
ಬೆಂಗಳೂರು: ಅಸ್ಸಾಂನಲ್ಲಿ ಸೆಮಿಕಂಡಕ್ಟರ್ ಘಟಕ ಸ್ಥಾಪನೆಗೆ ಒಪ್ಪಿಗೆ ದೊರೆತ ಬಗ್ಗೆ ರಾಜ್ಯದ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಮಾಡಿದ್ದ ಆರೋಪ ಮತ್ತು ಅದಕ್ಕೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ನೀಡಿದ್ದ ಪ್ರತಿಕ್ರಿಯೆಯು ಈಗ ತಾರಕಕ್ಕೆ ಏರಿದೆ. ಇಬ್ಬರು ನಾಯಕರೂ ಈಗ ವೈಯಕ್ತಿಕ ಟೀಕೆಗೆ ಇಳಿದಿದ್ದಾರೆ.
ಅಸ್ಸಾಂಗೆ ಸೆಮಿಕಂಡಕ್ಟರ್ ಘಟಕ ಹೋದುದರ ಬಗ್ಗೆ ಸೋಮವಾರ ಸುದ್ದಿಗಾರರು ಪ್ರಶ್ನಿಸಿದಾಗ ಪ್ರಿಯಾಂಕ್ ಖರ್ಗೆ ಅವರು, ‘ಬೆಂಗಳೂರಿಗೆ ಬರಲು ಆಸಕ್ತಿ ಹೊಂದಿದ್ದ ಕಂಪನಿಗಳಿಗೂ ಒತ್ತಡ ಹೇರಿ ಗುಜರಾತ್ ಮತ್ತು ಅಸ್ಸಾಂಗೆ ಹೋಗುವಂತೆ ಮಾಡಲಾಗಿದೆ. ಗುಜರಾತ್ ಮತ್ತು ಅಸ್ಸಾಂನಲ್ಲಿ ಏನಿವೆ? ಅಲ್ಲಿ ಪ್ರತಿಭೆಗಳು ಇದ್ದಾರೆಯೇ’ ಎಂದು ಪ್ರಶ್ನಿಸಿದ್ದರು.
ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದ ಹಿಮಂತ ಬಿಸ್ವ ಶರ್ಮಾ, ‘ಪ್ರಿಯಾಂಕ್ ಖರ್ಗೆ ಮೊದಲ ದರ್ಜೆಯ ಮುಠ್ಠಾಳ’ ಎಂದಿದ್ದರು. ‘ಜತೆಗೆ, ಅಸ್ಸಾಂನ ಜನತೆಗೆ ತೀವ್ರ ಅವಮಾನ ಮಾಡಿದ್ದಾರೆ. ಆದರೆ ಇಲ್ಲಿನ ಕಾಂಗ್ರೆಸ್ ನಾಯಕರು ಪ್ರಿಯಾಂಕ್ ಖರ್ಗೆ ಮಾತನ್ನು ಖಂಡಿಸಿಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಪ್ರಿಯಾಂಕ್, ‘ನನ್ನ ಮಾತನ್ನು ತಿರುಚುವ ಕೆಲಸವನ್ನು ಬಿಜೆಪಿ ನಾಯಕರು ಮುಂದುವರೆಸಿದ್ದಾರೆ. ಕರ್ನಾಟಕಕ್ಕೆ ಬರಬೇಕಿದ್ದ ಕಂಪನಿಗಳನ್ನು ಬೇರೆ ರಾಜ್ಯಗಳತ್ತ ಹೇಗೆ ದಬ್ಬಲಾಗುತ್ತಿದೆ ಎಂಬುದನ್ನು ನಾನು ಪ್ರಶ್ನಿಸಿದ್ದೆ. ಅವರು ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಇದನ್ನು ವಿವಾದ ಮಾಡುತ್ತಿದ್ದಾರೆ’ ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದರು.
ಜತೆಗೆ, ‘ಹತ್ತು ವರ್ಷಗಳಿಂದ ಬಿಜೆಪಿ ಅಸ್ಸಾಂನಲ್ಲಿ ಆಡಳಿತ ನಡೆಸುತ್ತಿದೆ. ಹೀಗಿದ್ದೂ ಅಭಿವೃದ್ಧಿ ಸ್ಥಾನದಲ್ಲಿ ಕಡೆಯ ಐದನೇ ಸ್ಥಾನದಲ್ಲಿ ಅಸ್ಸಾಂ ಇದೆ. ನಾವು ಅಲ್ಲಿ ಅಧಿಕಾರಕ್ಕೆ ಬಂದರೆ, ಯುವ ಮತ್ತು ಔದ್ಯೋಗಿಕ ಸ್ನೇಹಿ ವಾತಾವರಣ ನಿರ್ಮಿಸುತ್ತೇವೆ’ ಎಂದಿದ್ದರು.
ಟಾಟಾ ಟ್ರಸ್ಟ್‌ನ ಬೆಂಗಳೂರು ಕೇಂದ್ರದಲ್ಲಿ ಅಸ್ಸಾಂನ 1,500 ಯುವಕ– ಯುವತಿಯರಿಗೆ ಕೌಶಲ ತರಬೇತಿ ನೀಡಲಾಗುತ್ತಿದೆ ಎಂದು ಹಿಮಂತ ಅವರು ಈ ಹಿಂದೆ ಮಾಡಿದ್ದ ‘ಎಕ್ಸ್’ಪೋಸ್ಟ್ ಅನ್ನು ಪ್ರಿಯಾಂಕ್ ಖರ್ಗೆ, ಮಂಗಳವಾರ ಬೆಳಿಗ್ಗೆ ಮರುಪೋಸ್ಟ್ ಮಾಡಿದರು.
