಗೆ ಸಂಘಟಿತ ಕೆಲಸ ಕಾರಣ. ಹಾರ್ಡ್‌ವೇರ್ ಮತ್ತು ಸೆಮಿಕಂಡಕ್ಟರ್ ತಯಾರಿಕೆ ವಲಯದಲ್ಲಿ ಸರಿಸಾಟಿ ಇಲ್ಲದ ಸಾಧನೆಯನ್ನು ಪೆನಾಂಗ್ ಸಾಧಿಸಿದೆ. ಕರ್ನಾಟಕವು ಚಿಪ್ ವಿನ್ಯಾಸ, ಸಾಫ್ಟ್‌ವೇರ್ ಮತ್ತು ಅತ್ಯಾಧುನಿಕ ಎಂಜಿನಿಯರಿಂಗ್ ಪ್ರತಿಭಾನ್ವಿತರ ನೆಲೆಯಾಗಿದೆ. ಜಾಗತಿಕ ಸೆಮಿಕಂಡಕ್ಟರ್ ಕ್ಷೇತ್ರದ ತಂತ್ರಜ್ಞರ ಅಗತ್ಯವನ್ನು ಕರ್ನಾಟಕ ಮತ್ತು ಪೆನಾಂಗ್ ಜತೆಯಾಗಿ ಈಡೇರಿಸಲು ಸಾಧ್ಯವಿದೆ’ ಎಂದು ಅಭಿಪ್ರಾಯಪಟ್ಟರು.
ಬೋಸರಾಜು ಮಾತನಾಡಿ, ‘ಯುವಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಕರ್ನಾಟಕ ರೂಪಿಸಿರುವ ಕ್ವಾಂಟಮ್ ಕ್ರಿಯಾ ಯೋಜನೆಯಲ್ಲಿ ಭಾಗಿಯಾಗಲು ಪೆನಾಂಗ್ ನಿಯೋಗ ಆಸಕ್ತಿ ತೋರಿದೆ. ಬೆಂಗಳೂರು ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಹಾಗೂ ಪೆನಾಂಗ್ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಹೊಂದಿರುವ ಪರಿಣತಿಯ ಸಮ್ಮಿಲನದಿಂದ ವಿಪುಲ ಅವಕಾಶಗಳು ಸೃಷ್ಟಿಯಾಗಲಿವೆ. ನಗರದ ತ್ಯಾಜ್ಯ ನೀರನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ, ಕೋಲಾರ ಮತ್ತು ಚಿಕ್ಕಬಳ್ಳಾಪುರದಂತಹ ಬರಪೀಡಿತ ಜಿಲ್ಲೆಗಳ ಕೆರೆಗಳಿಗೆ ತುಂಬಿಸುತ್ತಿರುವ ಕರ್ನಾಟಕದ ಯೋಜನೆಗೆ ಪೆನಾಂಗ್ ನಿಯೋಗ ಮೆಚ್ಚುಗೆ ವ್ಯಕ್ತಪಡಿಸಿದೆ’ ಎಂದರು.
ಜಗದೀಪ್ ಸಿಂಗ್ ದಿಯೊ ಮಾತನಾಡಿ, ‘ಪೆನಾಂಗ್ ಭೌಗೋಳಿಕವಾಗಿ ಸಣ್ಣ ರಾಜ್ಯವಾದರೂ ಜಾಗತಿಕ ಸೆಮಿಕಂಡಕ್ಟರ್ ಶಕ್ತಿಯಾಗಿ ಹೊರಹೊಮ್ಮಿದೆ. ಅದಕ್ಕೆ ಬಲವಾದ ಉದ್ಯಮ ಮತ್ತು ಸಂಶೋಧನಾ ಸಹಭಾಗಿತ್ವ ಕಾರಣ. ಉದ್ಯಮಗಳಿಗೆ ನೇರವಾಗಿ ಬೆಂಬಲ ನೀಡುವಂತಹ ಸಂಶೋಧನಾ ಪರಿಸರ ವ್ಯವಸ್ಥೆಯನ್ನು ವಿಶ್ವವಿದ್ಯಾಲಯ ನಿರ್ಮಿಸಿದೆ. ಇದೇ ಮಾದರಿಯನ್ನು ಕರ್ನಾಟಕ ಮತ್ತು ಪೆನಾಂಗ್ ನಡುವೆ ವಿಸ್ತರಿಸಲಾಗುವುದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.