ಜತೆಗೆ, ‘ಅಸ್ಸಾಂನ ಯುವಜನರಿಗೆ ಬೆಂಗಳೂರಿನಲ್ಲಿ ತರಬೇತಿ ಸಿಗುತ್ತಿರುವ ಬಗ್ಗೆ ನೀವೇ ಮಾಡಿದ್ದ ಪೋಸ್ಟ್ ಅನ್ನು ನೆನಪಿಸಿಕೊಳ್ಳಿ. ಸರಳವಾಗಿ ಒಂದು ಧನ್ಯವಾದ ಹೇಳಿ, ಇದನ್ನು ಮುಗಿಸಬಹುದಿತ್ತು. ಆದರೆ ಯಥಾ ಪ್ರಕಾರ ರಾಜಕೀಯ ಮಾಡಿದಿರಿ. ಆದರೆ ಸುಳ್ಳು ಹೇಳುವುದು ಮತ್ತು ಜನರಿಗೆ ಮೋಸ ಮಾಡುವುದು ನಿಮ್ಮ ಸಹಜ ಗುಣ ಅಲ್ಲವೇ’ ಎಂದು ಛೇಡಿಸಿದರು.
ಮಂಗಳವಾರ ಸುದ್ದಿಗಾರರ ಜತೆ ಮಾತನಾಡುತ್ತಾ ಹಿಮಂತ ಅವರು, ಖರ್ಗೆ ಕುಟುಂಬ ಅಸ್ಸಾಂಗೆ ಯಾವಗಾಲೂ ಅವಮಾನ ಮಾಡುತ್ತದೆ ಎಂದರು.
ಖರ್ಗೆ ಅವರ ಇಡೀ ಕುಟುಂಬ ಅಸ್ಸಾಂಗೆ ಅವಮಾನ ಮಾಡುತ್ತಲೇ ಇದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಗ ಪ್ರಿಯಾಂಕ್ ಖರ್ಗೆ ನಮ್ಮ ಜನರಿಗೆ ಅವಮಾನ ಮಾಡಿದ್ದಾರೆ. ಅಸ್ಸಾಂನ ಭೂಪೇನ್ ಹಜಾರಿಕಾ ಅವರಿಗೆ ಭಾರತ ರತ್ನ ಬಂದಿದ್ದಾಗ ಮಲ್ಲಿಕಾರ್ಜುನ ಖರ್ಗೆ ಬಹಳ ತುಚ್ಛವಾಗಿ ಮಾತನಾಡಿದ್ದರು. ಈಗ ಅವರ ಮಗ ಪ್ರಿಯಾಂಕ್ ಖರ್ಗೆ ಅಸ್ಸಾಂ ಯುವಜನರಲ್ಲಿ ಪ್ರತಿಭೆಯೇ ಇಲ್ಲ ಎಂದಿದ್ದಾರೆ. ಅಸ್ಸಾಂನ ಸಂಸ್ಕೃತಿ ಮತ್ತು ಪ್ರತಿಭೆ ಬಗ್ಗೆ ಈ ಇಬ್ಬರಿಗೂ ಕಾಂಗ್ರೆಸ್ ತಿಳುವಳಿಕೆ ಹೇಳಬೇಕು.-ಹಿಮಂತ ಬಿಸ್ವ ಶರ್ಮಾ, ಅಸ್ಸಾಂ ಮುಖ್ಯಮಂತ್ರಿ
ಅಸ್ಸಾಂನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳು ಆಗಿಲ್ಲ. ಆಡಳಿತದ ಹೆಸರಿನಲ್ಲಿ ಹಿಮಂತ ಬಿಸ್ವ ಶರ್ಮಾ ಅವರು ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಅಸ್ಸಾಂನಲ್ಲಿ ನಡೆದಿರಬಹುದಾದ ಎಲ್ಲ ಭ್ರಷ್ಟಾಚಾರಗಳ ಮೂಲ ಕೆದಕುತ್ತಾ ಹೋದರೆ ಅವು ಹಿಮಂತ ಅವರ ಮನೆ ಬಾಗಿಲಿಗೆ ಹೋಗಿ ನಿಲ್ಲುತ್ತವೆ. ಅಲ್ಲಿನ ಯುವಜನರು ಅಸ್ಸಾಂ ತೊರೆದು ಬೆಂಗಳೂರಿಗೇಕೆ ಬರುತ್ತಿದ್ದಾರೆ? ಆ ಯುವಜನರಿಗಾಗಿ ತಾನು ಏನು ಮಾಡಿದ್ದೇನೆ ಎಂದು ಹಿಮಂತ ಅವರು ಆತ್ಮಾವಲೋಕನ ಮಾಡಿಕೊಳ್ಳಲಿ.-ಪ್ರಿಯಾಂಕ್ ಖರ್ಗೆ, ಮಾಹಿತಿ ತಂತ್ರಜ್ಞಾನ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.